ಪ್ರತಿಭಟನೆಯ ನಡುವೆಯೇ ಅರಮನೆ ಮೈದಾನ ಸ್ವಾಧೀನ ತಿದ್ದುಪಡಿ ಮಸೂದೆಗೆ ಅಂಗೀಕಾರ: ವಿಪಕ್ಷಗಳ ಸಭಾತ್ಯಾಗ

ಬೆಂಗಳೂರು ಅರಮನೆಯ ಪ್ರದೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಯಾವುದೇ ಆದೇಶ ಅಥವಾ ತೀರ್ಪಿಗೆ ಅನುಸಾರ ಈಗಾಗಲೇ ನಷ್ಟ ಪರಿಹಾರ ಪಾವತಿಸಿದ್ದರೆ, ಸರ್ಕಾರದ ಕ್ರಮ ರಕ್ಷಿತವಾಗುವುದು.
Bengaluru palace
ಬೆಂಗಳೂರು ಅರಮನೆ ಪ್ರದೇಶ
Updated on

ಬೆಂಗಳೂರು: ಬೆಂಗಳೂರು ಅರಮನೆ ಮೈದಾನ ಪ್ರದೇಶದ ಬಳಕೆ ಮತ್ತು ನಿಯಂತ್ರಣ ಅಧಿಕಾರವನ್ನು ರಾಜ್ಯ ಸರ್ಕಾರದ ಬಳಿಯೇ ಇಟ್ಟುಕೊಳ್ಳುವ ಉದ್ದೇಶದ ‘ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಮಸೂದೆ 2025’ ಕ್ಕೆ ಪ್ರತಿಪಕ್ಷಗಳ ವಿರೋಧ ಮತ್ತು ಸಭಾತ್ಯಾಗದ ಮಧ್ಯೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಿತು.

ಸುಗ್ರೀವಾಜ್ಞೆ ರೂಪದಲ್ಲಿದ್ದ ಮಸೂದೆಗೆ ಕೆಲ ಸಣ್ಣ ತಿದ್ದುಪಡಿಗಳೊಂದಿಗೆ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ವಿಧಾನಸಭೆಯಲ್ಲಿ ಮಂಡಿಸಿದರು. ಬೆಂಗಳೂರು ಅರಮನೆ ಮೈದಾನದ 15.39 ಎಕರೆ ಭೂಮಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲು ಮೈಸೂರು ರಾಜಮನೆತನದ ವಾರಸುದಾರರಿಗೆ 3 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್‌) ನೀಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಆದರೆ, ಅಷ್ಟು ದುಬಾರಿ ಮೌಲ್ಯದ ಟಿಡಿಆರ್‌ ನೀಡುವುದರಿಂದ ಸರ್ಕಾರದ ಆರ್ಥಿಕತೆ ಹಾಗೂ ಭವಿಷ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿರುವ ರಾಜ್ಯ ಸರ್ಕಾರ, ಅದಕ್ಕಾಗಿ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ 2025ನ್ನು ಮಂಗಳವಾರ ಮಂಡಿಸಿತ್ತು. ಈ ವಿಧೇಯಕ ಗುರುವಾರ ಚರ್ಚೆಗೆ ಬಂದಿದ್ದು, ಬಿಜೆಪಿ ವಿರೋಧದ ನಡುವೆಯೇ ಅನುಮೋದನೆ ಪಡೆಯಲಾಯಿತು.

ಬೆಂಗಳೂರು ಅರಮನೆಯ ಪ್ರದೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಯಾವುದೇ ಆದೇಶ ಅಥವಾ ತೀರ್ಪಿಗೆ ಅನುಸಾರ ಈಗಾಗಲೇ ನಷ್ಟ ಪರಿಹಾರ ಪಾವತಿಸಿದ್ದರೆ, ಸರ್ಕಾರದ ಕ್ರಮ ರಕ್ಷಿತವಾಗುವುದು. ಅಂದರೆ, 1996 ರಲ್ಲಿ ಅರಮನೆ ಮೈದಾನವನ್ನು ಸ್ವಾದೀನಕ್ಕೆ ತೆಗೆದುಕೊಂಡಾಗ ಪರಿಹಾರವಾಗಿ ಸರ್ಕಾರ ರಾಜಮನೆತನಕ್ಕೆ 11 ಕೋಟಿ ರು. ನೀಡಿತ್ತು. ಆ ಕ್ರಮವನ್ನು ರಕ್ಷಿಸುವುದು ತಿದ್ದುಪಡಿಯ ಉದ್ದೇಶ ಎಂದು ಪಾಟೀಲ ವಿವರಿಸಿದರು.

Bengaluru palace
ವಿಧಾನಸಭೆ ಅಧಿವೇಶನ: ಬೆಂಗಳೂರು ಅರಮನೆ ವಿಧೇಯಕ ಸೇರಿ 5 ಮಸೂದೆಗಳ ಮಂಡನೆ

ಅಲ್ಲದೇ, ಈ ಅಧಿನಿಯಮವು ಜಾರಿಗೆ ಬರುವುದಕ್ಕೆ ಮೊದಲು ಮತ್ತು ನ್ಯಾಯಾಲಯದ ತೀರ್ಪು ಅಥವಾ ಆದೇಶಕ್ಕೆ ಅನುಗುಣವಾಗಿ ಸರ್ಕಾರದ ತೀರ್ಮಾನದ ಪ್ರಕಾರ ನಷ್ಟ ಪರಿಹಾರ ಪಾವತಿಸಿದ್ದರೆ, ಮತ್ತೊಮ್ಮೆ ನಷ್ಟ ಪರಿಹಾರ ಪಾವತಿಸುವ ಅಗತ್ಯವಿಲ್ಲ. ಅಂದರೆ, ಈಗಾಗಲೇ 11 ಕೋಟಿ ಪರಿಹಾರ ಎಂದು ನಿಗದಿ ಮಾಡಿದ್ದರಿಂದ ಮತ್ತೆ ಪರಿಹಾರ ಮೊತ್ತ ಪರಿಷ್ಕರಣೆ ಮಾಡುವುದರಿಂದ ರಕ್ಷಣೆ ಪಡೆಯಲು ಈ ತಿದ್ದುಪಡಿ ಎಂದು ವಿವರಿಸಿದರು.

ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ‘ರಾಜಮನೆತದವರು ಬಿಜೆಪಿ ಸಂಸದರಾದರು ಎಂಬ ಕಾರಣಕ್ಕೆ ದ್ವೇಷದಿಂದ ಈ ಮಸೂದೆ ತರಲಾಗಿದೆ. ಮೈಸೂರು ರಾಜಮನೆತನ ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನೂ ಯಾರೂ ಮರೆಯುವಂತಿಲ್ಲ. ನಿಮಗೇಕೆ ಬೆಂಗಳೂರು ಅರಮನೆ ಮೇಲೆ ಕಣ್ಣು’ ಎಂದು ಪ್ರಶ್ನಿಸಿದರು.

ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ಅರಮನೆ ಮಾಲೀಕತ್ವದ ವಿಷಯ ಇತ್ಯರ್ಥವಾಗದೇ ಈ ಮಸೂದೆ ಮಂಡಿಸುವುದರಲ್ಲಿ ಅರ್ಥವಿಲ್ಲ. ಸುಪ್ರೀಂಕೋರ್ಟ್‌ ತೀರ್ಪಿನಂತೆ ಟಿಡಿಆರ್‌ ಪಾವತಿ ಮಾಡಿ ಎಂದು ಹೇಳಿದರು.

ಇದಕ್ಕೆ ಬಿಜೆಪಿಯ ಬಿ.ವೈ.ವಿಜಯೇಂದ್ರ, ಬೈರತಿ ಬಸವರಾಜ, ಆರಗ ಜ್ಞಾನೇಂದ್ರ ಧ್ವನಿಗೂಡಿಸಿದರು. ಮಸೂದೆಯನ್ನು ಮತಕ್ಕೆ ಹಾಕುವುದಾಗಿ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದಾಗ, ಸರ್ಕಾರ ಮಸೂದೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com