
ಬೆಂಗಳೂರು: ನಟಿ ರನ್ಯಾ ರಾವ್ ಅವರ ಚಿನ್ನದ ಕಳ್ಳಸಾಗಣೆ ಪ್ರಕರಣ ಮತ್ತು ಹನಿ ಟ್ರ್ಯಾಪ್ ಯತ್ನ ಪ್ರಕರಣಗಳು ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಸದ್ದು ಮಾಡಿತು.
ಕಾನೂನು ಸುವ್ಯವಸ್ಥೆ ಮೇಲೆ ನಿಯಮ 69ರಡಿ ಚರ್ಚೆ ನಡೆಸಿದ ಶಾಸಕ ಸುನೀಲ್ ಕುಮಾರ್ ಅವರು, ನಾವು ಇಲ್ಲಿ 224 ಶಾಸಕರಿದ್ದೇವೆ. ಸಾರ್ವಜನಿಕವಾಗಿ ಗೌರವದಿಂದ ಕೆಲಸ ಮಾಡುತ್ತಿದ್ದೇವೆ. ಈ ಸರ್ಕಾರದಲ್ಲಿ ನಿನ್ನೆ, ಮೊನ್ನೆಯಿಂದ ಹನಿಟ್ರ್ಯಾಪ್ ಬಗ್ಗೆ ಸುದ್ದಿ ಆಗುತ್ತಿದೆ. ಸಾರ್ವಜನಿಕ ವ್ಯವಸ್ಥೆಯಲ್ಲಿ ಗೌರವದಿಂದ ಬದುಕುವುದು ಬೇಡವೇ? ಯಾರ‍್ಯಾರೋ ಹನಿಟ್ರ್ಯಾಪ್ ಮಾಡುತ್ತಿದ್ದಾರೆ ಎಂದರೆ ಏನು ಪರಿಸ್ಥಿತಿ? ಸಾರ್ವಜನಿಕ ಬದುಕೇ ಬೇಡ ಎನ್ನುವಷ್ಟು ಸುದ್ದಿ ಹರಿದಾಡುತ್ತಿದೆ. ಹೀಗಾದರೆ ಸರ್ಕಾರಕ್ಕೆ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದರು.
ವಿರೋಧಿಗಳನ್ನು, ತಮ್ಮ ಪಕ್ಷದಲ್ಲಿರುವ ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕಬೇಕೆನ್ನುವ ಕಾರಣಕ್ಕೆ ಯಾವ ಮಟ್ಟಕ್ಕೂ ಹೋಗಬಹುದೇ? ಸರ್ಕಾರವೇ ಹನಿ ಟ್ರ್ಯಾಪ್ ಫ್ಯಾಕ್ಟರಿ ಇಟ್ಟುಕೊಂಡರೆ, ಯಾರಿಗೆ ಬುದ್ಧಿ ಹೇಳುತ್ತೀರಿ? ಯಾರಿಗೆ ಉಪದೇಶ ಮಾಡುತ್ತೀರಿ? ಗೃಹ ಇಲಾಖೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ವಿರೋಧಿಗಳನ್ನು, ಸ್ವಪಕ್ಷೀಯರನ್ನು ಹತ್ತಿಕ್ಕಲು ಬೇರೆ ಮಾರ್ಗ ಇಲ್ಲವೇ? ಇದರ ಬಗ್ಗೆ ಒಂದುಗೂಡಿ ಕೈ ಜೋಡಿಸಬೇಕು. ಈ ಸರ್ಕಾರ ಅಪರಾಧಿಗಳಿಗೆ ಸಿಂಹಸ್ವಪ್ನ ಆಗಿದೆ ಎಂಬ ಸಂದೇಶ ಕಳುಹಿಸಬೇಕು. ಸಮಾಜಘಾತುಕ ಚಟುವಟಿಕೆ ಮಾಡಿದರೆ ಸಾಸಿವೆ ಕಾಳಷ್ಟು ಸಹಿಸಲ್ಲ ಎಂಬ ಎಚ್ಚರಿಕೆ ನೀಡಬೇಕು’ ಎಂದರು.
ಗಂಡಭೇರುಂಡ ಲಾಂಛನ ಹಾಕಿಕೊಂಡ ನಂತರ ಗಂಡಸ್ಥನದಿಂದ ಸರ್ಕಾರ ನಡೆಸಬೇಕು. ಯಾರು ಬೇಕಾದರೂ ಏನು ಬೇಕಾದರೂ ಮಾಡಬಹುದು ಎನ್ನುವಂಥದ್ದು ಬೇಡ. ಗೃಹ ಇಲಾಖೆ ನಡೆಸಲು ಇಷ್ಟ ಇಲ್ಲವೇ ಅಥವಾ ಇಲಾಖೆಯಲ್ಲಿ ಯಾರಾದರೂ ಕೈ ಆಡಿಸುತ್ತಿದ್ದಾರೆಯೇ? ಇಲಾಖೆ ನಡೆಸಲು ಗೃಹ ಸಚಿವರಿಗೆ ಸ್ವಾತಂತ್ರ್ಯ ಇಲ್ಲವೇ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ಚಲನಚಿತ್ರ ನಟಿಯೊಬ್ಬರು ಗೋಲ್ಡ್ ಸ್ಮಗ್ಲಿಂಗ್ನಲ್ಲಿ ಸಿಕ್ಕಿಬಿದ್ದಿದ್ದಾರೆ. ಸುಮಾರು 25 ಬಾರಿ ರನ್ಯಾ ರಾವ್ ಪ್ರೋಟೋಕಾಲ್ ಪಡೆದಿದ್ದಾರೆ. ಯಾರು ಪ್ರೋಟೋಕಾಲ್ ಕೊಟ್ಟವರು? 25 ಸಲ ಬಸವರಾಜು ಅನ್ನೋ ಕಾನ್ಸ್‌ಟೇಬಲ್ ಬಂದಿದ್ದ. ಆ ಕಾನ್ಸ್‌ಟೇಬಲ್ ಪಾತ್ರ ಇದೆಯಾ? ಅಥವಾ ಸಹಾಯ ಮಾಡಿದ್ದಾನಾ? ಆತ ಯಾಕೆ ಪೊಲೀಸರಿಗೆ ಮಾಹಿತಿ ಕೊಡಲಿಲ್ಲ? ಇಬ್ಬರು ಸಚಿವರ ಪಾತ್ರದ ಬಗ್ಗೆಯೂ ಚರ್ಚೆ ಆಗುತ್ತಿದೆ ಎಂದರು.
ನಾನು ಕಸ್ಟಮ್ಸ್ ಫೆಲ್ಯೂರ್ ಅಂತ ಹೇಳಿಲ್ಲ. ಇಬ್ಬರು ಸಚಿವರ ಪಾತ್ರದ ಬಗ್ಗೆ ಸಾರ್ವಜನಿಕ ಚರ್ಚೆ ಆಗ್ತಿದೆ. ಅಷ್ಟೂ ಸಲ ಕಳ್ಳಸಾಗಣೆ ಆದ ಚಿನ್ನ ಎಲ್ಲಿ ಹೋಯ್ತು? ಯಾರ ಮನೆಗೆ ಹೋಯ್ತು? ಇದರ ತನಿಖೆ ಆಗಬೇಕು. ಬೆಂಗಳೂರು ಚಿನ್ನ ಕಳ್ಳಸಾಗಣೆ ಕೇಂದ್ರ ಆಗದಂತೆ ತಡೆಯಿರಿ" ಎಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆಯವರು, ಸುಮ್ಮನೆ ಆರೋಪ ಮಾಡುವುದಲ್ಲ, ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಸಚಿವರ ಹೆಸರುಗಳನ್ನು ಬಹಿರಂಗಪಡಿಸಿ ಎಂದು ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸವಾಲು ಹಾಕಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ರನ್ಯಾ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಸ್ವತಃ ಮಾಹಿತಿದಾರರಾಗಿ ತಮ್ಮದೇ ನಾಯಕರ ಸಿಲುಕಿಸಲು ಮುಂದಾಗಿದ್ದಾರೆಂದು ಲೇವಡಿ ಮಾಡಿದರು.
ಹಿಂದಿನ ಸ್ಥಾನಗಳಲ್ಲಿ ಕುಳಿತಿರುವ ಶಾಸಕರು ಮುಂದಿನ ಸ್ಥಾನಗಳಿಗೆ ಬಡ್ತಿ ಪಡೆಯುವ ನಿರೀಕ್ಷೆಯಲ್ಲಿರಬಹುದು, 2-3 ಸಚಿವರ ಹುದ್ದೆ ಉರುಳುವ ನಿರೀಕ್ಷೆಯಲ್ಲಿರಬಹುದು ಎಂದು ಹೇಳಿದರು.
Advertisement