
ಚಿನ್ನ ಕಳ್ಳಸಾಗಣೆ ಪ್ರಕರಣದ ಸಂಬಂಧ ಡಿಆರ್ಐ ಹಾಗೂ ಸಿಬಿಐ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿರುವುದರ ನಡುವೆ ಜಾರಿ ನಿರ್ದೇಶನಾಲಯ ನಟಿ ರನ್ಯಾ ರಾವ್ ಮನೆ ಸೇರಿದಂತೆ ರಾಜ್ಯದ ಹಲವೆಡೆ ದಾಳಿ ಮಾಡಿದ್ದು, ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ನಟಿ ರನ್ಯಾ ರಾವ್ ಅವರ ಫ್ಲ್ಯಾಟ್, ಉದ್ಯಮಿ ತರುಣ್ ರಾಜ್ ಅವರ ಮನೆ, ಆರ್ಟಿ ನಗರದಲ್ಲಿರುವ ಜ್ಯೋತಿಷಿ ಕಚೇರಿ, ಪೊಲೀಸ್ ಅಧಿಕಾರಿಗಳು ಹಾಗೂ ಕಸ್ಟಮ್ಸ್ ಅಧಿಕಾರಿಗಳ ಮನೆ ಸೇರಿದಂತೆ ರಾಜ್ಯದ ಹಲವೆಡೆ ದಾಳಿ ಮಾಡಿದ್ದಾರೆ. ಗೋಲ್ಡ್ ಸ್ಮಗ್ಲಿಂಗ್ ವಿಚಾರದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರೋದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹಾವಾಲಾ ದಂಧೆ ಮೂಲಕ ಭಾರತದಿಂದ ಹಣ ದುಬೈಗೆ ಹೋಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ರನ್ಯಾ ರಾವ್ ಅವರ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಯ ಲೋಪ ಮತ್ತು ಕರ್ತವ್ಯ ಲೋಪಗಳ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿದ್ದ ಕೆಲವೇ ಗಂಟೆಗಳಲ್ಲಿ ಆದೇಶವನ್ನು ವಾಪಸ್ ಪಡೆದಿರುವುದರ ಬಗ್ಗೆ ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಸಿಐಡಿ ತನಿಖೆಯನ್ನು ಹಿಂತೆಗೆದುಕೊಳ್ಳುವಂತೆ ತಮ್ಮ ಮೇಲೆ ಯಾವುದೇ ಒತ್ತಡವಿಲ್ಲ. ಸಿಐಡಿ ತನಿಖೆಗೆ ಆದೇಶಿಸುವುದಕ್ಕೂ ಮೊದಲೇ ಸಿಎಂ ಕಚೇರಿಯಿಂದ ಮೇಲ್ಮಟ್ಟದ ತನಿಖೆಗೆ ಆದೇಶ ನೀಡಲಾಗಿತ್ತು. ಒಂದೇ ವಿಚಾರಕ್ಕೆ ಎರಡು ಕಡೆ ತನಿಖೆ ಆಗೋದು ಬೇಡ ಎಂಬ ಕಾರಣಕ್ಕೆ ನಾವು ಸಿಐಡಿ ತನಿಖೆಯನ್ನು ಹಿಂಪಡೆದೆವು’ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ನೀರು ಹಿಡಿಯಲು ಹೋದ ಮಹಿಳೆಯೊಬ್ಬರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ನಗರದ ಚಾಮರಾಜಪೇಟೆಯ ಆನಂದಪುರದ ಮಾರುಕಟ್ಟೆ ರಸ್ತೆಯಲ್ಲಿ ಇಂದು ನಡೆದಿದೆ. ಸೆಲ್ವಿ ಮೃತ ಮಹಿಳೆಯಾಗಿದ್ದು ಬೆಳಗಿನ ಜಾವ ನೀರನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮೋಟಾರ್ ಗೆ ಅಳವಡಿಸಿದ್ದ ವೈರ್ ತಗುಲಿ ಮಹಿಳೆ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಮಾರುಕಟ್ಟೆ ರಸ್ತೆಯಲ್ಲಿ ಬಿಬಿಎಂಪಿ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಅಕ್ರಮವಾಗಿ ಮೋಟಾರ್ ಗೆ ವಿದ್ಯುತ್ ಕನೆಕ್ಷನ್ ಕೊಡಲಾಗಿತ್ತು, ಈ ಹಿನ್ನೆಲೆ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ನಡೆದ ಬೆನ್ನಲ್ಲೆ ಸ್ಥಳಕ್ಕೆ ಆಗಮಿಸಿದ ಶಾಸಕ ಜಮೀರ್ ಅಹ್ಮದ್, ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರ ವಿತರಿಸಿದ್ದಾರೆ.
ಮಕ್ಕಳು ಪೋಷಕರ ಆರೈಕೆ ಮಾಡದಿದ್ದರೆ ತನ್ನ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನೀಡಿದ ವಿಲ್ ಅಥವಾ ದಾನಪತ್ರ ರದ್ದು ಮಾಡುವ ಅವಕಾಶ ಸಂತ್ರಸ್ಥ ಪೋಷಕರಿಗೆ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಬಲ್ಕೀಸ್ ಬಾನು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೇಂದ್ರ ಸರ್ಕಾರ 2007ರಲ್ಲಿ ಜಾರಿಗೆ ತಂದಿರುವ ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆʼಯಲ್ಲಿ ಈ ಅಂಶವಿದೆ. ಆದರೆ, ಈ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ’ ಎಂದು ಹೇಳಿದ್ದಾರೆ. ಕಾಯ್ದೆ ಪ್ರಕಾರ ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರನ್ನು ಆರೈಕೆ ಮಾಡಬೇಕು. ಔಷಧಿ ಸೇರಿದಂತೆ ಅವರ ತಿಂಗಳ ಖರ್ಚಿಗೆ ಹಣ ನೀಡಬೇಕು. ಒಂದು ವೇಳೆ ಹಣ ನೀಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು ಎಂದೂ ಸಚಿವರು ತಿಳಿಸಿದ್ದಾರೆ.
ಸಂಸದೀಯ ಕ್ಷೇತ್ರಗಳ ಪ್ರಸ್ತಾವಿತ ವಿಂಗಡಣೆಯ ಪರಿಣಾಮಗಳನ್ನು ಚರ್ಚಿಸಲು ಮಾರ್ಚ್ 22 ರಂದು ಚೆನ್ನೈನಲ್ಲಿ ನಡೆಯಲಿರುವ ಸಮಾನ ಮನಸ್ಕ ರಾಜ್ಯಗಳ ಮೊದಲ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸಲಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಸ್ಟ್ಯಾಲಿನ್ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಕ್ಷೇತ್ರ ಮರುವಿಂಗಡನೆ ಕುರಿತಾಗಿ ನೀವು ಬರೆದ ಪತ್ರ ಮತ್ತು ಆಹ್ವಾನವನ್ನು ಸ್ವೀಕರಿಸಿದ್ದೇನೆ. ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಹಾಗೂ ಸಾಧಕ ಬಾದಕಗಳ ಬಗ್ಗೆ ಅರಿವಿದೆ. ಈ ವಿಚಾರವಾಗಿ ಸುದೀರ್ಘವಾಗಿ ಚರ್ಚಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಮಂಗಳವಾರ ಸಂಭವಿಸಿದ ಕಾಡ್ಗಿಚ್ಚಿನಿಂದ ಸುಮಾರು 15 ಹೆಕ್ಟೇರ್ ಅರಣ್ಯ ಭೂಮಿ ಸುಟ್ಟು ಭಸ್ಮವಾಗಿದೆ. ಬೆಂಕಿ ಹೊತ್ತಿ ಉರಿಯಲು ಕಾರಣರಾದ ಅಪರಿಚಿತ ವ್ಯಕ್ತಿಗಳ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ. ಇತ್ತೀಚಿನ ದಿನಗಳಲ್ಲಿ ಇದೇ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಎರಡನೇ ಕಾಡ್ಗಿಚ್ಚು ಇದಾಗಿದೆ. ಅರಣ್ಯದ ಒಳಗೆ ಮತ್ತು ಹೊರಗೆ ವಾಸಿಸುವ ಸ್ಥಳೀಯರು ಮತ್ತು ಬುಡಕಟ್ಟು ಜನಾಂಗದವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.