
ಬೆಳಗಾವಿ: ನರ್ಸಿಂಗ್ ಓದುತ್ತಿದ್ದ ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ಯಕೋಮಿನ ಯುವಕನ ಮನೆ ಮೇಲೆ ಯುವತಿಯ ಸಂಬಂಧಿಕರು ಕಲ್ಲು ತೂರಿ ಅಟ್ಟಹಾಸ ಮೆರೆದಿರುವ ಘಟನೆ ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ನಡೆದಿದೆ. ಘಟನೆ ಬೆನ್ನಲ್ಲೇ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಫೆಬ್ರವರಿ 22 ರಂದು ಪುತ್ರಿ ನಾಪತ್ತೆಯಾಗಿದ್ದಾಳೆಂದು ಯುವತಿಯ ತಾಯಿ ದೂರು ನೀಡಿದ್ದಾರೆಂದು ವರದಿಗಳು ತಿಳಿಸಿವೆ.
ಫೆಬ್ರವರಿ 22 ರಂದು ಯುವತಿ ನಾಪತ್ತೆಯಾಗಿದ್ದು, ಗ್ರಾಮದ ಯುವಕ ಸದ್ರುದ್ದೀನ್ ಬೆಪಾರಿ ಆಕೆಯನ್ನು ಅಪಹರಿಸಿದ್ದಾನೆಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಯುವಕನ ಮನೆ ಮೇಲೆ ಯುವತಿಯ ಕುಟುಂಬಸ್ಥರು ಕಲ್ಲು ತೂರಾಟ ನಡೆಸಿದ್ದಾರೆ.
ಮನೆಯ ಬಾಗಿಲು, ಕಿಟಕಿ ಒಡೆದು ಒಳ ನುಗ್ಗಿ ಗಲಾಟೆ ಮಾಡಿದ್ದು, ಮನೆಯಲ್ಲಿದ್ದ ಪಾತ್ರೆ, ಸಾಮಗ್ರಿ ಒಡೆದಿದ್ದಾರೆ. ಗಲಾಟೆ ಬಳಿಕ ಯುವತಿ ಸಂಬಂಧಿಕರು ಪರಾರಿಯಾಗಿದ್ದಾರೆ. ಘಟನೆ ಬೆನ್ನಲ್ಲೇ ಗ್ರಾಮದಲ್ಲಿ ಎರಡು ಸಮುದಾಯಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಗ್ರಾಮದಲ್ಲಿ ಬಿಗಿ ಭದ್ರತೆ ನಿಯೋಜಿಸಿದ್ದಾರೆ.
ನಾಪತ್ತೆಯಾಗಿರುವ ಯುವತಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದು, ಸದ್ರುದ್ದೀನ್ ಹಾಗೂ ಯುವತಿ ಕಳೆದ 2-3 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಬ್ಬರೂ ನಾಪತ್ತೆಯಾಗಿದ್ದಾರೆಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದೆ. ಈ ಸಂಬಂಧ ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Advertisement