
ಬೆಂಗಳೂರು: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ತನಿಖಾ ವಿಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಎಂಡಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ. ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಎರಡನೇ ವರ್ಷದ ಪದವಿ ಪೂರ್ವ ವಿದ್ಯಾರ್ಥಿನಿ 17 ವರ್ಷದ ಸೌಜನ್ಯಳನ್ನು 2012ರ ಅಕ್ಟೋಬರ್ 9ರಂದು ಅತ್ಯಾಚಾರ ಮತ್ತು ಕೊಲೆ ಮಾಡಲಾಗಿತ್ತು.
ಬಿಎನ್ಎಸ್ 2023ರ ಸೆಕ್ಷನ್ 299 (ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವುದು) ಅಡಿಯಲ್ಲಿ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡುವ ಮೂಲಕ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅರ್ಜಿದಾರರಿಗೆ ಮಧ್ಯಂತರ ರಿಲೀಫ್ ನೀಡಿದ್ದಾರೆ. ಸಮೀರ್ ತಮ್ಮ ಯೂಟ್ಯೂಬ್ ಚಾನೆಲ್ ಧೂತ: ಸಮೀರ್ ಎಂಡಿ' ನಲ್ಲಿ "ಧರ್ಮಸ್ಥಳ ಸೌಜನ್ಯ ಪ್ರಕರಣ" ಎಂಬ ಶೀರ್ಷಿಕೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಇದು 18 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಧರ್ಮಸ್ಥಳ ಪ್ರದೇಶದಲ್ಲಿ ದಶಕಗಳ ಕಾಲ ನಡೆದ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಈ ವೀಡಿಯೊ ಹೇಳಲಾಗಿದೆ. ವಿಶೇಷವಾಗಿ 2012ರ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೊದಲಿಗೆ ಸಂತೋಷ್ ರಾವ್ ನನ್ನು ಆರೋಪಿ ಎಂದು ಬಿಂಬಿಸಲಾಗಿತ್ತು. ನಂತರ ಕೋರ್ಟ್ ಆರೋಪದಿಂದ ಖುಲಾಸೆಗೊಳಿಸಿದ್ದು ಹಲವು ಕ್ರಿಮಿನಲ್ ತನಿಖೆಗಳಲ್ಲಿ ಪ್ರಭಾವ ಬೀರಿದ ಮಾದರಿಗಳನ್ನು ವಿಡಿಯೋದಲ್ಲಿ ಹೇಳಲಾಗಿತ್ತು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ 2025ರ ಮಾರ್ಚ್ 5ರಂದು, ಕೌಲ್ ಬಜಾರ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಸಮೀರ್ ಪರ ವಾದ ಮಂಡಿಸಿದ ವಕೀಲ ಎ ವೇಲನ್, ಎಫ್‌ಐಆರ್ ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗವಾಗಿದೆ ಮತ್ತು ಅರ್ಜಿದಾರರ ಅಭಿವ್ಯಕ್ತಿಯ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದರು.
ಸೌಜನ್ಯ ಪ್ರಕರಣವು ಕರ್ನಾಟಕ, ವಿಶೇಷವಾಗಿ ರಾಜ್ಯದ ಕರಾವಳಿ ಪ್ರದೇಶದಲ್ಲಿ ತೀವ್ರ ಚರ್ಚಿಸಲ್ಪಟ್ಟ ಪ್ರಕರಣವಾಗಿದೆ. ನೇತ್ರಾವತಿ ನದಿಯ ಬಳಿ ಆಕೆಯ ಶವ ಪತ್ತೆಯಾಗಿದ್ದು, ಆಕೆಯ ಕೈಗಳನ್ನು ವೇಲ್ ನಿಂದ ಮರಕ್ಕೆ ಕಟ್ಟಲಾಗಿತ್ತು. ಪೊಲೀಸರು ಸಂತೋಷ್ ರಾವ್ ವಿರುದ್ಧ ಕೊಲೆ ಆರೋಪ ಹೊರಿಸಿದರು. ಆದರೆ 2023ರ ಜೂನ್ 16ರಂದು ಬೆಂಗಳೂರು ಸೆಷನ್ಸ್ ಕೋರ್ಟ್ ಅವರನ್ನು ಖುಲಾಸೆಗೊಳಿಸಿತು. ಕಾನೂನು ಪ್ರಕ್ರಿಯೆಗಳ ಉದ್ದಕ್ಕೂ, ಸೌಜನ್ಯ ಅವರ ಕುಟುಂಬವು ಸಂತೋಷ್ ರಾವ್ ಅವರನ್ನು ತಪ್ಪಾಗಿ ಆರೋಪಿ ಎಂದು ಬಿಂಬಿಸಲಾಗಿದೆ ಎಂದು ವಾದಿಸಿತ್ತು. ತನಿಖೆಯಲ್ಲಿನ ನ್ಯೂನತೆಗಳನ್ನು ಪ್ರಶ್ನಿಸಿದ್ದರು. ಧರ್ಮಸ್ಥಳದ ಧಾರ್ಮಿಕ ಮುಖಂಡ ವೀರೇಂದ್ರ ಹೆಗ್ಗಡೆ ನಿಜವಾದ ಅಪರಾಧಿಗಳನ್ನು ರಕ್ಷಿಸಿದ್ದಾರೆ ಎಂದು ಪ್ರತಿಪಾದಿಸಿತು.
ಸಂತೋಷ್ ರಾವ್ ಖುಲಾಸೆ ನಂತರ ಪ್ರಕರಣ ಸಂಬಂಧ ಸಾರ್ವಜನಿಕ ಪ್ರತಿಭಟನೆಗಳು ಹೆಚ್ಚಾದವು. ಪ್ರಕರಣದ ಬಗ್ಗೆ ಹೊಸ ತನಿಖೆಗೆ ಮತ್ತೆ ಕರೆ ನೀಡುವಂತೆ ಆಗ್ರಹಿಸಿತ್ತು. 11 ವರ್ಷಗಳ ತನಿಖೆಯ ನಂತರ, ಬೆಂಗಳೂರಿನ ನ್ಯಾಯಾಲಯವು 2023ರಲ್ಲಿ ಏಕೈಕ ಆರೋಪಿ ಸಂತೋಷ್ ರಾವ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿತ್ತು.
Advertisement