
ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಕಟ್ಟ ಕಡೆಯ ಗ್ರಾಮ ಪಾಲಾರ್. ಈ ಸೋಲಿಗರ ಹಾಡಿ ಈವರೆಗೂ ವಿದ್ಯುತ್ ಸಂಪರ್ಕ ಇಲ್ಲದೆ ಅಂಧಕಾರದಲ್ಲಿ ಮುಳುಗಿತ್ತು. ಮಹದೇಶ್ವರ ಬೆಟ್ಟದ ಅರಣ್ಯದೊಳಗೆ 75 ಕ್ಕೂ ಹೆಚ್ಚು ಸೋಲಿಗರು ಇರುವ ಈ ಹಾಡಿಗೆ ಸ್ವಾಂತಂತ್ರ್ಯ ದೊರೆತು 78 ವರ್ಷದ ಬಳಿಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಹಲವು ದಶಕಗಳಿಂದ ಸೀಮೆಎಣ್ಣೆ ದೀಪಗಳು ಮತ್ತು ಟಾರ್ಚ್ ದೀಪದದೊಂದಿಗೆ ಕತ್ತಲೆಯಲ್ಲಿ ವಾಸಿಸುತ್ತಿದ್ದ 75 ಮನೆಗಳನ್ನು ಹೊಂದಿರುವ ಬುಡಕಟ್ಟು ಸಮುದಾಯ ಅಂತಿಮವಾಗಿ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿದೆ.
ಪಾಲಾರ್ ನದಿಯ ದಡದಲ್ಲಿರುವ ದಂತಚೋರ ವೀರಪ್ಪನ್ ಅಡಗುತಾಣಗಳಲ್ಲಿ ಒಂದಾದ ಹಾಡಿಗೆ, ಆನೆಗಳು, ಸಾಂಬಾರ್, ಜಿಂಕೆ ಮತ್ತು ಇತರ ಪ್ರಾಣಿಗಳ ಹೆಚ್ಚಿನ ಸಂಚಾರ ಇರುವುದರಿಂದ ವನ್ಯಜೀವಿಗಳಿಗೆ ಅಪಾಯವಾಗಬಹುದು ಎಂಬ ಭಯದಿಂದ ಕಂಬಗಳನ್ನು ನಿರ್ಮಿಸಲು ಅಥವಾ ವಿದ್ಯುತ್ ತಂತಿಗಳನ್ನು ತರಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಇಷ್ಟು ವರ್ಷಗಳ ಕಾಲ ವಿದ್ಯುತ್ ಸಂಪರ್ಕ ಲಭ್ಯವಿರಲಿಲ್ಲ. ಸೇಲಂ ಜಿಲ್ಲೆಯ ಹತ್ತಿರದ ಗೋವಿಂದಪಾಡಿ ಮತ್ತು ಕೊಲತ್ತೂರ್ ಗ್ರಾಮದಲ್ಲಿ ಅಥವಾ ವೀರಪ್ಪನ್ ಗ್ರಾಮವಾದ ಗೋಪಿನಾಥಂನಲ್ಲಿ ವಾಸಿಸುತ್ತಿದ್ದ ಸೋಲಿಗರ ಕುಟುಂಬಗಳು ಬ್ಲಾಕ್ ಮಾರ್ಕೆಟ್ ನಲ್ಲಿ ಸೀಮೆಎಣ್ಣೆಯನ್ನು ಖರೀದಿಸಬೇಕಾಗಿತ್ತು.
ಶಿವರಾತ್ರಿ ಶುಭ ಗಳಿಗೆಯಲ್ಲಿ ಮಾದಪ್ಪ ನಮ್ಮ ಮೇಲೆ ದಯೆ ತೋರಿಸಿದ್ದಾರೆ, ಹೀಗಾಗಿ ನಮ್ಮ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ದೊರೆತಿದೆ, ಇನ್ನು ಮುಂದೆ ನಮ್ಮ ಮಕ್ಕಳು ಮತ್ತು ಸಹ ಗ್ರಾಮಸ್ಥರು ಸಂತೋಷವಾಗಿರುತ್ತಾರೆ. ವಿದ್ಯುತ್ ಬಲ್ಬ್‌ಗಳು ಯಾವಾಗ ಬೇಕಾದರೂ ಬೆಳಗುತ್ತವೆ ಮತ್ತು ನಾವು ಸೀಮೆಎಣ್ಣೆ ದೀಪಗಳಿಗೆ ವಿದಾಯ ಹೇಳಬಹುದು ಎಂದು ಬುಡಕಟ್ಟು ಜನಾಂಗದ ಮಾದಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಪೂರೈಕೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತನ್ನ ಕೆಲಸ ಬಿಟ್ಟು ಬಂದಿದ್ದ ಮತ್ತೊಬ್ಬ ಗ್ರಾಮಸ್ಥರಾದ ಮುರ್ಗೇಶ್ ಮಾತನಾಡಿ ಪ್ರತಿದಿನ ತಮ್ಮ ಹಾಡಿಗೆ ಬರುವ ಆನೆಗಳಿಂದ ರಕ್ಷಿಸಲು ಬೀದಿ ದೀಪಗಳನ್ನು ಅಳವಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಅನೇಕ ಬುಡಕಟ್ಟು ಗ್ರಾಮಗಳ ಅವರ ಸಂಬಂಧಿಕರು ಮತ್ತು ಸ್ನೇಹಿತರು ಹಾಡಿಯಲ್ಲಿ ಸಂಭ್ರಮ ಆಚರಿಸಲು ಒಟ್ಟುಗೂಡಿದ್ದಾರೆ ಎಂದು ಅವರು ಹೇಳಿದರು.
ಈ ಪ್ರದೇಶದಲ್ಲಿ ಕತ್ತಲೆಯಲ್ಲಿ ಮುಳುಗಿರುವ 22 ಬುಡಕಟ್ಟು ಗ್ರಾಮಗಳಿದ್ದು, ವಿದ್ಯುತ್ ಸರಬರಾಜು, ರಸ್ತೆಗಳು ಮತ್ತು ಕುಡಿಯುವ ನೀರಿನಂತಹ ಮೂಲಭೂತ ಸೌಲಭ್ಯಗಳಿಲ್ಲ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (ಸೆಸ್ಕಾಮ್) ಕಳೆದ ವರ್ಷ ಡಿಸೆಂಬರ್‌ನಲ್ಲಿ 41 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಸರಬರಾಜು ಒದಗಿಸಲು ಯೋಜನೆ ಕೈಗೆತ್ತಿಕೊಂಡಿತು. ಎಲ್ಲಾ 75 ಹಳ್ಳಿಗಳಿಗೆ ಭೂಗತ ವಿದ್ಯುತ್ ಕೇಬಲ್‌ಗಳನ್ನು ಹಾಕಲು ಅರಣ್ಯ ಅಧಿಕಾರಿಗಳನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸೆಸ್ಕಾಮ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ ಹೇಳಿದರು.
Advertisement