ತಿರುಮಲದ ಕರ್ನಾಟಕ ಭವನ ಕಟ್ಟಡ ನವೀಕರಣ ಕಾಮಗಾರಿ ಮೇ ತಿಂಗಳಲ್ಲಿ ಪೂರ್ಣ: ಸಚಿವ ರಾಮಲಿಂಗಾರೆಡ್ಡಿ

ಕಾಮಗಾರಿ ಪೂರ್ಣಗೊಂಡ ಬಳಿಕ ಟೆಂಡರ್‌ ಕರೆದು ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗುವುದು. 4 ಸ್ಟಾರ್‌ ಹೋಟೆಲ್‌ಗಳ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (ಸಂಗ್ರಹ ಚಿತ್ರ)
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಆಂಧ್ರ ಪ್ರದೇಶದ ತಿರುಮಲದಲ್ಲಿರುವ ಕರ್ನಾಟಕ ಭವನ ಕಟ್ಟಡ ನವೀಕರಣ ಕಾರ್ಯ ಮೇ ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಬುಧವಾರ ಹೇಳಿದರು.

ಬುಧವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ತಿರುಪತಿಯಲ್ಲಿ ನವೀಕರಣ ಹಾಗೂ ನಿರ್ಮಾಣವಾಗುತ್ತಿರುವ ಕರ್ನಾಟಕ ಸರ್ಕಾರದ ಛತ್ರ ಮತ್ತು ಅತಿಥಿಗೃಹಗಳ ಕಾಮಗಾರಿಗಳನ್ನು ಮೇ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಕಾಮಗಾರಿ ಪೂರ್ಣಗೊಂಡ ಬಳಿಕ ಟೆಂಡರ್‌ ಕರೆದು ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗುವುದು. 4 ಸ್ಟಾರ್‌ ಹೋಟೆಲ್‌ಗಳ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ. ತಿರುಪತಿಯಲ್ಲಿರುವ ಶೇ.60ರಷ್ಟು ಕೊಠಡಿಗಳನ್ನು ಆನ್‌ಲೈನ್‌ ಮೂಲಕ ಒದಗಿಸಲಾಗುವುದು. ಉಳಿದ 40ರಷ್ಟನ್ನು ಕರ್ನಾಟಕದ ಭಕ್ತರಿಗೆ ಮೀಸಲಿಡಲಾಗುವುದು ಎಂದು ತಿಳಿಸಿದರು.

ತಿರುಮಲ ಕರ್ನಾಟಕ ರಾಜ್ಯ ಛತ್ರದಲ್ಲಿ ಹಳೇಬೀಡು ಬ್ಲಾಕ್ (ಕೆ.ಪಿ.ಎಸ್) ಕಟ್ಟಡದ ನವೀಕರಣ, ಹಂಪಿ ಮತ್ತು ಐಹೊಳೆ ಬ್ಲಾಕ್ ಕಟ್ಟಡದ ಕಾಮಗಾರಿಗಳು 2024-25ಸಾಲಿನಲ್ಲಿ ಮುಕ್ತಾಯಗೊಂಡಿದ್ದು, ಯಾತ್ರಾರ್ಥಿಗಳಿಗೆ ಆಫ್‍ಲೈನ್ ಮತ್ತು ಆನ್‍ಲೈನ್ ಮೂಲಕ ಕೊಠಡಿಗಳನ್ನು ಮಾಡಲಾಗುತ್ತಿದೆ. ಉಳಿದಂತೆ ಕೃಷ್ಣದೇವರಾಯ ವಿ.ವಿ.ಐ.ಪಿ ಬ್ಲಾಕ್ ಮತ್ತು ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ ಕಲ್ಯಾಣ ಮಂಟಪ ಕಟ್ಟಡದ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು ಸದರಿ ಕಟ್ಟಡಗಳಿಂದ ಪ್ರಸಕ್ತ ಸಾಲಿನಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗುತ್ತಿದೆ. ಹೊರರಾಜ್ಯಗಳಲ್ಲಿರುವ ಕರ್ನಾಟಕ ರಾಜ್ಯದ ಛತ್ರ, ಆಸ್ತಿಗಳಿಂದ 2024-25ನೇ ಸಾಲಿನಲ್ಲಿ 11,54,61,170 ರೂ. ಆದಾಯ ಬಂದಿದೆ. ಈ ಛತ್ರಗಳಿಂದ ಬರುವ ಆದಾಯವು ಸರ್ಕಾರಕ್ಕೆ ಸಂದಾಯವಾಗುವುದಿಲ್ಲ ಎಂದರು.

ಪ್ರಸ್ತುತ ತಿರುಮಲ ಕರ್ನಾಟಕ ರಾಜ್ಯ ಛತ್ರದಲ್ಲಿ ಹೊಸದಾಗಿ ನವೀಕರಿಸಿರುವ ಹಳೇಬೀಡು(ಕೆಪಿಎಸ್) ಮತ್ತು ಹೊಸದಾಗಿ ನಿರ್ಮಾಣವಾಗಿರುವ ಹಂಪಿ ಮತ್ತು ಐಹೊಳೆ ಕಟ್ಟಡಗಳ ಸ್ವಚ್ಛತಾ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯವರಿಗೆ ವಹಿಸಲಾಗಿದೆ.

ತಿರುಮಲ ಕರ್ನಾಟಕ ರಾಜ್ಯ ಛತ್ರದ ಆವರಣದಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಯ ಕಾಮಗಾರಿಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಛತ್ರದ ದೈನಂದಿನ ನಿರ್ವಹಣೆಯ ವೆಚ್ಚಗಳಿಗಾಗಿ 2022-23ನೇ ಸಾಲಿನಿಂದ ಇಲ್ಲಿಯವರೆಗೆ ಸರಕಾರದಿಂದ 400 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವಾರಣಾಸಿ ಕರ್ನಾಟಕ ರಾಜ್ಯ ಛತ್ರದಲ್ಲಿ 4 ಮಂದಿ ಮತ್ತು ತಿರುಮಲದ ಕರ್ನಾಟಕ ರಾಜ್ಯ ಛತ್ರದಲ್ಲಿ 51 ಮಂದಿ ಅಧಿಕಾರಿ/ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಎಲ್ಲಾ ಸಿಬ್ಬಂದಿಗಳಿಗೆ ಸಮವಸ್ತ್ರ ಧರಿಸುವಂತೆ ಸೂಚಿಸಲಾಗುವುದು,. ಉತ್ತರ ಪ್ರದೇಶದ ಕಾಶಿ/ವಾರಣಾಸಿಯಲ್ಲಿ 1928ನೇ ಸಾಲಿನಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಿಸಿರುವ ಹಳೇ ಕಟ್ಟಡ ಮತ್ತು 2002ರಲ್ಲಿ ನಿರ್ಮಿಸಿರುವ ಕಟ್ಟಡಗಳಿದ್ದು, ಈ ಕಟ್ಟಡಗಳ ಪೈಕಿ ಹಳೆಯ ಕಟ್ಟಡವು ಭಾಗಶಃ ಕುಸಿದಿರುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಹಿತದೃಷ್ಟಿಯಿಂದ ಎರಡು ಕಟ್ಟಡದಲ್ಲಿನ ಕೊಠಡಿಗಳ ಹಂಚಿಕೆಯನ್ನು 2024 ರಿಂದ ಸ್ಥಗಿತಗೊಳಿಸಲಾಗಿದೆ.

ಕಾಶಿ ಮತ್ತು ತಿರುಮಲ ಕರ್ನಾಟಕ ರಾಜ್ಯ ಛತ್ರ/ಕರ್ನಾಟಕ ಭವನಗಳ ನಿರ್ವಹಣೆಯನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ನಿರ್ವಹಿಸಲಾಗುತ್ತಿದೆ. ವಾರಣಾಸಿ ಕರ್ನಾಟಕ ರಾಜ್ಯ ಛತ್ರದ ನಿರ್ವಹಣೆಯ ವೆಚ್ಚವನ್ನು ರಾಜ್ಯ ಛತ್ರದ ಆದಾಯದಿಂದ ಭರಿಸಲಾಗುತ್ತಿದೆ ಎಂದು ತಿಳಿಸಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (ಸಂಗ್ರಹ ಚಿತ್ರ)
Tirumala: ತಿರುಪತಿ ಅನ್ನಪ್ರಸಾದ ಟ್ರಸ್ಟ್‌ಗೆ 2,200 ಕೋಟಿ ರೂ ದೇಣಿಗೆ!

ಇನಾಂ ದತ್ತಾತ್ರೇಯ ಭೂಮಿ ವಿವಾದ: ಅಕ್ರಮದ ಬಗ್ಗೆ ತನಿಖೆ

ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠಕ್ಕೆ ಸೇರಿದ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡುವಲ್ಲಿ ಯಾವುದೇ ಅಕ್ರಮ ನಡೆದಿದ್ದರೆ, ಇಲಾಖೆಯ ಪ್ರಧಾನ ಕಾರ್ಯದರ್ಶಿ ತನಿಖೆ ನಡೆಸಲಿದ್ದಾರೆ ಎಂದು ಇದೇ ವೇಳೆ ಸಚಿವರು ಹೇಳಿದರು.

ದೇವಾಲಯದ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆಯೇ ಎಂಬ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸುತ್ತಿದ್ದರು.

ಚಿಕ್ಕಮಗಳೂರು ಜಾಗರ ಹೋಬಳಿ ಇನಾಮು ದತ್ತಾತ್ರೇಯ ಪೀಠ ಗ್ರಾಮದ ಆಕಾರಬಂಧಿನಂತೆ 6,213 ಎಕರೆ 25 ಗುಂಟೆ ಆಸ್ತಿ ಇದೆ. 104 ಎಕರೆ 39 ಗುಂಟೆ ಜಮೀನು ಮಂಜೂರಾಗಿದೆ. ದತ್ತಾತ್ರೇಯ ಪೀಠಕ್ಕೆ ಒಟ್ಟು 1861 ಎಕರೆ 31 ಗುಂಟೆ ಜಮೀನಿದೆ,. ಅಕ್ರಮವಾಗಿ ಭೂ ಮಂಜೂರಾಗಿದ್ದರೆ ಅದರ ಬಗ್ಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಿಂದ ತನಿಖೆ ನಡೆಸಲಾಗುವುದು. ಒಬ್ಬರಿಗೆ 6 ಎಕರೆಗಿಂತ ಹೆಚ್ಚು ಮಂಜೂರಾಗಿರುವ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com