ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ ಹಿನ್ನೆಲೆಯಲ್ಲಿ ಎಂಟು ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ಬೆಂಗಳೂರು, ಕೋಲಾರ, ತುಮಕೂರು, ಕಲಬುರಗಿ, ವಿಜಯಪುರ, ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ಡಿಪಿಎಆರ್ ಬೆಂಗಳೂರು ಮುಖ್ಯ ಇಂಜಿನಿಯರ್ ಟಿಡಿ ನಂಜುಂಡಪ್ಪ, ಬಿಬಿಎಂಪಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಹೆಚ್ ಬಿ ಕಲ್ಲೇಶಪ್ಪ, ಬೆಸ್ಕಾರ ಕೋಲಾರ ಎಇಇ ಜಿ ನಾಗರಾಜ್, ಲೋಕೋಪಯೋಗಿ ಇಲಾಖೆ ಚೀಫ್ ಇಂಜಿನಿಯರ್ ಜಗನ್ನಾಥ್ ಹಲಿಂಗೆ ಸೇರಿದಂತೆ 8 ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ ಜಗನ್ನಾಥ ಮನೆಯಲ್ಲಿ 2 ಕೆಜಿ ಚಿನ್ನಾಭರಣ, 30 ಎಕರೆ ಜಮೀನು, ಐಷಾರಾಮಿ ವಾಚ್ ಗಳು, ನಗದು ಪತ್ತೆಯಾಗಿದೆ. ಇನ್ನು ನಂಜುಂಡಪ್ಪ ನಿವಾಸದಲ್ಲಿ 841 ಗ್ರಾಂ ಚಿನ್ನ, 3,91 ಲಕ್ಷ ನಗದು ಸೇರಿ ಒಟ್ಟಾರೆ ಒಟ್ಟಾರೆಯಾಗಿ 60,56,00 ರೂ. ಮೌಲ್ಯದ ವಸ್ತುಗಳು ಹಾಗೂ ನಗದು ಪತ್ತೆಯಾಗಿದೆ. ಇದರ ಜೊತೆಗೆ ನಾಲ್ಕು ಕಾರುಗಳು ಹಾಗೂ 5 ಕೋಟಿ ರೂ ಮೌಲ್ಯದ 2 ಮನೆಗಳು ಪತ್ತೆಯಾಗಿವೆ.
ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಪ್ರಕರಣದ ದೂರುದಾರ ಮತ್ತು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇಂದು ಸಿಬಿಐ ತನಿಖೆ ಕೋರಿ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಬಿಎಂ ಅವರಿಗೆ 14 ನಿವೇಶನಗಳ ಹಂಚಿಕೆ ಬಗ್ಗೆ ಲೋಕಾಯುಕ್ತ ಪೊಲೀಸರು ಸರಿಯಾದ ತನಿಖೆ ನಡೆಸಿಲ್ಲ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಈ ಹಿಂದೆ ಮುಡಾ ನಿವೇಶನ ಹಂಚಿಕೆ ಪ್ರಕರಣದ ತನಿಖೆ ನಡೆಸಿದ ಲೋಕಾಯುಕ್ತ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದ್ದು ಅವರ ವಿರುದ್ಧದ ಆರೋಪಗಳನ್ನು ಬೆಂಬಲಿಸುವ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿತ್ತು.
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್ 9ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ವಿವಾಹ ಆರತಕ್ಷತೆ ನಡೆಯಲಿದೆ. ಕನಕಪುರ ರಸ್ತೆಯ ರೆಸಾರ್ಟ್‌ನಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಕೇಂದ್ರ ಸಚಿವ ವಿ ಸೋಮಣ್ಣ, ಮಾಜಿ ಸಂಸದ ಪ್ರತಾಪ್ ಸಿಂಹ, ಹಿರಿಯ ಪತ್ರಕರ್ತ ರಂಗನಾಥ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಆಗಮಿಸಿ ನವದಂಪತಿಯನ್ನು ಆಶೀರ್ವದಿಸಿದರು.
ದಕ್ಷಿಣ ಕನ್ನಡ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ಕುರಿತು ವಿಡಿಯೋ ಮಾಡಿದ್ದ ಯೂಟ್ಯೂಬರ್ ಧೂತ ಸಮೀರ್ ಎಂಡಿ ವಿರುದ್ಧ ಬಳ್ಳಾರಿಯ ಕೌಲ್ ಬಜಾರ್ ಪೊಲೀಸರು ಎಫ್ಐಆರ್ ದಾಖಲಾಗಿದೆ. ಧರ್ಮಸ್ಥಳ ಕ್ಷೇತ್ರ ಹಾಗೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಕೌಲ್ ಬಜಾರ್ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಇಂದು ಸಮೀರ್ ಮನೆಗೆ ಆಗಮಿಸಿದ ಪೊಲೀಸರಿಗೆ ಈ ಪ್ರಕರಣದಲ್ಲಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿ ತೆರಳಿದ್ದಾರೆ. ಸಮೀರ್ ವಿರುದ್ಧ ಪೊಲೀಸ್ ಎಫ್ಐಆರ್ ದಾಖಲಿಸಿರುವುದಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.
ವಿಧಾನಸಭೆಯಲ್ಲಿ ಶಾಸಕರಿಗೆ ವಿಶ್ರಾಂತಿ ಪಡೆಯಲು ರಿಕ್ಲೈನರ್ ಹಾಗೂ ಮಸಾಜ್ ಚೇರ್ ವ್ಯವಸ್ಥೆ ಮಾಡಿದ್ದ ಸ್ಪೀಕರ್ ಯುಟಿ ಖಾದರ್ ಅವರು ಈಗ ಶಾಸಕರಿಗೆ ಟೀ, ಕಾಫಿ ಮತ್ತು ಹರಟೆ ಹೊಡೆಯಲು ಕ್ಲಬ್ ಸ್ಥಾಪಿಸುವ ಬಗ್ಗೆ ಮಾತನಾಡಿದ್ದಾರೆ. ಇಂದು ವಿಧಾನಸಭೆ ಕಲಾಪ ಅರಂಭವಾಗುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸ್ಪೀಕರ್, ಸದನದಲ್ಲಿ ಶಾಸಕರಿಗೆ ಟೀ, ಕಾಫಿ ವ್ಯವಸ್ಥೆ ಮಾಡಲಾಗುವುದು ಎಂದರು. ಸದನ ನಡೆಯುವಾಗ ಶಾಸಕರು ಅನುಭವಿಸುವ ಸಮಸ್ಯೆಗಳ ಬಗ್ಗೆ ನಾವು ಗಮನಹರಿಸಬೇಕು. ಅವರ ಆರೋಗ್ಯವನ್ನು ನಾವು ನೋಡಬೇಕಲ್ವಾ? ಸದನದಲ್ಲಿ ಟೀ, ಕಾಫಿ ಮತ್ತು ಉಟದ ವ್ಯವಸ್ಥೆ ಇಲ್ಲದಿದ್ದರೆ ಅವರು ಹೊರಗೆ ಹೋಗುತ್ತಾರೆ. ಅಲ್ಲದೆ ವಾಪಸ್ ತಡವಾಗಿ ಬರುತ್ತಾರೆ. ಇದರಿಂದ ಕಲಾಪಗಳಿಗೂ ತೊಂದರೆಯಾಗುತ್ತದೆ ಎಂದರು.
Advertisement