
ಹೊಸಪೇಟೆ: ನೆಲ, ಜಲ, ಭಾಷೆ ವಿಚಾರದಲ್ಲಿ ಕಲಾವಿದರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದನ್ನು ನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ಸಮರ್ಥಿಸಿಕೊಂಡಿದ್ದಾರೆ.
ಹಂಪಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಭಾಗವಹಿಸುವುದಕ್ಕೂ ಮುನ್ನ ಹಂಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಹೇಬ್ರು ಹೇಳಿದ್ರಲ್ಲಿ ಏನೂ ತಪ್ಪಿಲ್ಲ. ಅವರು ಹೇಳಿದ್ದು ಸರಿಯಾಗಿದೆ. ಕಲಾವಿದರಾಗಿ ನಮಗೆ ಒಂದು ಜವಾಬ್ದಾರಿ ಇದ್ದೇ ಇರುತ್ತದೆ. ಡಾ. ರಾಜ್ಕುಮಾರ್ ಅವರನ್ನು ನೋಡಿ.. ಕನ್ನಡ ಭಾಷೆಗಾಗಿ ಅವರು ಎಷ್ಟು ಹೋರಾಟ ಮಾಡಿದ್ದಾರೆ. ಸಿನಿಮಾ ಮತ್ತು ರಾಜಕೀಯದ ನಡುವೆ ಮೊದಲು ಇದ್ದ ಬೆಂಬಲ, ಪ್ರೋತ್ಸಾಹ ಇವತ್ತು ನನಗೆ ಕಾಣಿಸುತ್ತಿಲ್ಲ’ ಎಂದಿದ್ದಾರೆ ರಮ್ಯಾ.
ಉತ್ತರ ಕರ್ನಾಟಕದ ನದಿಗಳು, ಜಲಾಶಯಗಳ ಬಗ್ಗೆಯೂ ಕಲಾವಿದರು ಮಾತನಾಡಬೇಕು, ನಮಗೆ ಒಂದು ಜವಾಬ್ದಾರಿ ಇರುತ್ತದೆ ಎಂದು ಓರ್ವ ನಟಿಯಾಗಿ ನಾನು ಭಾವಿಸುತ್ತೇನೆ. ನಮ್ಮ ಭಾಷೆ, ಜಾಗ, ಸಂಸ್ಕೃತಿಗೆ ನಾವು ಯಾವಾಗಲೂ ಬೆಂಬಲ ನೀಡಬೇಕು. ಹಾಗಾಗಿ ಡಿಕೆ ಶಿವಕುಮಾರ್ ಅವರು ಹೇಳಿದ್ದರಲ್ಲಿ ನನಗೆ ಏನೂ ತಪ್ಪು ಎನಿಸಲಿಲ್ಲ’ ಎಂದು ರಮ್ಯಾ ಅವರು ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡದ ನೆಲ, ಜಲ, ಭಾಷೆ ವಿಷಯಕ್ಕೆ ಕಲಾವಿದರು ಬೆಂಬಲ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೇ ಇಂಥವರ ನಟ್ಟು ಬೋಲ್ಟ್ ಟೈಟ್ ಮಾಡುವುದು ಕೂಡ ತಮಗೆ ಗೊತ್ತು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ಚರ್ಚೆ ಜೋರಾಗಿ ನಡೆಯುತ್ತಿದೆ.
Advertisement