
ಬೆಂಗಳೂರು: ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕನ್ನಡದ ನಟಿ ರನ್ಯಾ ರಾವ್ ಅವರ ಮಲತಂದೆ, ಡಿಜಿಪಿ ಕೆ. ರಾಮಚಂದ್ರ ರಾವ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ "ಕಡ್ಡಾಯ ರಜೆ"ಯ ಮೇಲೆ ಕಳುಹಿಸಲಾಗಿದೆ ಎಂದು ರಾಜ್ಯ ಸರ್ಕಾರ ಶನಿವಾರ ಸುತ್ತೋಲೆ ಹೊರಡಿಸಿದೆ.
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಮಚಂದ್ರ ರಾವ್ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದ್ದು, ಅವರ ಸ್ಥಾನಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ನೇಮಕಾತಿ) ಕೆ.ವಿ. ಶರತ್ ಚಂದ್ರ ಅವರನ್ನು ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಮಚಂದ್ರ ರಾವ್ ಅವರ ಮಲ ಮಗಳು ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು, ಈ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ವಿಚಾರಣೆಯ ದೃಷ್ಟಿಯಿಂದ ಸದ್ಯ ಡಾ.ಕೆ.ರಾಮಚಂದ್ರ ರಾವ್ ಅವರಿಗೆ ಕಡ್ಡಾಯ ರಜೆ ನೀಡಲಾಗಿದೆ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.
"ಇಲ್ಲಿಯವರೆಗಿನ ತನಿಖೆಯ ವೇಳೆ, ಚಿನ್ನ ಕಳ್ಳಸಾಗಣೆಯಲ್ಲಿ ಅತ್ಯಾಧುನಿಕ ಭದ್ರತೆಯನ್ನು ಬೈಪಾಸ್ ಮಾಡಲು ರಾಜ್ಯ ಪೊಲೀಸ್ ಪ್ರೋಟೋಕಾಲ್ ಅಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ. ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಅವರು, ಕುಟುಂಬದವರಿಗೆ ಸಹಾಯ ಮಾಡಲು ಹೇಳಿದ್ದರು. ರಾಜ್ಯದ ಪೊಲೀಸ್ ಪ್ರೋಟೋಕಾಲ್ ಸರ್ವಿಸ್ ಸಹಾಯದಿಂದಲೇ ಸ್ಮಗ್ಲಿಂಗ್ ನಡೆದಿದೆ ಎಂಬುದು ನಮ್ಮ ಆರೋಪ. ಇಲ್ಲವಾದರೆ ರನ್ಯಾ ರಾವ್ ಗ್ರೀನ್ ಚಾನಲ್‌ವರೆಗೂ ಬರುವುದು ಅಸಾಧ್ಯವಾಗಿತ್ತು’ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ನ್ಯಾಯಾಲಯಕ್ಕೆ ತಿಳಿಸಿದೆ.
ಆದಾಗ್ಯೂ, ಪ್ರಕರಣದಿಂದ ಅಂತರ ಕಾಯ್ದುಕೊಂಡಿರುವ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರು, ಎಲ್ಲಾ ಪೋಷಕರಂತೆ ತನಗೂ ಈ ಘಟನೆಯಿಂದ ಆಘಾತವಾಗಿದೆ. ಆಕೆ ಕಳ್ಳಸಾಗಣೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾಳೆ ಎಂಬ ಆರೋಪದ ಬಗ್ಗೆ ನನಗೆ ಗೊತ್ತಿಲ್ಲ. ಮಾಧ್ಯಮ ವರದಿಗಳ ಮೂಲಕವೇ ಆಕೆಯ ಬಂಧನದ ವಿಚಾರ ತಿಳಿಯಿತು ಎಂದು ಹೇಳಿದ್ದಾರೆ.
ಮಾರ್ಚ್ 3ರ ರಾತ್ರಿ ದುಬೈನಿಂದ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದು, ಈ ವೇಳೆ ನಟಿ ಬಳಿ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ತಕ್ಷಣ ನಟಿಯನ್ನು ಬಂಧಿಸಲಾಗಿತ್ತು.
Advertisement