
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹನಿ ಟ್ರ್ಯಾಪ್ ಭಾರಿ ಸದ್ದು ಮಾಡುತ್ತಿದ್ದು, ಸಚಿವರೊಬ್ಬರ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಗೆ ಯತ್ನ ನಡೆದಿದೆ. ಆದರೆ ಅವರ ಪ್ರಯತ್ನ ವಿಫಲವಾಗಿದೆ ಎಂದು ಗುರುವಾರ ಸಚಿವ ಸತೀಶ್ ಜಾರಕಿಹೊಳಿ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ANI ಜೊತೆ ಮಾತನಾಡಿದ ಜಾರಕಿಹೊಳಿ, "ಹನಿ ಟ್ರ್ಯಾಪ್ ಗೆ ಪ್ರಯತ್ನಿಸಲಾಗಿದೆ ಎಂಬುದು ನಿಜ. ಆದರೆ ಅದು ಯಶಸ್ವಿಯಾಗಿಲ್ಲ. ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹ ಕೃತ್ಯ ನಡೆದಿಲ್ಲ. ಕಳೆದ 20 ವರ್ಷಗಳಿಂದ ಈ ಹನಿ ಟ್ರ್ಯಾಪ್ ದಂದೆ ನಡೆಯುತ್ತಿದೆ. ಪ್ರತಿಯೊಂದು ಪಕ್ಷ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಎಲ್ಲಾ ಪಕ್ಷಗಳು ಇದಕ್ಕೆ ಬಲಿಯಾಗಿವೆ" ಎಂದು ಹೇಳಿದ್ದಾರೆ.
ಈ ವಿಷಯದ ಬಗ್ಗೆ ದೂರು ದಾಖಲಿಸಬೇಕು ಮತ್ತು ತನಿಖೆ ನಡೆಸಬೇಕು ಎಂದು ನಾವು ಒತ್ತಾಯಿಸಿದ್ದೇವೆ... ಸಂತ್ರಸ್ತರು ಮುಂದೆ ಬಂದು ದೂರು ದಾಖಲಿಸಲು ನಾವು ಹೇಳಿದ್ದೇವೆ. ಆಗ ಮಾತ್ರ ಅದನ್ನು ತನಿಖೆ ಮಾಡಬಹುದು ಮತ್ತು ಸತ್ಯ ಹೊರಬರುತ್ತದೆ" ಎಂದು ಅವರು ಹೇಳಿದರು.
ಸಚಿವರೊಬ್ಬರ ಮೇಲೆ ಎರಡು ಬಾರಿ ಹನಿಟ್ರ್ಯಾಪ್ ಗೆ ಯತ್ನಿಸಲಾಗಿದೆ. ಸಚಿವರಿಗೆ ಹನಿಟ್ರ್ಯಾಪ್ ಆಗಿರುವುದು ನಿಜ. ಈ ಒಂದು ಹನಿಟ್ರ್ಯಾಪ್ ನಲ್ಲಿ ನಮ್ಮವರು ಅಷ್ಟೇ ಅಲ್ಲದೆ ಬೇರೆ ಪಕ್ಷದ ನಾಯಕರು ಕೂಡ ಹನಿಟ್ರ್ಯಾಪ್ ನಲ್ಲಿ ಸಿಲುಕಿದ್ದಾರೆ ಎಂದು ತಿಳಿಸಿದರು.
ಹನಿಟ್ರ್ಯಾಪ್ ಒಳ್ಳೆಯ ಬೆಳವಣಿಗೆಯಲ್ಲ. ನಾವು ಇದನ್ನು ಇಷ್ಟಕ್ಕೆ ಬಿಡುವುದು ಸರಿಯಲ್ಲ. ಪಕ್ಷದ ಪ್ರಮುಖ ನಾಯಕರ ಗಮನಕ್ಕೆ ತರಲು ಬಯಸಿದ್ದೇವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
Advertisement