
ಬೆಂಗಳೂರು: ಮಾರ್ಚ್ 6 ರಂದು ಕೊಪ್ಪಳ ಜಿಲ್ಲೆಯಲ್ಲಿ ಒಡಿಶಾದ ಪ್ರವಾಸಿಗರೊಬ್ಬರ ಕೊಲೆ ಹಾಗೂ ಇಸ್ರೇಲಿ ಪ್ರವಾಸಿ ಸೇರಿದಂತೆ ಇಬ್ಬರ ಮೇಲೆ ಅತ್ಯಾಚಾರ ನಡೆದ ನಂತರ ರಾಜ್ಯ ಸರ್ಕಾರ ಮಂಗಳವಾರ ಹೋಂಸ್ಟೇ, ರೆಸಾರ್ಟ್ ಮತ್ತು ಹೋಟೆಲ್‌ಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಅತಿಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ನಿರ್ದೇಶನವು ಕಡ್ಡಾಯಗೊಳಿಸಿದೆ. ಸಣಾಪುರ ಘಟನೆಯು ದುಃಖಕರ ಮತ್ತು ವಿಷಾದನೀಯ ಎಂದಿರುವ ಸರ್ಕಾರ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಹೊಸ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಹೇಳಿದೆ.
ರಾಜ್ಯಾದ್ಯಂತ ಪ್ರವಾಸಿ ತಾಣಗಳಲ್ಲಿರುವ ಹೋಂಸ್ಟೇಗಳು ವಿದೇಶಿ ಪ್ರವಾಸಿಗರು ಸೇರಿದಂತೆ ಎಲ್ಲ ಪ್ರವಾಸಿಗರಿಗೆ ಸೂಕ್ತ ಭದ್ರತಾ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪ್ರವಾಸಿಗರನ್ನು ದೂರದ ಅಥವಾ ನಿರ್ಜನ ಪ್ರದೇಶಗಳಿಗೆ ಕರೆದೊಯ್ಯುವ ಮೊದಲು, ಪೂರ್ವ ಮಾಹಿತಿಯನ್ನು ಒದಗಿಸಬೇಕು ಮತ್ತು ಅದಕ್ಕೆ ಸಂಬಂಧಿತ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು ಎಂದು ಹೇಳಲಾಗಿದೆ.
ಪೊಲೀಸ್ ಅಥವಾ ಅರಣ್ಯ ಇಲಾಖೆಯಿಂದ ಪೂರ್ವಾನುಮತಿ ಇಲ್ಲದೆ ಪ್ರವಾಸಿಗರನ್ನು ದೂರದ ಸ್ಥಳಗಳು, ಹೊರವಲಯಗಳು ಅಥವಾ ಅರಣ್ಯ ಪ್ರದೇಶಗಳಿಗೆ ಕರೆದೊಯ್ದರೆ, ದುಷ್ಕರ್ಮಿಗಳು ಅಥವಾ ಕಾಡು ಪ್ರಾಣಿಗಳಿಂದ ಉಂಟಾಗುವ ಯಾವುದೇ ಘಟನೆಗಳಿಗೆ ಹೋಂಸ್ಟೇ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಅಲ್ಲದೇ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹೋಂಸ್ಟೇಗಳು, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಮಾರ್ಗಸೂಚಿ ಪಾಲನೆ ಖಾತ್ರಿಗೆ ರಾಜ್ಯ ಸರ್ಕಾರವು ಜಿಲ್ಲಾ ಆಡಳಿತಕ್ಕೆ ನಿರ್ದೇಶನ ನೀಡಿದೆ. ಸಂಭಾವ್ಯ ಅಪಾಯಗಳನ್ನು ನಿರ್ಣಯಿಸಲು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಅಧಿಕಾರಿಗಳಿಗೆ ಸ್ಥಳ ಭೇಟಿ ಕಾರ್ಯಕ್ರಮಗಳ ಪಟ್ಟಿಯನ್ನು ಒದಗಿಸಬೇಕು ಎಂದು ಹೇಳಲಾಗಿದೆ.
ಗುರುವಾರ ರಾತ್ರಿ ಹಂಪಿ ಬಳಿ ಸಂಗೀತ ಕೇಳುತ್ತಾ ಕುಳಿತಿದ್ದಾಗ 27 ವರ್ಷದ ಇಸ್ರೇಲಿ ಮಹಿಳೆ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಮಹಿಳೆಯರೊಂದಿಗೆ ಇದ್ದ ಮೂವರು ಪುರುಷ ಪ್ರವಾಸಿಗರ ಮೇಲೂ ಹಲ್ಲೆ ನಡೆಸಿ ಕಾಲುವೆಗೆ ತಳ್ಳಲಾಗಿದೆ ಮತ್ತು ಅವರಲ್ಲಿ ಒಬ್ಬನ ಮೃತ ದೇಹ ಪತ್ತೆಯಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement