ರಾಜ್ಯ ಸರ್ಕಾರದ ಗೌರವವನ್ನು ಸಚಿವರೇ ಹಾಳು ಮಾಡುತ್ತಿದ್ದಾರೆ : ಸ್ಪೀಕರ್‌ ಯು ಟಿ ಖಾದರ್ ಗರಂ

ಸಮಯಕ್ಕೆ ಸರಿಯಾಗಿ ವಿಧಾನಸಭಾ ಅಧಿವೇಶಕ್ಕೆ ಹಾಜರಾಗಲು ಮತ್ತು ಚರ್ಚೆಗಳಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ ಏಕೆ ಸಚಿವರಾಗಬೇಕು?
ಯುಟಿ ಖಾದರ್
ಯುಟಿ ಖಾದರ್
Updated on

ಬೆಂಗಳೂರು: ಸದನದಲ್ಲಿ ಸಚಿವರ ಗೈರುಹಾಜರಿಯಿಂದ ಗರಂ ಆದ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಅವರು ಸಚಿವರೇ ರಾಜ್ಯ ಸರ್ಕಾರದ ಗೌರವವನ್ನು ಹಾಳು ಮಾಡುತ್ತಿದ್ದಾರೆ ಎಂದು ಮಂಗಳವಾರ ಬೇಸರ ವ್ಯಕ್ತಪಡಿಸಿದರು.

ಸಮಯಕ್ಕೆ ಸರಿಯಾಗಿ ವಿಧಾನಸಭಾ ಅಧಿವೇಶಕ್ಕೆ ಹಾಜರಾಗಲು ಮತ್ತು ಚರ್ಚೆಗಳಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ ಏಕೆ ಸಚಿವರಾಗಬೇಕು?, ಸರ್ಕಾರದ ಪರವಾಗಿ ಶಾಸಕರ ಪ್ರಶ್ನೆಗಳಿಗೆ ಉತ್ತರ ನೀಡಲಾಗದಿದ್ದರೆ ಏಕೆ ಮಂತ್ರಿಯಾಗಬೇಕು? ಎಂದು ಸ್ಪೀಕರ್ ಖಾರವಾಗಿಯೇ ಪ್ರಶ್ನಿಸಿದರು.

ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಕಾನೂನು ಮತ್ತು ಸುವ್ಯವಸ್ಥೆ ವಿಷಯ ಪ್ರಸ್ತಾಪಿಸುತ್ತಾ, ಸದನದಲ್ಲಿ ಸಚಿವರಿಲ್ಲ, ಇದ್ದ ಒಬ್ಬ ಸಚಿವರು ಎದ್ದು ಹೊರ ನಡೆದಿದ್ದಾರೆ. ಒಬ್ಬಳೇ ಪದ್ಮಾವತಿ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದರು.

ಈ ವೇಳೆ ಮಾತನಾಡಿದ ಸ್ಪೀಕರ್, ಸಚಿವರು ಸದನದಲ್ಲಿ ಹಾಜರಿರಬೇಕು, ಅವರ ಗೈರುಹಾಜರಿಯನ್ನು ಯಾರೂ ಸಹಿಸುವುದಿಲ್ಲ. ಸಚಿವರು ಈ ಸರ್ಕಾರದ ಘನತೆಯನ್ನು ಕುಗ್ಗಿಸುತ್ತಿದ್ದಾರೆ. ಉತ್ತಮ ಕೆಲಸಗಳ ಹೊರತಾಗಿಯೂ, ಸಚಿವರು ಸಮಯಕ್ಕೆ ಸರಿಯಾಗಿ ಸದನಕ್ಕೆ ಬಾರದೇ ಸರ್ಕಾರದ ಗೌರವವನ್ನು ತೆಗೆಯುತ್ತಿದ್ದಾರೆ ಎಂದು ಕಿಡಿ ಕಾರಿದರು.

ಯುಟಿ ಖಾದರ್
ಎಲ್ಲದಕ್ಕೂ ಒಂದು ಮಿತಿ ಇದೆ- ಗೆಟ್ ಔಟ್: ಹರೀಶ್ ಪೂಂಜಾಗೆ ಸ್ಪೀಕರ್ ವಾರ್ನಿಂಗ್; ಸದನದಲ್ಲಿ ಖಾದರ್ ಕೆಂಡಾಮಂಡಲ

ಪ್ರತಿಪಕ್ಷದವರು ಹೇಳುವುದು ತಪ್ಪೆಂದು ಹೇಳುತ್ತಿಲ್ಲ. ಸದನದಲ್ಲಿ ಸಚಿವರು ಇರಬೇಕೆಂದು ಅವರು ಕೇಳುವುದು ಸರಿಯಿದೆ. ಮುಖ್ಯಮಂತ್ರಿ ಇದ್ದಾಗ ಎಲ್ಲಾ ಸಚಿವರೂ ಬರುತ್ತಾರೆ. ಅವರಿಲ್ಲದಿದ್ದಾಗಲೂ ಎಲ್ಲಾ ಸಚಿವರಿರಬೇಕು. ಮುಖ್ಯಮಂತ್ರಿ ಬೆಂಬಲಕ್ಕೆ ಸಚಿವರು ನಿಲ್ಲುವುದು ಬೇಕಾಗಿಲ್ಲ. ಅವರು ಸಮರ್ಥಿಸಿಕೊಳ್ಳುತ್ತಾರೆ ಎಂದು ಹೇಳಿದರು.

"ಈ ಸರ್ಕಾರವನ್ನು ಪ್ರಶ್ನಿಸಲು ಸದನದಲ್ಲಿ ಯಾರಿದ್ದಾರೆ? ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಪ್ರಶ್ನಿಸಲು ಯಾರೂ ಇಲ್ಲ, ಸ್ಪೀಕರ್ ಮುಂದೆ ಬಂದು ನಮ್ಮನ್ನು ರಕ್ಷಿಸಬೇಕು, ನೀವು (ಸ್ಪೀಕರ್) ಅಸಹಾಯಕರಾಗಬಾರದು" ಎಂದು ಆರ್ ಅಶೋಕ್ ಹೇಳಿದರು.

ಬಿಜೆಪಿ ಶಾಸಕ ಸುನೀಲ್‌ ಕುಮಾರ್ ಮಾತನಾಡಿ, ಕಾರ್ಯಸೂಚಿ ಪ್ರಕಾರ ಸದನ ನಡೆಸಲು ತಕರಾರಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ವಿಚಾರ ಗಂಭೀರವಾಗಿದ್ದು, ಅದಕ್ಕೆ ಅವಕಾಶ ಮಾಡಿಕೊಡಬೇಕು. ರಾಜ್ಯದಲ್ಲಿ ಭಯದ ವಾತಾವರಣವಿದೆ. ಹಲವು ಘಟನೆಗಳು ರಾಜ್ಯದಲ್ಲಿ ಘಟಿಸಿವೆ. ಅದರ ಪ್ರಸ್ತಾಪವಾಗಬೇಕು ಎಂದು ಆಗ್ರಹಿಸಿದರು.

ಯುಟಿ ಖಾದರ್
ಅಧಿಕಾರಿಗಳಿಂದ ಶಾಸಕರಿಗೆ ಅವಮಾನ: ಹಕ್ಕುಬಾಧ್ಯತಾ ಸಮಿತಿಗೆ ವರ್ಗಾಯಿಸಿದ ಸ್ಪೀಕರ್ ಯು ಟಿ ಖಾದರ್

ಇದಕ್ಕು ಮುನ್ನ ಸದನದಲ್ಲಿ ಸಚಿವರಿಲ್ಲ ಎಂಬ ಆಕ್ಷೇಪವನ್ನು ಬಿಜೆಪಿ ಶಾಸಕರು ಪ್ರಸ್ತಾಪಿಸಿದರು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್, ಸದನದಲ್ಲಿ ಇಂದು ಹಾಜರಿರಬೇಕಾದ ಸಚಿವರುಗಳ ಹೆಸರುಗಳನ್ನು ಉಲ್ಲೇಖಿಸಿದರು. ಸಚಿವರಾದ ಕೆ.ಎಚ್‌.ಮುನಿಯಪ್ಪ, ಕೆ.ಜೆ.ಜಾರ್ಜ್‌, ದಿನೇಶ್‌ ಗುಂಡೂರಾವ್‌, ಕೃಷ್ಣಭೈರೇಗೌಡ, ಡಾ.ಎಚ್‌.ಸಿ.ಮಹದೇವಪ್ಪ, ಪ್ರಿಯಾಂಕ್‌ ಖರ್ಗೆ, ಜಮೀರ್‌ ಅಹಮದ್‌ ಖಾನ್‌, ಈಶ್ವರ್‌ ಖಂಡ್ರೆ ಸೇರಿದಂತೆ ಸದನಕ್ಕೆ ಗೈರು ಆಗಿದ್ದ ಸಚಿವರ ಹೆಸರುಗಳನ್ನು ವಾಚಿಸಿ ಮೂವರು ಸಚಿವರು ಮಾತ್ರ ಸದನದಲ್ಲಿ ಹಾಜರಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com