
ಬೆಂಗಳೂರು: ಶಾಸಕರು, ಸಚಿವರಿಗೆ ಹನಿಟ್ರ್ಯಾಪ್ ಮಾಡಲಾಗುತ್ತಿದೆ ಎಂಬ ಆರೋಪ ಕುರಿತು ವಿಧಾನಸಭೆಯಲ್ಲಿಂದು ಗಂಭೀರ ಚರ್ಚೆ ನಡೆಯಿತು. ಬೆಳಗ್ಗೆ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಆಗಿದೆ ಎಂದು ಆರೋಪಿಸಿದರು.
ಈ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಜಣ್ಣ, ಕರ್ನಾಟಕ ಮಾತ್ರದಲ್ಲದೇ ದೇಶಾದ್ಯಂತ ಹನಿಟ್ರ್ಯಾಪ್ ನಡೆಯುತ್ತಿದೆ. ಕರ್ನಾಟಕ ಸಿಡಿ, ಪೆನ್ ಡ್ರೈವ್ ಕಾರ್ಖಾನೆ ಆಗಿದೆ. 48 ಜನರ ಹನಿಟ್ರ್ಯಾಪ್ ಮಾಡಲಾಗಿದೆ. ಸಿಡಿ, ಪೆನ್ ಡ್ರೈವ್ ಮಾಡುವಂತ 48 ಜನರು ಇದ್ದಾರೆ. ಈ ಸಂಬಂಧ ಗೃಹ ಸಚಿವರಿಗೆ ಲಿಖಿತ ದೂರ ನೀಡುತ್ತೇನೆ. ಗೃಹ ಸಚಿವರು ವಿಶೇಷ ತನಿಖೆ ಮಾಡಿಸಲಿ, ತದನಂತರ ಇದರ ಹಿಂದಿರುವ ನಿರ್ದೇಶಕರು ಯಾರೆಂಬುದು ಗೊತ್ತಾಗಲಿದೆ ಎಂದರು.
ಡಿಕೆ ಶಿವಕುಮಾರ್ ಮಹಾಪಾಪದ ಕೆಲಸ: ಈ ವೇಳೆ ಮಾತನಾಡಿದ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ, ನನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಕಾರಣ. 15 ವರ್ಷದ ನನ್ನ ಮೊಮ್ಮಕ್ಕಳು ಇದ್ದಾರೆ. ಹೆಚ್. ಡಿ ರೇವಣ್ಣ, ರಮೇಶ್ ಜಾರಕಿಹೊಳಿ ಮನೆ ಹಾಳು ಮಾಡಿದ್ದು, ಡಿಕೆ ಶಿವಕುಮಾರ್ ಮಹಾಪಾಪದ ಕೆಲಸ ಮಾಡುತ್ತಿದ್ದಾರೆ. ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಇಲ್ಲದಿದ್ದರೆ ಎಲ್ಲಾ ಶಾಸಕರ ಜೀವನ ಹಾಳು ಮಾಡುತ್ತಾರೆ ಎಂದು ಆರೋಪಿಸಿದರು.
ರಾಜಣ್ಣ ಮಾತಿಗೆ ಬೆಂಬಲ ಘೋಷಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅದರ ಕಡಿವಾಣಕ್ಕೆ ಒತ್ತಾಯಿಸಿದರು. ಮತ್ತೊಂದೆಡೆ ಯಾವ ರೀತಿಯ ತನಿಖೆ ನಡೆಸಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಪಟ್ಟುಹಿಡಿದ ವಿಪಕ್ಷ ನಾಯಕ ಆರ್.ಅಶೋಕ್, ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಉನ್ನತ ಮಟ್ಟದ ತನಿಖೆಗೆ ಆದೇಶ: ರಾಜಣ್ಣ ದೂರು ನೀಡಿದರೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುವುದಾಗಿ ಗೃಹ ಸಚಿವ ಕೆ.ಎನ್. ರಾಜಣ್ಣ ಸದನಕ್ಕೆ ಭರವಸೆ ನೀಡಿದರು. ಯತ್ನಾಳ್ ಸೇರಿ ಕೆಲವು ಸದಸ್ಯರು ಬಹಳ ಗಂಭೀರವಾದ ವಿಷಯ ಎತ್ತಿದ್ದಾರೆ. ಇದು ಈ ಸದನದ ಪ್ರತಿಯೊಬ್ಬ ಸದಸ್ಯನ ಪ್ರಶ್ನೆ, ಇದಕ್ಕೆ ಒಂದು ಫುಲ್ ಸ್ಟಾಪ್ ಹಾಕಬೇಕು ಎಂದರು.
Advertisement