
ಬೆಂಗಳೂರು: ಭದ್ರಾ ಮೇಲ್ದಂಡೆ ಕಾಮಗಾರಿ ವೇಳೆ ರೈತರಿಗೆ ನೀಡಿರುವ ಭೂ ಸ್ವಾಧೀನ ಪರಿಹಾರ ತಾರತಮ್ಯವನ್ನು ಕಾನೂನು ಪ್ರಕಾರ ಸರಿಪಡಿಸಿ ಮುಂದಿನ ಆರು ತಿಂಗಳಿನಲ್ಲಿ ಕಾಮಗಾರಿ ಮುಗಿಸಿ ನೀರು ಕೊಡಬಹುದು ಎಂದು ಮಂತ್ರಿಗಳು, ಶಾಸಕರು ತಿಳಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಧಾನಸೌಧದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಮತ್ತು ತುಮಕೂರು ಶಾಖಾ ಕಾಲುವೆಗಳ ಭೂಸ್ವಾಧೀನ ಸಮಸ್ಯೆ ನಿವಾರಿಸುವ ಕುರಿತು ಸಂತ್ರಸ್ತ ರೈತರೊಂದಿಗಿನ ಸಭೆಯ ನಂತರ ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು.
ಪರಿಹಾರ ತಾರತಮ್ಯ ಪರಿಹರಿಸುವುದಕ್ಕೆ ರೈತರು ಸಹ ಒಪ್ಪಿಕೊಂಡಿದ್ದಾರೆ. ಅವರಿಗೂ ಅನ್ಯಾಯವಾಗದ ರೀತಿಯಲ್ಲಿ ನಾವು ಗಮನ ಹರಿಸುತ್ತೇವೆ. ಆದಷ್ಟು ಬೇಗ ಈ ಯೋಜನೆ ಪೂರ್ಣಗೊಳಿಸಲು ನಾವು ಗಮನ ಹರಿಸುತ್ತೇವೆ ಎಂದರು.
ಭೂ ಸ್ವಾಧೀನ ಪರಿಹಾರ ವಿಚಾರದಲ್ಲಿ ತಾರತಮ್ಯವಾಗಿರುವ ಕಾರಣಕ್ಕೆ ಭದ್ರಾ ಮೇಲ್ದಂಡೆ ಕಾಮಗಾರಿಗೆ ರೈತರು ತಡೆ ಒಡ್ಡಿದ್ದರು. ಏಕೆಂದರೆ ಹಳೇ ದರದ ಪ್ರಕಾರ ಕೆಲವರಿಗೆ 4 ಲಕ್ಷ ರು. ಪರಿಹಾರ ಸಿಕ್ಕಿದೆ. ಅದೇ ಸರ್ವೇ ನಂಬರ್ ಅಲ್ಲಿ ಕೆಲವರಿಗೆ 20 ಲಕ್ಷ ಪರಿಹಾರ ಸಿಕ್ಕಿದ್ದು ತಾರತಮ್ಯವಾಗಿದೆ ಎಂದು ರೈತರು ಕೆಲಸ ಮುಂದುವರೆಸಲು ಬಿಟ್ಟಿರಲಿಲ್ಲ ಎಂದರು.
ಈ ಮೊದಲು ನಾನು, ಒಂದಷ್ಟು ಸಚಿವರು, ಶಾಸಕರು, ಅಧಿಕಾರಿಗಳು ರೈತರ ಬಳಿ ಕೆಲಸ ಮುಂದುವರೆಸಲು ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದೆವು. ಅದೇ ರೀತಿ ಪರಿಹಾರದ ತಾರತಮ್ಯ ಹೋಗಲಾಡಿಸಲು ಕಾನೂನಿನ ಅಡಿ ಏನು ಮಾಡಬಹುದು ಎಂದು ಚರ್ಚೆ ನಡೆಸಿದೆವು. ಮೂರು- ನಾಲ್ಕು ದಿನಗಳಲ್ಲಿ ಅಂತಿಮ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
Advertisement