
ಬೆಂಗಳೂರು: ಕರ್ನಾಟಕ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಡಿಜಿಪಿ ರಾಮಚಂದ್ರ ರಾವ್ ಅವರ ಮಲಮಗಳು ಚಿನ್ನ ಕಳ್ಳಸಾಗಣೆಯ ಆರೋಪಿ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ನಾಳೆ ಶುಕ್ರವಾರಕ್ಕೆ ಕಾಯ್ದಿರಿಸಿದೆ.
ನಿನ್ನೆ ವಿಚಾರಣೆಯ ಸಂದರ್ಭದಲ್ಲಿ, ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಪ್ರತಿನಿಧಿಸುವ ವಿಶೇಷ ಸಾರ್ವಜನಿಕ ಅಭಿಯೋಜಕ (SPP) ಮಧು ರಾವ್, ರನ್ಯಾ ಅವರ ಶಿಷ್ಟಾಚಾರ ಉಲ್ಲಂಘನೆಯನ್ನು ಬಹಿರಂಗಪಡಿಸಲು ರಾಜ್ಯ ಪೊಲೀಸರ ಶಿಷ್ಟಾಚಾರ ಅಧಿಕಾರಿಗೆ ಸಮನ್ಸ್ ನೀಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಪೊಲೀಸ್ ಅಧಿಕಾರಿಗಳ ಕುಟುಂಬ ಸದಸ್ಯರಿಗೆ ಸಹಾಯ ಮಾಡಲು ಪೊಲೀಸ್ ಇಲಾಖೆಯಿಂದ ಸೂಚನೆಗಳನ್ನು ಪಡೆದಿದ್ದಾಗಿ ಪ್ರೋಟೋಕಾಲ್ ಅಧಿಕಾರಿ ಡಿಆರ್‌ಐ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಎಸ್‌ಪಿಪಿ ನ್ಯಾಯಾಲಯಕ್ಕೆ ತಿಳಿಸಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗಳನ್ನು ತಪ್ಪಿಸಲು ರನ್ಯಾ ಅವರಿಗೆ ಹಿರಿಯ ಅಧಿಕಾರಿಗಳಿಗೆ ಮೀಸಲಾದ ಶಿಷ್ಟಾಚಾರವನ್ನು ನೀಡಿರುವುದನ್ನು ಅಧಿಕಾರಿ ಒಪ್ಪಿಕೊಂಡರು.
ನಟಿ ರನ್ಯಾ ರಾವ್ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ವಿಮಾನ ಇಳಿಯುವ ವೇಳೆಗೆ ಪ್ರೋಟೋಕಾಲ್ ಅಧಿಕಾರಿಗೆ ಹೇಳಿ ಅವರು ಭದ್ರತಾ ಅನುಮತಿಯನ್ನು ಪಡೆಯಲು ನಟಿಯಿಂದ ಲಗೇಜ್ ತೆಗೆದುಕೊಳ್ಳಲು ಇಮ್ಮಿಗ್ರೇಶನ್ ಸೆಂಟರ್ ನಲ್ಲಿ ಕಾಯುತ್ತಿದ್ದರು ಎಂದು ಹೇಳಲಾಗಿದೆ. ಶಿಷ್ಟಾಚಾರವನ್ನು ಉಲ್ಲಂಘಿಸುವ ಮೂಲಕ, ರನ್ಯಾ ವಿಮಾನ ನಿಲ್ದಾಣದಲ್ಲಿ ತಪಾಸಣೆಯನ್ನು ತಪ್ಪಿಸಿಕೊಳ್ಳುತ್ತಿದ್ದರು. ಹಿರಿಯ ಅಧಿಕಾರಿಗಳಿಗೆ ಮೀಸಲಾದ ವಿಐಪಿ ವಿಮಾನ ನಿಲ್ದಾಣ ಶಿಷ್ಟಾಚಾರಗಳನ್ನು ರನ್ಯಾ ಬಳಸಿಕೊಂಡಿದ್ದಾರೆ ಎಂದು ಎಸ್‌ಪಿಪಿ ನ್ಯಾಯಾಲಯ ಮುಂದೆ ವಿವರಿಸಿದ್ದಾರೆ.
ಮೂರು ದಿನಗಳ ಡಿಆರ್‌ಐ ಕಸ್ಟಡಿಯಲ್ಲಿದ್ದಾಗ ರನ್ಯಾ ತನಿಖೆಗೆ ಸಹಕರಿಸಲಿಲ್ಲ ಎಂದು ಹೇಳಲಾಗುತ್ತಿದೆ.
ಮಾರ್ಚ್ 3 ರಂದು ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್ ವಿಮಾನದ ಮೂಲಕ ಆಗಮಿಸಿದ್ದ ರನ್ಯಾ ಅವರನ್ನು ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಡಿಆರ್‌ಐ ಬಂಧಿಸಿತ್ತು. ತೀವ್ರ ತಪಾಸಣೆ ಮಾಡಿದಾಗ, 12.56 ಕೋಟಿ ರೂಪಾಯಿ ಮೌಲ್ಯದ 14.2 ಕೆಜಿ ತೂಕದ ಚಿನ್ನದ ಗಟ್ಟಿಗಳನ್ನು ಆಕೆಯಿಂದ ವಶಪಡಿಸಿಕೊಳ್ಳಲಾಯಿತು. ಬಂಧಿಸಿದ ನಂತರ, ಡಿಆರ್‌ಐ ಅಧಿಕಾರಿಗಳು ಲ್ಯಾವೆಲ್ಲೆ ರಸ್ತೆಯಲ್ಲಿರುವ ಆಕೆಯ ನಿವಾಸದಲ್ಲಿ ಶೋಧ ನಡೆಸಿ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 2.67 ಕೋಟಿ ರೂ. ಮೌಲ್ಯದ ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಂಡರು.
1962 ರ ಕಸ್ಟಮ್ಸ್ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ರನ್ಯಾರನ್ನು ಬಂಧಿಸಲಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
Advertisement