
ಬೆಳಗಾವಿ: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮಂಡಿಸಿರುವ 2025-2026ನೇ ಸಾಲಿನ ಬಜೆಟ್ ಜನಪರವಾಗಿದ್ದು, ರಾಜ್ಯದ ಪ್ರಗತಿಗೆ ಪೂರಕವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶ್ಲಾಘಿಸಿದ್ದು, ಉದ್ಯೋಗ ಸೃಷ್ಟಿಯತ್ತ ಗಮನವೇ ಹರಿಸಿಲ್ಲ ಎಂದು ಬಿಜೆಪಿ ಟೀಕಿಸಿದೆ.
ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ಮಹಿಳಾ ಪರವಾಗಿದ್ದು, ಪ್ರಗತಿಗೆ ಪೂರಕವಾಗಿದೆ. ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗಾಗಿ 2025-26ನೇ ಸಾಲಿನಲ್ಲಿ ಒಟ್ಟಾರೆಯಾಗಿ 94,084 ಕೋಟಿ ರೂಪಾಯಿ ಒದಗಿಸಲಾಗಿದೆ. ಮಕ್ಕಳ ಉದ್ದೇಶಿತ ಕಾರ್ಯಕ್ರಮಗಳಿಗಾಗಿ ಒಟ್ಟು 62,033 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದು ಹೇಳಿದ್ದಾರೆ.
ಮಹಿಳೆಯರ ಆರ್ಥಿಕ ಸಬಲೀಕರಣದ ಹಿನ್ನೆಲೆಯಲ್ಲಿ ಕುಟುಂಬ ನಿರ್ವಹಣೆಗೆ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು ಹಣ ಜಮಾ ಮಾಡುವ ಗೃಹಲಕ್ಷ್ಮೀ ಯೋಜನೆಗೆ ನಿರೀಕ್ಷೆಯಂತೆ ಹಣ ಕಾಯ್ದಿರಿಸಲಾಗಿದೆ. ಈ ಯೋಜನೆಗೆ ಈ ವರ್ಷ 28,608 ಕೋಟಿ ನಿಗದಿ ಮಾಡಲಾಗಿದೆ. ರಾಜ್ಯದಲ್ಲಿ ಅಂಗನವಾಡಿ ಮಕ್ಕಳ ಆರೈಕೆ ಮತ್ತು ಕಲಿಕೆಯಲ್ಲಿ ಅತ್ಯಂತ ಮಹತ್ತರ ಪಾತ್ರ ವಹಿಸುತ್ತಿರುವ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಗೌರವ ಧನ ಹೆಚ್ಚಳ ಮಾಡುವುದು ನಿಜಕ್ಕೂ ಹರ್ಷದ ಸಂಗತಿ. ರಾಜ್ಯದ 37 ಲಕ್ಷ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು ತಿಂಗಳಿಗೆ 1 ಸಾವಿರ ರೂಪಾಯಿ ಹಾಗೂ ಸಹಾಯಕಿಯರ ಗೌರವಧನ 750 ಹೆಚ್ಚಿಸಲಾಗಿದೆ. ಈ ಮೂಲಕ ಆ ವರ್ಗದವರ ಅಭ್ಯುದಯಕ್ಕೆ ಸಹಾಯವಾಗಲಿದ್ದು, ಇದು ಮುಖ್ಯಮಂತ್ರಿಯವರ ಜನಪರ ಕಾಳಜಿ ಎತ್ತಿ ತೋರಿಸಿದೆ.
ಸಕ್ಷಮ ಅಂಗನವಾಡಿ ಯೋಜನೆಯಡಿ ರಾಜ್ಯದ 17,454 ಅಂಗನವಾಡಿ ಕೇಂದ್ರಗಳಿಗೆ ಹೆಚ್ಚುವರಿ ಸೌಲಭ್ಯ ಕಲ್ಪಿಸಲು ತಲಾ ಒಂದು ಲಕ್ಷ ರೂಪಾಯಿಯಂತೆ ಒಟ್ಟು 175 ಕೋಟಿ ರೂಪಾಯಿ ಒದಗಿಸಿರುವುದು ಅನುಕೂಲಕರವಾಗಿದೆ. ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಂಗನವಾಡಿ ಕಟ್ಟಡಗಳಿಗೆ ನಿವೇಶನ ಖರೀದಿಸಲು 10 ಕೋಟಿ ರೂಪಾಯಿ ಮೀಸಲಿರಿಸಿರುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ವಿಶೇಷಚೇತನರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಮೈಸೂರು ಮತ್ತು ಬೆಳಗಾವಿಯಲ್ಲಿರುವ ವಿಶೇಷ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳನ್ನು ಉನ್ನತೀಕರಿಸಲು ತಲಾ 5 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಇವುಗಳ ನಿರ್ವಹಣೆಯನ್ನು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕೈಗೊಳ್ಳಲಾಗುವುದು. ಬಳ್ಳಾರಿಯ ಸರ್ಕಾರಿ ಶ್ರವಣದೋಷವುಳ್ಳ ಮಕ್ಕಳ ಶಾಲೆ ಹಾಗೂ ಹುಬ್ಬಳ್ಳಿಯ ದೃಷ್ಟಿದೋಷವುಳ್ಳ ಮಕ್ಕಳ ಶಾಲೆಗಳನ್ನು ಪ್ರಾಥಮಿಕ ಶಾಲಾ ಹಂತದಿಂದ ಪ್ರೌಢಶಾಲಾ ಹಂತಕ್ಕೆ ಮೇಲ್ದರ್ಜೆಗೇರಿಸಿರುವುದು ಉತ್ತಮ ಬೆಳೆವಣೆಗೆ ಆಗಿದೆ. ಒಟ್ಟಾರೆ ಎಲ್ಲ ಇಲಾಖೆಗಳಿಗೂ ಆದ್ಯತೆಯ ಮೇಲೆ ಅನುದಾನ ಹಂಚಿಕೆ ಮಾಡುವ ಮೂಲಕ ಅತ್ಯುತ್ತಮ ಬಜೆಟ್ ಮಂಡಿಸಿದ್ದಾರೆಂದು ಕೊಂಡಾಡಿದ್ದಾರೆ.
ಆದರೆ, ಸರ್ಕಾರವನ್ನು ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಟೀಕಿಸಿದ್ದಾರೆ. ಬೆಳಗಾವಿಯಲ್ಲಿ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯತ್ತ ಗಮನ ಹರಿಸಿಲ್ಲ ಎಂದು ಹೇಳಿದ್ದಾರೆ. ಈ ಪ್ರದೇಶದಲ್ಲಿ ಕೈಗಾರಿಕಾ ವಲಯ ಅಥವಾ ಐಟಿ/ಬಿಟಿ ಕೈಗಾರಿಕೆಗಳಿಗೆ ಪ್ರತ್ಯೇಕ ಅನುದಾನ ಹಂಚಿಕೆ ಮಾಡಿಲ್ಲ, ಇದು ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಹೇಳಿದ್ದಾರೆ.
ಇದಲ್ಲದೆ, ನೇಕಾರ ಸಮುದಾಯದ ಕಲ್ಯಾಣಕ್ಕಾಗಿ ಯಾವುದೇ ಹೊಸ ಯೋಜನೆಗಳನ್ನು ಘೋಷಿಸದ ಕಾರಣ ಸರ್ಕಾರವು ಅವರನ್ನು ನಿರ್ಲಕ್ಷಿಸಿದೆ ಎಂದು ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದು ದೂರದೃಷ್ಟಿಯಿಲ್ಲದ ಬಜೆಟ್, ಆರ್ಥಿಕ ಬೆಳವಣಿಗೆಗೆ ಆರ್ಥಿಕ ವಿವೇಕ ಮತ್ತು ಕಾರ್ಯತಂತ್ರ ಎರಡನ್ನೂ ಹೊಂದಿಲ್ಲದ ಬಜೆಟ್ ಆಗಿದೆ.. ಈ ಬಜೆಟ್ ಆರ್ಥಿಕ ದಿವಾಳಿತನವನ್ನು ಪ್ರತಿಬಿಂಬಿಸುತ್ತದೆ. ಬೆಳಗಾವಿಯಲ್ಲಿ ಪ್ರಮುಖ ಕೈಗಾರಿಕೆಗಳು ಮತ್ತು ಉದ್ಯೋಗ ಸೃಷ್ಟಿಯನ್ನು ಪರಿಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 16ನೇ ಕರ್ನಾಟಕ ಬಜೆಟ್ ಅನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಶ್ಲಾಘಿಸಿದ್ದಾರೆ,
ಇದು ಸಮತೋಲಿತ ಮತ್ತು ಎಲ್ಲರನ್ನೂ ಒಳಗೊಳ್ಳುವ ಬಜೆಟ್ ಆಗಿದೆ. ಬಜೆಟ್ ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ, ಎಲ್ಲಾ ಕ್ಷೇತ್ರಗಳಿಗೂ ಸಮಾನ ಗಮನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಅಥಣಿಯಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಬಹುಕಾಲದಿಂದ ಬಾಕಿ ಉಳಿದಿದ್ದ ಬೇಡಿಕೆಯನ್ನು ಅಂತಿಮವಾಗಿ ಪರಿಹರಿಸಲಾಗಿದೆ, ಬೆಳಗಾವಿ ಜಿಲ್ಲೆಗೆ ಗಮನಾರ್ಹ ಗಮನ ನೀಡಲಾಗಿದೆ. ಜಿಲ್ಲೆಯಲ್ಲಿ ವಿಶೇಷ ಮಕ್ಕಳಿಗಾಗಿ ಸರ್ಕಾರಿ ವಸತಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು 5 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗಿದೆ, ಇದು ಸಮಗ್ರ ಶಿಕ್ಷಣಕ್ಕೆ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.
Advertisement