
ಬೆಂಗಳೂರು: ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಅವರ ಬಹುನಿರೀಕ್ಷಿತ ಚಿತ್ರ L2 ಎಂಪುರಾನ್' ಬಿಡುಗಡೆಯನ್ನು ಸಂಭ್ರಮಿಸಲು ರಾಜರಾಜೇಶ್ವರಿ ನಗರದ ಕಾಲೇಜೊಂದು ಮಾರ್ಚ್ 27 ರಂದು ರಜೆ ಘೋಷಿಸಿದೆ.
ಬೆಂಗಳೂರಿನ ಗುಡ್ ಶೆಫರ್ಡ್ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಮತ್ತು ಮೋಹನ್ ಲಾಲ್ ಅವರ ಕಟ್ಟಾ ಅಭಿಮಾನಿಯಾಗಿರುವ ಟೋಜೊ ಜಾನ್, ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಕುಟುಂಬಗಳು ಒಟ್ಟಿಗೆ ಚಿತ್ರವನ್ನು ವೀಕ್ಷಿಸಲು ವೈಜಿಆರ್ ಮಾಲ್‌ನಲ್ಲಿ ಎರಡು ಸ್ಕ್ರೀನ್ ಗಳನ್ನು ಕಾಯ್ದಿರಿಸಿದ್ದೇನೆ ಎಂದು ಹೇಳಿದ್ದಾರೆ.
ನಾನು ಮೊದಲನಿಂದಲೂ ಲಾಲೇಟ್ಟನ್(ಮೋಹನ್ ಲಾಲ್ ಅವರನ್ನು ಪ್ರೀತಿಯಿಂದ ಕರೆಯಲಾಗುತ್ತದೆ) ಅವರ ಚಲನಚಿತ್ರಗಳ ಅಭಿಮಾನಿಯಾಗಿದ್ದೇನೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಲಾಲೇಟ್ಟನ್ ಅವರ ಚಿತ್ರಗಳನ್ನು ಮೊದಲ ದಿನವೇ ನೋಡುತ್ತೇನೆ ಎಂದಿದ್ದಾರೆ.
ಈ ಬಾರಿ, ನನ್ನ ವಿದ್ಯಾರ್ಥಿಗಳು ಟಿಕೆಟ್ ಬುಕ್ ಮಾಡುವುದು ಕಷ್ಟಕರವಾಗಿದೆ ಎಂದು ನನಗೆ ಹೇಳಿದರು. ಹಾಗಾದರೆ, ಇದನ್ನು ಒಂದು ರೀತಿಯ ಕಾಲೇಜು ಉತ್ಸವವನ್ನಾಗಿ ಏಕೆ ಮಾಡಬಾರದು ಎಂದು ನಾನು ಯೋಚಿಸಿದೆ" ಎಂದು ಜಾನ್ ಪಿಟಿಐಗೆ ತಿಳಿಸಿದ್ದಾರೆ.
ಕೊಲ್ಲಂ ಮೂಲದವರಾದರೂ 25 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವ ಜಾನ್ ಮೋಹನ್ ಲಾಲ್ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ.
ಮಾರ್ಚ್ 27 ರಂದು ಬೆಳಗ್ಗೆ 7 ಗಂಟೆಗೆ ರಾಜರಾಜೇಶ್ವರಿ ನಗರದ ವೈಜಿಆರ್ ಮಾಲ್‌ನಲ್ಲಿ ಎರಡು ಪರದೆಗಳನ್ನು(251 ಸೀಟುಗಳು ಮತ್ತು 180 ಸೀಟುಗಳು) ಬುಕ್ ಮಾಡಿದ್ದೇನೆ ಎಂದು ಜಾನ್ ತಿಳಿಸಿದ್ದಾರೆ.
ಇನ್ನೊಂದು ಪ್ರಮುಖ ಕಾರಣವೆಂದರೆ ಮಾರ್ಚ್ 26 ರಂದು ನಮ್ಮ ಕಾಲೇಜಿನ ಗ್ರಾಜುಯೇಷನ್ ಡೇ ಇದೆ ಮತ್ತು ಅಂದು ವಿದ್ಯಾರ್ಥಿಗಳ ಪೋಷಕರು ಕೇರಳ ಮತ್ತು ಇತರ ಸ್ಥಳಗಳಿಂದ ಬರಲಿದ್ದಾರೆ. ಅದರ ಮರು ದಿನ ಅಂದರೇ ಮಾರ್ಚ್ 27 ರಂದು ನಮ್ಮ ನಿಯಮಿತ ಸ್ನಾತಕೋತ್ತರ ಪದವಿ ಆಚರಣೆಯನ್ನು ಸಿನಿಮಾ, ಸಂಸ್ಕೃತಿ, ಸಮುದಾಯ ಮತ್ತು ಲಾಲೇಟ್ಟನ್‌ರ ಸಂಭ್ರಮವಾಗಿ ಪರಿವರ್ತಿಸಬಹುದು ಎಂದು ನಾವು ಭಾವಿಸಿದ್ದೇವೆ ಎಂದು ಜಾನ್ ಹೇಳಿದ್ದಾರೆ.
Advertisement