
ಬೆಂಗಳೂರು: ಮಾಜಿ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಆಪ್ತ ಹಾಗೂ ಕೋಲಾರ ಕಾಂಗ್ರೆಸ್ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ್ ಕೊಲೆ ಪ್ರಕರಣದ ತನಿಖೆಯನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ಸಿಬಿಐಗೆ ವಹಿಸಿದೆ.
ಸಿಬಿಐ ತನಿಖೆ ಕೋರಿ ಶ್ರೀನಿವಾಸ್ ಅವರ ಪತ್ನಿ ಡಾ. ಎಸ್. ಚಂದ್ರಕಲಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಪ್ರಕರಣವನ್ನು ಸಿಬಿಐಗೆ ವಹಿಸಿ ಆದೇಶ ಹೊರಡಿಸಿದ್ದಾರೆ.
ಗೃಹ ಸಚಿವ ಜಿ ಪರಮೇಶ್ವರ್ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಆಪ್ತ ಎಂ ಶ್ರೀನಿವಾಸ್ ಅವರನ್ನು 2023 ಅಕ್ಟೋಬರ್ 23ರಂದು ಶ್ರೀನಿವಾಸಪುರ ಹೊರವಲಯದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ಕೊಲೆಯ ಹಿಂದೆ ರಾಜಕೀಯ ಷಡ್ಯಂತ್ರವಿದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಶ್ರೀನಿವಾಸ್ ಅವರ ಪತ್ನಿ ಡಾ. ಎಸ್. ಚಂದ್ರಕಲಾ ಅವರು ಹೈಕೋರ್ಟ್ಗೆ ಮನವಿ ಮಾಡಿದ್ದರು.
ಸ್ಥಳೀಯ ಪೊಲೀಸರು ಹಾಗೂ ಸಿಐಡಿ ಅಧಿಕಾರಿಗಳು ಸಮರ್ಪಕ ತನಿಖೆ ನಡೆಸಿಲ್ಲ. ಸತ್ಯವನ್ನು ನೀರಿನಲ್ಲಿ ಮುಳುಗಿಸಲಾಗಿದೆ. ಹೀಗಾಗಿ ಸಿಬಿಐ ತನಿಖೆ ಅನಿವಾರ್ಯವೆಂದ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, 3 ತಿಂಗಳಿನಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಸಿಬಿಐಗೆ ಸೂಚನೆ ನೀಡಿದೆ.
ಇನ್ನು ಸಿಬಿಐ ತನಿಖೆಗೆ ಸಹಕರಿಸುವಂತೆ ಪೊಲೀಸರಿಗೂ ಸಹ ಹೈಕೋರ್ಟ್ ಸೂಚಿಸಿದೆ.
Advertisement