ಪ್ರಧಾನಿ ಮೋದಿ ಕರೆಗೆ ತಲೆ ಬಾಗಿದ ರಾಜ್ಯ ಸರ್ಕಾರ: ಬಿಸಿಯೂಟದಲ್ಲಿ ಎಣ್ಣೆ ಬಳಕೆ ಶೇ.10ರಷ್ಟು ಕಡಿತ!

ಶಾಲಾ ವಯಸ್ಸಿನ ಮಕ್ಕಳಲ್ಲಿ ಬೊಜ್ಜು ಮತ್ತು ಹೃದಯ ಕಾಯಿಲೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳನ್ನು ಉಲ್ಲೇಖಿಸಿ ಕೇಂದ್ರ ಶಿಕ್ಷಣ ಸಚಿವಾಲಯದ ಪತ್ರವನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಶಾಲಾ ಬಿಸಿಯೂಟ ಯೋಜನೆಯಲ್ಲಿ ವಿದ್ಯಾರ್ಥಿಗಳು (ಸಂಗ್ರಹ ಚಿತ್ರ)
ಶಾಲಾ ಬಿಸಿಯೂಟ ಯೋಜನೆಯಲ್ಲಿ ವಿದ್ಯಾರ್ಥಿಗಳು (ಸಂಗ್ರಹ ಚಿತ್ರ)
Updated on

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಗೆ ತಲೆ ಬಾಗಿರುವ ರಾಜ್ಯ ಸರ್ಕಾರ, ಮಧ್ಯಾಹ್ನದ ಬಿಸಿಯೂಟದಲ್ಲಿ ಎಣ್ಣೆ ಬಳಕೆಯನ್ನು ಶೇ.10ರಷ್ಟು ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಶಾಲಾ ವಯಸ್ಸಿನ ಮಕ್ಕಳಲ್ಲಿ ಬೊಜ್ಜು ಮತ್ತು ಹೃದಯ ಕಾಯಿಲೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳನ್ನು ಉಲ್ಲೇಖಿಸಿ ಕೇಂದ್ರ ಶಿಕ್ಷಣ ಸಚಿವಾಲಯದ ಪತ್ರವನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಪಿಎಂ ಪೋಷಣ್‌ ಯೋಜನೆಯಡಿ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬಿಸಿಯೂಟಕ್ಕೆ ಬಳಸುವ ಸೂರ್ಯಕಾಂತಿಯ ಎಣ್ಣೆ ಪ್ರಮಾಣ ವನ್ನು ಶೇ. 10 ಕಡಿಮೆ ಮಾಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತ ಕೆ.ವಿ. ತ್ರಿಲೋಕಚಂದ್ರ ಸೂಚನೆ ನೀಡಿದ್ದಾರೆ.

ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನಶೈಲಿ ಉತ್ತೇಜಿಸಲು, ದೈನಂದಿನ ಊಟದಲ್ಲಿ ಎಚ್ಚರಿಕೆಯಿಂದ ಅಡುಗೆ ಎಣ್ಣೆ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಅತ್ಯಂತ ಕಡಿಮೆ ಅಡುಗೆ ಎಣ್ಣೆ ಬಳಸಿ ತಾಜಾ ಹಾಗೂ ಪೌಷ್ಟಿಕ ಬಿಸಿಯೂಟವನ್ನು ತಯಾರಿಸಲು ಮತ್ತು ಸೇವಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಶಾಲಾ ಬಿಸಿಯೂಟ ಯೋಜನೆಯಲ್ಲಿ ವಿದ್ಯಾರ್ಥಿಗಳು (ಸಂಗ್ರಹ ಚಿತ್ರ)
ರಾಜ್ಯ ಬಜೆಟ್ 2025: ಅತಿಥಿ ಶಿಕ್ಷಕರು, ಬಿಸಿಯೂಟ ಕಾರ್ಯಕರ್ತೆಯರಿಗೆ ಸಿಎಂ ಸಿಹಿ ಸುದ್ದಿ!

ಅಡುಗೆ ಎಣ್ಣೆಯ ಬಳಕೆಯನ್ನು ಕನಿಷ್ಠಗೊಳಿಸಲು ಬಿಸಿಯೂಟ ತಯಾರಿ ಸಿಬಂದಿಗೆ ಕಡ್ಡಾಯವಾಗಿ ತರಬೇತಿ ನೀಡಬೇಕು. ಆರೋಗ್ಯ ಸಂಸ್ಥೆಗಳು ಮತ್ತು ಗೃಹ ವಿಜ್ಞಾನ ಕಾಲೇಜುಗಳ ಪೌಷ್ಟಿಕಾಹಾರ ತಜ್ಞರನ್ನು ಆಹ್ವಾನಿಸಿ ಕಡಿಮೆ ಎಣ್ಣೆ ಬಳಸಿ ತಯಾರಿಸಬಹುದಾದ ಪಾಕ ವಿಧಾನವನ್ನು ಎಲ್ಲರಿಗೂ ತಲುಪಿಸಬೇಕು. ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಶಾಲಾ ಮಟ್ಟದಲ್ಲಿ ರಸಪ್ರಶ್ನೆ ಆಯೋಜಿಸಿ ಬಹುಮಾನ ವಿತರಿಸಬೇಕು. ಶಾಲೆಗಳಲ್ಲಿ ವ್ಯಾಯಾಮ, ಯೋಗ ಮತ್ತು ಕ್ರೀಡಾ ಚಟುವಟಿಕೆಗಳನ್ನು ನಿಯಮಿತವಾಗಿ ಆಯೋಜಿಸಬೇಕು ಎಂದು ಸೂಚಿಸಲಾಗಿದೆ.

ಶಾಲೆಗಳಲ್ಲಿ ಅಥವಾ ಮನೆಗಳಲ್ಲಿ ಡೀಪ್‌ ಫ್ರೈಯಿಂಗ್‌ ಮಾಡುವ ಬದಲು ಹಬೆಯಲ್ಲಿ ಬೇಯಿಸಬೇಕು. ಸಂಸ್ಕರಿಸಿದ ಆಹಾರಗಳು ಮತ್ತು ಜಂಕ್‌ ಫ‌ುಡ್ಸ್‌ ಅನಾರೋಗ್ಯ ಕರ ಕೊಬ್ಬು ಹೊಂದಿದ್ದು ಇಂತಹ ಆಹಾರಗಳ ಬಗ್ಗೆ ಜಾಗೃತಿ ಮೂಡಿಸ‌ಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಪರಿಷ್ಕೃತ ಮಾರ್ಗಸೂಚಿಗಳ ಅಡಿಯಲ್ಲಿ, ಮಧ್ಯಾಹ್ನದ ಊಟದಲ್ಲಿ ಬಳಸುವ ಸೂರ್ಯಕಾಂತಿ ಎಣ್ಣೆಯ ಪ್ರಮಾಣವನ್ನು 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ಮಗುವಿಗೆ 5 ಗ್ರಾಂ ಮತ್ತು 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ಮಗುವಿಗೆ 7.5 ಗ್ರಾಂಗೆ ಇಳಿಸಲಾಗಿದೆ.

ಶಾಲೆಗಳಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿದ್ದು 'ದಿ ಲ್ಯಾನ್ಸೆಟ್' ವರದಿಯಲ್ಲಿ ಪ್ರಕಟವಾದ ಇತ್ತೀಚಿನ ಸಂಶೋಧನೆಗಳು,

ಈ ಸಂಶೋಧನಾ ವರದಿ ಪ್ರಕಾರ ಭಾರತದಲ್ಲಿ 5 ರಿಂದ 19 ವರ್ಷ ವಯಸ್ಸಿನ ಅಧಿಕ ತೂಕವುಳ್ಳ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. 1990 ರಲ್ಲಿ 0.4 ಮಿಲಿಯನ್‌ನಷ್ಟಿದ್ದ ಮಕ್ಕಳ ಸಂಖ್ಯೆ 2022 ರಲ್ಲಿ 12.5 ಮಿಲಿಯನ್‌ಗೆ ಏರಿದೆ ಎಂದು ತಿಳಿಸಿದೆ.

ಶಾಲಾ ಬಿಸಿಯೂಟ ಯೋಜನೆಯಲ್ಲಿ ವಿದ್ಯಾರ್ಥಿಗಳು (ಸಂಗ್ರಹ ಚಿತ್ರ)
ಬಿಸಿಯೂಟ ಕಾರ್ಯಕರ್ತೆಯರು ಇನ್ಮುಂದೆ ಬಳೆ ತೊಡುವಂತಿಲ್ಲ ಆದೇಶ ರಾಜ್ಯ ಸರ್ಕಾರದ್ದಲ್ಲ: ಮುಖ್ಯಮಂತ್ರಿ ಸ್ಪಷ್ಟನೆ

ವರದಿಯಲ್ಲಿ ಅತಿಯಾದ ಎಣ್ಣೆ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಶಾಲಾ ಊಟದಲ್ಲಿ ಎಣ್ಣೆ ಬಳಕೆಯನ್ನು ಕಡಿಮೆ ಮಾಡುವ ಹಾಗೂ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ತುರ್ತು ಅಗತ್ಯವನ್ನು ವರದಿ ಒತ್ತಿಹೇಳಿತ್ತು.

ಈ ವಿಚಾರವನ್ನು ಪ್ರಧಾನಿ ಮೋದಿಯವರು ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲೂ ಪ್ರಸ್ತಾಪಿಸಿದ್ದರು. ಜಗತ್ತಿನಾದ್ಯಂತ ಜನರಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಯ ಕುರಿತು ಅವರು ಮಾತನಾಡಿದರು.

‘ನಮ್ಮ ಸಣ್ಣ–ಪುಟ್ಟ ಪ್ರಯತ್ನಗಳಿಂದಲೇ ನಾವು ಈ ಬೊಜ್ಜಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಉದಾಹರಣೆಗೆ ನಾನು ಒಂದು ವಿಧಾನವನ್ನು ಹೇಳಿಕೊಡುತ್ತೇನೆ: ಅಡುಗೆ ಎಣ್ಣೆ ಬಳಕೆಯಲ್ಲಿ ನಾನು ಪ್ರತಿ ತಿಂಗಳು ಶೇ 10ರಷ್ಟು ಕಡಿತ ಮಾಡುತ್ತೇನೆ ಎಂದು ನಿರ್ಧರಿಸಿ. ಸಾಮಾನ್ಯವಾಗಿ ನೀವು ಪ್ರತಿ ತಿಂಗಳು ಎಷ್ಟು ಅಡುಗೆ ಎಣ್ಣೆ ಖರೀದಿ ಮಾಡುತ್ತಾ ಬಂದಿದ್ದೀರೊ ಅದರಲ್ಲಿ ಶೇ 10ರಷ್ಟು ಕಡಿಮೆ ಪ್ರಮಾಣದಲ್ಲಿ ಈಗ ಅಡುಗೆ ಎಣ್ಣೆ ಖರೀದಿಸಿ’ ಎಂದು ಸೂತ್ರವೊಂದನ್ನು ನೀಡಿದ್ದರು.

ಅಧಿಕ ಅಡುಗೆ ಎಣ್ಣೆ ಬಳಕೆಯಿಂದ ಹೃದಯ ಕಾಯಿಲೆ ಮಧುಮೇಹ ಮತ್ತು ಅಧಿಕ ಒತ್ತಡಗಳಂಥ ರೋಗಗಳು ಬರುತ್ತವೆ. ನಮ್ಮ ಆಹಾರ ಪದ್ಧತಿಯಲ್ಲಿ ಮಾಡಿಕೊಳ್ಳುವ ಸಣ್ಣ ಬದಲಾವಣೆಯಿಂದ ರೋಗ ಮುಕ್ತವಾದ ಉತ್ತಮ ಭವಿಷ್ಯವನ್ನು ನಾವು ರೂಪಿಸಿಕೊಳ್ಳಬಹುದು. ಆದ್ದರಿಂದ ತಡಮಾಡದೇ ಅಡುಗೆ ಎಣ್ಣೆ ಖರೀದಿಯಲ್ಲಿ ಕಡಿತ ಮಾಡಿ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com