ಮಂಡ್ಯ: ಹೋಳಿ ಪಾರ್ಟಿಯಲ್ಲಿ ಊಟ ಸೇವಿಸಿ 28 ವಿದ್ಯಾರ್ಥಿಗಳು ಅಸ್ವಸ್ಥ, ಓರ್ವ ಸಾವು; ಕಠಿಣ ಕ್ರಮಕ್ಕೆ ಸಿಎಂ ಸೂಚನೆ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಟಿ ಕಾಗೇಪುರ ಗ್ರಾಮದ ಗೋಕುಲ ವಿದ್ಯಾ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಮಂಡ್ಯ: ಹೋಳಿ ಪಾರ್ಟಿಯಲ್ಲಿ ಹೆಚ್ಚಾಗಿದ್ದ ಆಹಾರವನ್ನು ಸೇವಿಸಿ 29 ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಆ ಪೈಕಿ 13 ವರ್ಷದ ಓರ್ವ ಬಾಲಕ ಸಾವನ್ನಪ್ಪಿದ್ದಾರೆ.

ವಿಷ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ಖಾಸಗಿ ಶಾಲೆ ನಡೆಸುತ್ತಿರುವ ಅನಧಿಕೃತ ಹಾಸ್ಟೆಲ್‌ನ 28 ವಿದ್ಯಾರ್ಥಿಗಳನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿಯನ್ನು ಮೇಘಾಲಯ ಮೂಲದ ಕೆರ್ಲಾಂಗ್ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಟಿ ಕಾಗೇಪುರ ಗ್ರಾಮದ ಗೋಕುಲ ವಿದ್ಯಾ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯನ್ನು ಉಲ್ಲೇಖಿಸಿ, ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು, 1989 ರಿಂದ ಕಾರ್ಯನಿರ್ವಹಿಸುತ್ತಿರುವ ಈ ಶಾಲೆಯು ಹಾಸ್ಟೆಲ್ ನಡೆಸಲು ಪರವಾನಗಿಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ಶಾಲಾ ಕಟ್ಟಡದ ಮೊದಲ ಮಹಡಿಯಲ್ಲಿ ಮಕ್ಕಳಿಗೆ ಶೌಚಾಲಯ ಸೇರಿದಂತೆ ಸರಿಯಾದ ಮೂಲಸೌಕರ್ಯಗಳಿಲ್ಲದೆ ಆಡಳಿತ ಮಂಡಳಿಯು ಹಾಸ್ಟೆಲ್ ಅನ್ನು ಕಾನೂನುಬಾಹಿರವಾಗಿ ನಡೆಸುತ್ತಿತ್ತು.

CM Siddaramaiah
ಬೀದರ್: ಬೆಳಗಿನ ಉಪಹಾರ ಸೇವಿಸಿದ 50ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ!

ಎಲ್‌ಕೆಜಿಯಿಂದ 8 ನೇ ತರಗತಿಯವರೆಗೆ ಒಟ್ಟು 202 ವಿದ್ಯಾರ್ಥಿಗಳು ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ, ಸುಮಾರು 30 ವಿದ್ಯಾರ್ಥಿಗಳು - ಅವರಲ್ಲಿ ಹೆಚ್ಚಿನವರು ಮೇಘಾಲಯದವರು ಹಾಸ್ಟೆಲ್‌ನಲ್ಲಿಯೇ ಇದ್ದಾರೆ.

ಈ ಶಾಲೆಯು ಹತ್ತಿರದ ಕಾರ್ಯಕ್ರಮಗಳು, ಆಚರಣೆಗಳು ಅಥವಾ ಮದುವೆಗಳಿಂದ ಉಳಿದ ಆಹಾರವನ್ನು ಹಾಸ್ಟೆಲ್ ವಿದ್ಯಾರ್ಥಿಗಳು ಪಡೆಯುವ ವ್ಯವಸ್ಥೆಯನ್ನು ಅನುಸರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಮಾರ್ಚ್ 14 ರಂದು, ಮಳವಳ್ಳಿಯ ಒಂದು ಗುಂಪು ಹೋಳಿ ಪಾರ್ಟಿಗಾಗಿ ತರಕಾರಿ ಪುಲಾವ್ ಮತ್ತು ಚಟ್ನಿಯನ್ನು ಸಿದ್ಧಪಡಿಸಿತ್ತು. ಅವರು ಊಟ ಮಾಡಿದ ನಂತರ ಉಳಿದ ಆಹಾರವನ್ನು ನಂತರ ಶಾಲಾ ಹಾಸ್ಟೆಲ್‌ನ 30 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ 30 ವಿದ್ಯಾರ್ಥಿಗಳಲ್ಲಿ 24 ವಿದ್ಯಾರ್ಥಿಗಳು ಮೇಘಾಲಯದವರಾಗಿದ್ದು, ಉಳಿದವರು ಸ್ಥಳೀಯರು ಎಂದು ಅವರು ಹೇಳಿದ್ದಾರೆ.

ಮಾರ್ಚ್ 14 ರಂದು, ಯಾವುದೇ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿಲ್ಲ. ಆದರೆ ಮರುದಿನ, ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಾನುವಾರ, 13 ವರ್ಷದ ಬಾಲಕನೊಬ್ಬ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಆಸ್ಪತ್ರೆಗೆ ದಾಖಲಾದ 28 ವಿದ್ಯಾರ್ಥಿಗಳಲ್ಲಿ ಏಳು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಮತ್ತು ಒಬ್ಬ ವಿದ್ಯಾರ್ಥಿ ವೆಂಟಿಲೇಟರ್‌ನಲ್ಲಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆಹಾರವನ್ನು ತಯಾರಿಸಿದ ಅಡುಗೆಯವರು, ಗುಣಮಟ್ಟವನ್ನು ಪರಿಶೀಲಿಸದೆ ಉಳಿದ ಆಹಾರವನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದಕ್ಕಾಗಿ ಹಾಸ್ಟೆಲ್ ವಾರ್ಡನ್ ಮತ್ತು ನಿರ್ಲಕ್ಷ್ಯಕ್ಕಾಗಿ ಶಾಲಾ ಮಾಲೀಕರನ್ನು ಬಂಧಿಸಲಾಗಿದೆ.

ವಿದ್ಯಾರ್ಥಿ ಸಾವಿಗೆ ತೀವ್ರ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರದ ಖಾಸಗಿ ವಸತಿ ಶಿಕ್ಷಣ ಸಂಸ್ಥೆಯಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟು ಹಲವು ಮಕ್ಕಳು ತೀವ್ರ ಅಸ್ವಸ್ಥಗೊಂಡ ವಿಚಾರ ತಿಳಿದು ನೋವಾಯಿತು.

ಘಟನೆ ನನ್ನ ಗಮನಕ್ಕೆ ಬಂದ ಕೂಡಲೇ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮಕ್ಕಳಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಹಾಗೂ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದೇನೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

ಈ ದುರ್ಘಟನೆಯಲ್ಲಿ ಮಡಿದ ಬಾಲಕನ‌ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು. ಬೇರೆಡೆ ತಯಾರಿಸಿದ ಆಹಾರವನ್ನು ಸೇವಿಸುವ ಮುನ್ನ ಅದರಲ್ಲಿಯೂ ಚಿಕ್ಕ ಮಕ್ಕಳಿಗೆ ನೀಡುವ ಮುನ್ನ ಹೆಚ್ಚು ಜಾಗೃತೆ ವಹಿಸಿ. ಅಜಾಗರೂಕತೆಗೆ ಅಮೂಲ್ಯ ಜೀವಗಳು ಬಲಿಯಾಗದಿರಲಿ ಎಂದು ಸಿಎಂ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com