ಬೆಳಗಾವಿ ಮಹಾನಗರ ಪಾಲಿಕೆಯ 23ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿಗಳಾದ ಮಂಗೇಶ ಪವಾರ ಹಾಗೂ ಉಪಮೇಯರ್ ಆಗಿ ವಾಣಿ ವಿಲಾಸ ಜೋಶಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ಮರಾಠಿಗರಾದ ಮಂಗೇಶ ಪವಾರ 41ನೇ ವಾರ್ಡ್ ಸದಸ್ಯರಾಗಿದ್ದು, 40 ಮತಗಳನ್ನು ಪಡೆದು ಮೇಯರ್ ಆಗಿ ಆಯ್ಕೆಯಾಗಿದ್ದರೆ 43ನೇ ವಾರ್ಡಿನ ಸದಸ್ಯೆ ವಾಣಿ ವಿಲಾಸ ಜೋಶಿ ಸಹ 40 ಮತ ಪಡೆದರು. ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 65 ಮತದಾರ ಪೈಕಿ 60 ಮಂದಿ ಹಾಜರಿದ್ದರು. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕ ಆಸಿಫ್ ಸೇಠ್, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಓರ್ವ ಪಾಲಿಕೆ ಸದಸ್ಯ ಗೈರಾಗಿದ್ದರು.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಿನ್ನೆ ನಡೆದ ಕೈವಾರ ತಾತಯ್ಯ ಯೋಗಿನಾರಾಯಣ ಯತೀಂದ್ರರ 299ನೇ ಜಯಂತ್ಯುತ್ಸವ ಕಾರ್ಯಕ್ರಮದ ವೇಳೆ ಶಾಸಕ ಪ್ರದೀಪ್ ಈಶ್ವರ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಭರಿತರಾದ ಪ್ರದೀಪ್ ಈಶ್ವರ್ ಬಿಜೆಪಿ ಕಾರ್ಯಕ್ರರ್ತರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಸಮುದಾಯ ಗುಣಗಾನ ಮಾಡೋಕೆ ಇದೇನು ಬಿಜೆಪಿ ಕಾರ್ಯಕ್ರಮ ಅಲ್ಲ? ಈ ರಾಜ್ಯದಲ್ಲಿ ಇರೋದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಎಲ್ಲರೂ ಬಾಯಿ ಮುಚ್ಕೊಂಡು ಕೂತ್ಕೊಬೇಕು ಎಂದು ಹೇಳಿದ್ದರು. ಈ ವೇಳೆ ವೇದಿಕೆ ಮೇಲಿದ್ದ ಬಿಜೆಪಿ ಸಂಸದ ಪಿಸಿ ಮೋಹನ್ ಅವರು, ಶಾಸಕನಾಗಿ ನೀವು ಈ ರೀತಿ ಮಾತನಾಡಿದರೆ ನಾನು ವೇದಿಕೆ ಮೇಲೆ ಇರಬೇಕೋ ಬೇಡವೋ ಎಂದು ಪ್ರತಿದಾಳಿ ನಡೆಸಿದರು. ಅಷ್ಟೇ ಅಲ್ಲದೆ ಇಂದು ಸಹ ಪಿಸಿ ಮೋಹನ್ ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದು ಮೊದಲು ಸರ್ಕಾರದಿಂದ 300 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿಸಿ ಎಂದು ಸವಾಲು ಹಾಕಿದ್ದಾರೆ.
ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಆಪ್ತ ಸೈಯ್ಯದ್ ಅಲಿ ಅಲ್ ಹುಸೇನಿ ಅವರು ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಕ್ಫ್ ಬೋರ್ಡ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ನಲ್ಲಿ ಎರಡು ಬಣಗಳ ನಡುವೆ ಜಟಾಪಟಿ ನಡೆದಿತ್ತು. ಚಿತ್ರದುರ್ಗದ ಅನ್ವರ್ ಪಾಷಾಗೆ ಅಧ್ಯಕ್ಷ ಸ್ಥಾನ ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಗೆ ಜಮೀರ್ ಖಾನ್ ಪಟ್ಟು ಹಿಡಿದಿದ್ದರು. ಆದರೆ ಈ ಒತ್ತಡಕ್ಕೆ ಮಲ್ಲಿಕಾರ್ಜುನ ಖರ್ಗೆ ಮಣಿಯಲಿಲ್ಲ. ಹೀಗಾಗಿ ಅಸಮಾಧಾನದಿಂದ ಜಮೀರ್ ಹೊರನಡೆದಿದ್ದರು. ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಸೂತ್ರದಂತೆ ಮೊದಲಿಗೆ ಕಲಬುರಗಿಯ ಹಝ್ರತ್ ಖ್ವಾಜಾ ಬಂದಾ ನವಾಝ್ ದರ್ಗಾದ ಸೈಯದ್ ಮುಹಮ್ಮದ್ ಅಲಿ ಹುಸೈನಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ದಂಧೆಗೆ ಕರ್ನಾಟಕ ಪೊಲೀಸ್ ಪ್ರೋಟೋಕಾಲ್ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ನ್ಯಾಯಾಲಯಕ್ಕೆ ತಿಳಿಸಿದೆ. ರನ್ಯಾ ರಾವ್ ಜಾಮೀನು ಅರ್ಜಿ ವಿಚಾರಣೆ ವೇಳೆ ಡಿಆರ್ಐ ಅಧಿಕಾರಿಗಳ ಪರವಾಗಿ ಮಧು ರಾವ್ ಅವರು ನಟಿ ಜನವರಿಯಿಂದ 27 ಬಾರಿ ದುಬೈಗೆ ಪ್ರಯಾಣಿಸಿದ್ದಾರೆ ಎಂದು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದರು. ಡಿಆರ್‌ಐನ ವಾದವನ್ನು ಪರಿಗಣಿಸಿ ನಿನ್ನೆ ರನ್ಯಾಗೆ ಕೋರ್ಟ್ ಜಾಮೀನು ನಿರಾಕರಿಸಿತ್ತು. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರನ್ಯಾ ರಾವ್ ಜೈಲಿನಿಂದಲೇ ಡಿಆರ್‌ಐ ಎಡಿಜಿಗೆ ಪತ್ರ ಬರೆದಿದ್ದಾರೆ. 14 ಕೆಜಿ ಚಿನ್ನ ತಂದಿರೋದಾಗಿ ಚಿನ್ನಕಳ್ಳಸಾಗಣೆ ಪ್ರಕರಣದಲ್ಲಿ ನನ್ನ ಮೇಲೆ ಸುಳ್ಳು ಕೇಸ್ ದಾಖಲು ಮಾಡಿದ್ದಾರೆ. ಅಧಿಕಾರಿಗಳು ನನಗೆ ಮಾತನಾಡೋದಕ್ಕೆ ಯಾವುದೇ ಅವಕಾಶ ಕೊಟ್ಟಿಲ್ಲ. ಹಲವು ಬಾರಿ ನನ್ನ ಮೇಲೆ ಅಧಿಕಾರಿಗಳು ಕೈ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಐನಾಪುರ ಹೋಬಳಿ ಗ್ರಾಮದಲ್ಲಿ ಕಳೆದ 24 ಗಂಟೆಗಳಲ್ಲಿ ಗರಿಷ್ಠ ತಾಪಮಾನ 42.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. IMD ನೀಡಿದ ಮುನ್ಸೂಚನೆ ಪ್ರಕಾರ, ಮುಂದಿನ ಐದು ದಿನಗಳವರೆಗೆ ಉತ್ತರ ಕರ್ನಾಟಕದ ಒಳನಾಡಿನಲ್ಲಿ ಮಾರ್ಚ್ 15 ರಿಂದ 17ರವರೆಗೆ ಗರಿಷ್ಠ ತಾಪಮಾನ ಇನ್ನೂ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಮಾರ್ಚ್ 18 ರಿಂದ 19 ರವರೆಗೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಐಎಂಡಿ ಹೀಟ್ ವೇವ್ ಎಚ್ಚರಿಕೆಯನ್ನು ನೀಡಿದೆ.
Advertisement