ಗೃಹಜ್ಯೋತಿ ಯೋಜನೆ: ಹೊಸ ಗ್ರಾಹಕರಿಗೆ 'ಅರ್ಧ ಜ್ಯೋತಿ' ಭಾಗ್ಯ; ಇದರಿಂದ ಸರ್ಕಾರಕ್ಕೆ 600 ಕೋಟಿ ರೂ ಉಳಿತಾಯ!

ಈ ಹಿಂದೆ ಪ್ರತಿ ಗೃಹ ಬಳಕೆದಾರರು ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನ ಪೂರ್ಣ ಲಾಭ ಪಡೆಯುತ್ತಿದ್ದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿಗೆ ಷರತ್ತು ವಿಧಿಸಲಾಗಿದೆ. ಹೌದು... ಈ ಹಿಂದೆ ಪ್ರತಿ ಗೃಹ ಬಳಕೆದಾರರು ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನ ಪೂರ್ಣ ಲಾಭ ಪಡೆಯುತ್ತಿದ್ದರು. ಆದರೆ ಇದೀಗ ಹೊಸದಾಗಿ ಮನೆ ಕಟ್ಟಿದವರು ಹಾಗೂ ಬಾಡಿಗೆ ಮನೆ ಬದಲಾಯಿಸಿದವರಿಗೆ ಈ ಲಾಭ ಸಿಗುತ್ತಿಲ್ಲ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚಿಸಿದ ಬಳಿಕ 2022–23ರ ಆರ್ಥಿಕ ವರ್ಷದಲ್ಲಿ ಬಳಕೆ ಮಾಡಿದ ವಿದ್ಯುತ್‌ ಯೂನಿಟ್‌ನ ಸರಾಸರಿ ಪ್ರಮಾಣ ಆಧರಿಸಿ 2023ರ ಜುಲೈ 1ರಿಂದ ಗೃಹಜ್ಯೋತಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿತ್ತು. ಆಗಸ್ಟ್‌ 1ರಿಂದ ಯೋಜನೆಯ ಲಾಭ ಪ್ರತಿ ಗ್ರಾಹಕರಿಗೂ ಸಿಗುತ್ತಿದೆ. ಆದರೆ ಈಗ ಹೊಸತಾಗಿ ವಿದ್ಯುತ್‌ ಸಂಪರ್ಕ ಪಡೆದ ಗ್ರಾಹಕರು ಯೋಜನೆಯ ಪೂರ್ಣ ಲಾಭದಿಂದ ವಂಚಿತರಾಗಿದ್ದಾರೆ.

2024ರ ಜುಲೈಗೆ ಗೃಹ ಜ್ಯೋತಿ ಯೋಜನೆ ಜಾರಿಗೆ ಬಂದು ಒಂದು ವರ್ಷವಾಗಿತ್ತು. ಒಂದು ವರ್ಷ ಪೂರ್ಣಗೊಂಡ ಬಳಿಕ ಸರಾಸರಿ ವಿದ್ಯುತ್‌ ಯೂನಿಟ್‌ ಬಳಕೆಯನ್ನು ಪರಿಷ್ಕರಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಪ್ರಕಟಿಸಿದ್ದರು. ಆದರೆ, ಈವರೆಗೂ ಪರಿಷ್ಕರಣೆ ಆಗಿಲ್ಲ. ಹೀಗಾಗಿ ಹೊಸ ಸಂಪರ್ಕ ಪಡೆದ ಗ್ರಾಹಕರಿಗೆ 'ಬಳಕೆ ಇತಿಹಾಸ' ಇಲ್ಲದೇ ಇರುವುದರಿಂದ ಅಂತಹ ಬಳಕೆದಾರರು, ರಾಜ್ಯದ ಒಟ್ಟು ಗ್ರಾಹಕರು ಬಳಕೆ ಮಾಡುತ್ತಿದ್ದ ವಿದ್ಯುತ್‌ ಪ್ರಮಾಣದ ಸರಾಸರಿ ಲೆಕ್ಕ ಹಾಕಿ, ತಿಂಗಳಿಗೆ ಗರಿಷ್ಠ 53 ಯೂನಿಟ್‌ ಮತ್ತು ಅದಕ್ಕೆ ಶೇ 10ರಷ್ಟು ಹೆಚ್ಚುವರಿ ಸೇರಿ ಒಟ್ಟು 58 ಯೂನಿಟ್‌ 'ಉಚಿತ ವಿದ್ಯುತ್‌' ಯೋಜನೆಯ ಸೌಲಭ್ಯ ಪಡೆಯಲು ಅವಕಾಶವಿದೆ. ಅಂದರೆ, 58 ಯೂನಿಟ್‌ ಮೀರಿ, 200 ಯೂನಿಟ್‌ ಬಳಕೆಯ ಮಿತಿಯ ಒಳಗೆ ವಿದ್ಯುತ್‌ ಬಳಕೆ ಮಾಡುತ್ತಿದ್ದರೂ, ಬಳಸಲಾದ ಹೆಚ್ಚುವರಿ ಯೂನಿಟ್‌ನ ಶುಲ್ಕವನ್ನು ಪಾವತಿಸಲೇಬೇಕಿದೆ.

'ಗೃಹ ಜ್ಯೋತಿ' ಯೋಜನೆಯನ್ನು ಪ್ರಾರಂಭಿಸಿದಾಗ, ಸರ್ಕಾರವು ಕೆಲವು ನಿಯಮಗಳನ್ನು ರೂಪಿಸಿತ್ತು. ಹಿಂದಿನ ಹಣಕಾಸು ವರ್ಷದ ಬಳಕೆಯ ಆಧಾರದ ಮೇಲೆ ಸರಾಸರಿ ಯೂನಿಟ್ ಬಳಕೆಯನ್ನು ವಾರ್ಷಿಕವಾಗಿ ನಿರ್ಧರಿಸಬೇಕು ಮತ್ತು ಇದು ಹೊಸ ಸಂಪರ್ಕಗಳಿಗೂ ಅನ್ವಯಿಸಬೇಕು ಎಂದು ಷರತ್ತು ವಿಧಿಸಲಾಯಿತು. ಪರಿಷ್ಕೃತ ಸರಾಸರಿ ಬಳಕೆಯ ಅಂಕಿ ಅಂಶದ ಕೊರತೆಯಿಂದಾಗಿ, ಹೊಸ ಮನೆಮಾಲೀಕರು 200-ಯೂನಿಟ್ ಮಿತಿಯೊಳಗೆ ಸಂಭಾವ್ಯವಾಗಿ ಬಳಸುತ್ತಿದ್ದರೂ ಸಹ ಕೇವಲ 58 ಯೂನಿಟ್ ಉಚಿತ ವಿದ್ಯುತ್ ಅನ್ನು ಹೊಂದಿದ್ದಾರೆ. ಇದರ ಪರಿಣಾಮವಾಗಿ ಅವರು ಯೋಜನೆಯ ಪೂರ್ಣ ಪ್ರಯೋಜನಗಳು ಸಿಗುತ್ತಿಲ್ಲ.

ಸಂಗ್ರಹ ಚಿತ್ರ
ಗೃಹಜ್ಯೋತಿ ಸಬ್ಸಿಡಿಯನ್ನು ಸರ್ಕಾರವೇ ಪಾವತಿಸುತ್ತಿದೆ, ಗ್ರಾಹಕರಿಂದ ವಸೂಲಿ ಮಾಡಲ್ಲ: ರಾಜ್ಯ ಸರ್ಕಾರ ಸ್ಪಷ್ಟನೆ

ಬಾಡಿಗೆದಾರರಿಗೆ ಸೌಲಭ್ಯದ ಪ್ರಯೋಜನ ಸಿಗಲೆಂದು ಡಿ-ಲಿಂಕ್‌ ವ್ಯವಸ್ಥೆ ಕಲ್ಪಿಸಿದ್ದರಿಂದ ಬಾಡಿಗೆ ಮನೆಯಲ್ಲಿ ಇರುವವರಿಗೆ ಹಿಂದಿನ ಸರಾಸರಿ ಬಳಕೆ ಪ್ರಮಾಣ ಮುಂದುವರಿಸಲು ಅವಕಾಶ ಸಿಕ್ಕಿದೆ. ಬಳಕೆ ಪ್ರಮಾಣವನ್ನು ಪರಿಷ್ಕರಿಸಿದರೆ 500 ರಿಂದ 600 ಕೋಟಿ ರೂಪಾಯಿಯಷ್ಟು ಆರ್ಥಿಕ ಹೊರೆ ಆಗಲಿದೆ. ಹೀಗಾಗಿ, ಸರಾಸರಿ ವಿದ್ಯುತ್‌ ಬಳಕೆ ಪ್ರಮಾಣವನ್ನು ಪರಿಷ್ಕರಿಸುವ ಪ್ರಸ್ತಾವ ಸದ್ಯಕ್ಕೆ ಇಲ್ಲ. ಈ ಬಗ್ಗೆಯೂ ಚರ್ಚೆಯೂ ಆಗಿಲ್ಲ ಎಂದೂ ಮೂಲ ಗಳು ಹೇಳಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com