
ಬೆಂಗಳೂರು: ಬಿಸಿಲ ಧಗೆಯಿಂದ ಬೇಸತ್ತು ಹೋಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊನೆಗೂ ವರ್ಷಧಾರೆಯಾಗಿದ್ದು, ಇಂದು ಸಂಜೆ ಸುರಿದ ಮಾರ್ಚ್ ತಿಂಗಳ ಮೊದಲ ಮಳೆಯಿಂದಾಗಿ ನಗರದ ತಾಪಮಾನ ಗಣನೀಯವಾಗಿ ಇಳಿಕೆಯಾಗಿದೆ.
ಸಂಜೆ 6 ಗಂಟೆ ಹೊತ್ತಿಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಶಾಂತಿನಗರ, ಕಾರ್ಪೊರೇಷನ್, ರಿಚ್ಮಂಡ್ ಸರ್ಕಲ್, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್ಸೇರಿದಂತೆ ಹಲವೆಡೆ ಮಳೆಯಾಗಿದೆ. ಅಂತೆಯೇ ಭಾರಿ ಗಾಳಿಯಿಂದಾಗಿ ಮೋಡಗಳಲ್ಲಿಯೂ ಚಲನೆ ಕಂಡುಬಂದಿದ್ದು, ಮಳೆ ಮೋಡಗಳು ಈಶಾನ್ಯ ಬೆಂಗಳೂರಿನಿಂದ ದಕ್ಷಿಣದತ್ತ ಚಲಿಸುತ್ತಿವೆ. ಪರಿಣಾಮ ಹಲಸೂರು, ಇಂದಿರಾನಗರ, ಬನಶಂಕರಿ, ಜಯನಗರದಲ್ಲೂ ಮಳೆಯಾಗುತ್ತಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ HAL, ಮಾರತ್ ಹಳ್ಳಿ, ವೈಟ್‌ಫೀಲ್ಡ್, ಲಾಲ್‌ಬಾಗ್, ರಿಚ್ ಮಂಡ್ ಸರ್ಕಲ್, ಸುತ್ತಾ ಸಣ್ಣ ಪ್ರಮಾಣದ ಮಳೆಯಾಗಿದ್ದು, ಅವಲಹಳ್ಳಿಯಲ್ಲಿ 2 ಎಂಎಂ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕುಸಿದ ತಾಪಮಾನ
ಇನ್ನು ಇಂದು ಸುರಿದ ಮಳೆಯಿಂದಾಗಿ ಬೆಂಗಳೂರಿನಲ್ಲಿ ತಾಪಮಾನ ಕುಸಿತವಾಗಿದ್ದು, ಮಧ್ಯಾಹ್ನ 27 ಡಿಗ್ರಿಯಷ್ಟಿದ್ದ ತಾಪಮಾನ ಸಂಜೆ ಮಳೆ ಬಳಿಕ 24 ಡಿಗ್ರಿಗೆ ಕುಸಿದಿದೆ. ಇದು ಬೇಸಿಗೆಯ ಮೊದಲ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪನೆಯ ವಾತಾವರಣ ಸಿಕ್ಕಂತಾಗಿದೆ.
ಮಾರ್ಚ್ 14ರವರೆಗೂ ಮಳೆ
ರಾಜ್ಯದಲ್ಲಿ ತಾಪಮಾನ ಏರಿಕೆ ನಡುವೆಯೇ ಹವಾಮಾನ ಇಲಾಖೆಯ ಮಳೆಯ ಮುನ್ಸೂಚನೆ ನೀಡಿತ್ತು. ರಾಜ್ಯದ ಹಲವು ಭಾಗಗಳಲ್ಲಿ ಮಾರ್ಚ್ 14ರವರೆಗೆ ಸುಡುವ ಬೇಸಿಗೆ ನಡುವೆಯೂ ಮುಂಗಾರು ಪೂರ್ವ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮಾರ್ಚ್ 10ರಿಂದ ಪೂರ್ವ ಮುಂಗಾರು ಮಾರುತ ಚುರುಕುಗೊಳ್ಳುವ ಸಾಧ್ಯತೆ ಇದ್ದು, ಮಾರ್ಚ್14ರವರೆಗೆ ಮಳೆಯಾಗಲಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳು, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮಂಡ್ಯ, ಮೈಸೂರು & ಚಾಮರಾಜನಗರ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
Advertisement