
ಬೆಂಗಳೂರು: ವಿಶ್ವವಿಖ್ಯಾತ ಹಂಪಿಯಿಂದ ಕೇವಲ 45 ಕಿಲೋ ಮೀಟರ್ ದೂರದಲ್ಲಿ ಒಡಿಶಾದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಮತ್ತು ಇಸ್ರೇಲ್ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ.
ಇದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿದೆ. ಪ್ರವಾಸಿ ತಾಣಗಳು ಎಷ್ಟು ಸಮಯದವರೆಗೆ ತೆರೆದಿರಬಹುದು; ರಾತ್ರಿಯಲ್ಲಿ ಎಷ್ಟು ಹೊತ್ತಿನವರೆಗೆ ಪ್ರವಾಸಿಗರಿಗೆ ಬಿಡಬಹುದು, ಎಲ್ಲಿ ಮತ್ತು ಎಷ್ಟು ಭದ್ರತೆಯನ್ನು ಒದಗಿಸಬೇಕು, ಸುರಕ್ಷಿತ ಪ್ರವಾಸಿ ತಾಣಗಳ ಪಟ್ಟಿಯನ್ನು ಸಾರ್ವಜನಿಕಗೊಳಿಸುವುದು ಮುಂತಾದ ಅನೇಕ ವಿಷಯಗಳ ಕುರಿತು ಚರ್ಚೆಯನ್ನು ಹುಟ್ಟುಹಾಕಿವೆ.
ಆತಿಥ್ಯಕ್ಕೆ ಹೆಸರು ಪಡೆದ ಕನ್ನಡಿಗರ ತವರೂರಾದ ಕರ್ನಾಟಕದಲ್ಲಿ ಪ್ರವಾಸಿ ತಾಣಗಳಿಗೇನೂ ಕೊರತೆಯಿಲ್ಲ, ದೇಶ ವಿದೇಶಗಳಿಂದ ಪ್ರತಿವರ್ಷ ಎಲ್ಲಾ ಋತುಗಳಲ್ಲಿ ಇಲ್ಲಿಗೆ ಪ್ರವಾಸಕ್ಕೆ ಬರುತ್ತಾರೆ. ಆರೋಗ್ಯ, ಧಾರ್ಮಿಕ, ಪರಿಸರ, ಸಾಹಸಿ ಪ್ರವಾಸ ತಾಣಗಳು, ಸಭೆಗಳು ನಡೆಯುವ, ಪ್ರೋತ್ಸಾಹಕ,ಸಮ್ಮೇಳನ ಮತ್ತು ಪ್ರದರ್ಶನಾ ಕೇಂದ್ರಗಳು ಸಹ ಪ್ರವಾಸೋದ್ಯಮದ ಜೊತೆ ಬೆರೆತುಕೊಂಡಿವೆ.
ಕೊಪ್ಪಳದ ಭೀಕರ ಘಟನೆಯ ನಂತರ, ಕರ್ನಾಟಕ ರಾಜ್ಯ ಗೃಹ ಇಲಾಖೆಯು ಹೋಂಸ್ಟೇ/ಹೋಟೆಲ್/ರೆಸಾರ್ಟ್ ಮಾಲೀಕರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸಿತು. ಪ್ರವಾಸಿಗರನ್ನು ಅರಣ್ಯ ಅಥವಾ ನಿರ್ಜನ ಸ್ಥಳಗಳಿಗೆ ಕರೆದೊಯ್ಯುವ ಮೊದಲು ಪೊಲೀಸ್ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯಗೊಳಿಸಿತು. ವಿದೇಶಿ ಪ್ರವಾಸಿಗರು ಬಂದ 24 ಗಂಟೆಗಳ ಒಳಗೆ ಅವರ ಪ್ರಯಾಣದ ವಿವರಗಳನ್ನು ತಿಳಿಸಲು ಎಲ್ಲಾ ಆಸ್ತಿ ಮಾಲೀಕರು ಫಾರ್ಮ್-ಸಿಯನ್ನು ಭರ್ತಿ ಮಾಡಲು ವಲಸೆ ಬ್ಯೂರೋ ಹೊರಡಿಸಿದ ಆದೇಶವನ್ನು ಸರ್ಕಾರ ಪುನರುಚ್ಛರಿಸಿದೆ.
ಪ್ರವಾಸೋದ್ಯಮ ಇಲಾಖೆಯೊಂದಿಗೆ ನಿಕಟವಾಗಿ ಕೆಲಸ ಮಾಡುವ ತಜ್ಞರು ಹೇಳುವ ಪ್ರಕಾರ, ಪೊಲೀಸ್ ವ್ಯವಸ್ಥೆ ಮತ್ತು ಎಲ್ಲರಿಗೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಮಧ್ಯೆ ಅಂತರವಿದೆ. ಪೊಲೀಸರು, ಜಿಲ್ಲಾಡಳಿತ ಮತ್ತು ಆಸ್ತಿ ಮಾಲೀಕರು ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲಾ ಹೋಟೆಲ್‌ಗಳು/ಹೋಂಸ್ಟೇಗಳು/ರೆಸಾರ್ಟ್‌ಗಳ ಲಾಗ್ ಪುಸ್ತಕವನ್ನು ನಿರ್ವಹಿಸಬೇಕು. ಪ್ರತಿ ಹದಿನೈದು ದಿನಗಳಿಗೊಮ್ಮೆ ಅದನ್ನು ಪರಿಶೀಲಿಸಬೇಕು. ಆಸ್ತಿ ಮಾಲೀಕರ ವಿವರಗಳನ್ನು ಪೊಲೀಸರು ಪರಿಶೀಲಿಸಬೇಕು ಎನ್ನುತ್ತಾರೆ.
ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈ ಲೋಪಗಳನ್ನು ಒಪ್ಪಿಕೊಳ್ಳುತ್ತಾರೆ. ಹೋಂಸ್ಟೇಗಳು ಮತ್ತು ಹೋಟೆಲ್‌ಗಳಲ್ಲಿ, ವಿಶೇಷವಾಗಿ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಅಕ್ರಮ ಚಟುವಟಿಕೆಗಳು ಬೆಳಕಿಗೆ ಬಂದ ನಂತರ, ರಾಜ್ಯ ಸರ್ಕಾರವು ಎಲ್ಲಾ ಆಸ್ತಿಗಳ ದಾಸ್ತಾನು ತಯಾರಿಸಲು ಮತ್ತು ಅಕ್ರಮ ಆಸ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿತು. ಅಭಿಯಾನ ಇನ್ನೂ ಪೂರ್ಣಗೊಂಡಿಲ್ಲ ಎನ್ನುತ್ತಾರೆ.
ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ (CHA) ಸದಸ್ಯರು ಜಾಗೃತರಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಹೋಂಸ್ಟೇಗಳನ್ನು ಹೊಂದಿದ್ದರೂ, ಕೆಲವೇ ಕೆಲವು ನಿಯಮಗಳನ್ನು ಪಾಲಿಸುತ್ತವೆ ಎಂದು ಸಿಎಚ್‌ಎ ಅಧ್ಯಕ್ಷೆ ಮೊಂತಿ ಗಣೇಶ್ ಹೇಳುತ್ತಾರೆ.
ಹೋಂಸ್ಟೇಗೆ ಸ್ಪಷ್ಟವಾದ ವ್ಯಾಖ್ಯಾನವಿದೆ - ಐದು-ಆರು ಕೊಠಡಿಗಳಿಗಿಂತ ಹೆಚ್ಚು ಇಲ್ಲದ ಮನೆಗಳನ್ನು ಹೊಂದಿರುವ ಆಸ್ತಿಗಳು ಮತ್ತು ಮಾಲೀಕರು ಅಲ್ಲಿ ವಾಸಿಸುತ್ತಾರೆ. ನಾವು ಅಂತಹ ಹೋಂಸ್ಟೇಗಳ ಪಟ್ಟಿಯನ್ನು ಸಮೀಕ್ಷೆ ಮಾಡಿ ಸಿದ್ಧಪಡಿಸಿದ್ದೇವೆ. ಅವುಗಳನ್ನು ನಿಯಮಿತವಾಗಿ ಪರಿಶೀಲಿಸುತ್ತೇವೆ ಮತ್ತು ಪಟ್ಟಿಯನ್ನು ನವೀಕರಿಸುತ್ತೇವೆ. ಕೂರ್ಗ್‌ಗೆ ಭೇಟಿ ನೀಡುವ ಸಂದರ್ಶಕರು ಪಟ್ಟಿಯನ್ನು ಪರಿಶೀಲಿಸಬೇಕು ಎಂದು ಅವರು ಹೇಳುತ್ತಾರೆ.
ದಕ್ಷಿಣ ಭಾರತ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಸಂಘದ ಕಾರ್ಯಾಚರಣೆ ನಿರ್ದೇಶಕ ಸುಂದರ್ ಸಿಂಗರಾಮ್, ಆಸ್ತಿ ಮತ್ತು ಮಾರ್ಗದರ್ಶಕರು ಸಾಮಾನ್ಯವಾಗಿ ಪ್ರವಾಸಿಗರಿಗೆ ಸುರಕ್ಷತೆ ಮತ್ತು ಸಮಯದ ಬಗ್ಗೆ ಸಲಹೆ ನೀಡುತ್ತಾರೆ. ಅದನ್ನು ಪ್ರವಾಸಿಗರು ಅನುಸರಿಸುತ್ತಾರೆ, ಆದರೆ ಕೆಲವರು ಅನುಸರಿಸುವುದಿಲ್ಲ. ಇತ್ತೀಚೆಗೆ ಮುನ್ನಾರ್‌ನಲ್ಲಿ ನಡೆದಂತೆ, ಎಚ್ಚರಿಕೆಗಳ ಹೊರತಾಗಿಯೂ, ಒಬ್ಬ ಜರ್ಮನ್ ಪ್ರಜೆ ಬೈಕ್ ನಲ್ಲಿ ಕಾಡಿನೊಳಗೆ ಹೋದಾಗ ಆನೆಯ ದಾಳಿಗೆ ಒಳಗಾದರು. ಆಯ್ದ ಸ್ಮಾರಕಗಳಿರುವ ಪ್ರವಾಸಿ ಸ್ಥಳಗಳಲ್ಲಿ ಮಾತ್ರ ಪೊಲೀಸ್ ಮತ್ತು ಭದ್ರತಾ ಕ್ರಮಗಳು ಲಭ್ಯವಿದೆ. ಉಳಿದ ಸ್ಥಳಗಳಲ್ಲಿ, ಸ್ಥಳೀಯ ಆಸ್ತಿ ಮಾಲೀಕರ ಅನುಭವವು ನಿರ್ಣಾಯಕವಾಗಿದೆ ಎಂದು ಅವರು ಹೇಳುತ್ತಾರೆ.
ರಾಜ್ಯ ಪ್ರವಾಸೋದ್ಯಮದ 'ಒಂದು ರಾಜ್ಯ ಹಲವು ಪ್ರಪಂಚಗಳು' ಎಂಬ ಟ್ಯಾಗ್‌ಲೈನ್‌ನಂತೆ, ಪ್ರತಿಯೊಂದು ಜಿಲ್ಲೆಯ ಪ್ರವಾಸೋದ್ಯಮ ವಿಚಾರಗಳು ವಿಭಿನ್ನವಾಗಿರುತ್ತವೆ. ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ (ಸೌಲಭ್ಯ ಮತ್ತು ನಿಯಂತ್ರಣ) (KTTF) ಕಾಯ್ದೆ, 2015 ನ್ನು ಪಾಲಿಸುವಂತೆ ಆಸ್ತಿ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆಗಳನ್ನು ನೀಡಲಾಗಿದ್ದರೂ, ಸುಧಾರಣೆಗಳಿಗಾಗಿ ಅಧಿಕಾರಿಗಳಿಗೆ ಒತ್ತಡ ಹೇರಲಾಗುತ್ತಿದೆ.
Advertisement