
ಬೆಂಗಳೂರು: ಈ ವಾರಾಂತ್ಯದಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬ ಒಟ್ಟೊಟ್ಟಿಗೆ ಬರುತ್ತಿದೆ, ಮಕ್ಕಳಿಗೆ ಬೇಸಿಗೆ ರಜೆ ಕೂಡ ಆರಂಭವಾಗುತ್ತಿದೆ. ಸಹಜವಾಗಿ ಜನರ ಓಡಾಟ, ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ, ಪ್ರವಾಸ ಹೋಗುವಿಕೆ ಹೆಚ್ಚಾಗುತ್ತದೆ.ರೈಲು, ಸರ್ಕಾರಿ ಬಸ್ಸುಗಳಲ್ಲಿ ರಶ್ಶೋ ರಶ್ಶು.
ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ಖಾಸಗಿ ಬಸ್ ಮಾಲೀಕರು ಟಿಕೆಟ್ ಗಳನ್ನು ದುಪ್ಪಟ್ಟು ಬೆಲೆಗೆ ಮಾರುತ್ತಿದ್ದಾರೆ. ಖಾಸಗಿ ಬಸ್ಸುಗಳ ಮಾಲೀಕರು ಪ್ರಯಾಣಿಕರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಮೂರು ದಿನಗಳ ರಜೆ ಇದೆ ಎಂದು ಊರಿನ ಕಡೆ ಹೋಗಲು ಸಜ್ಜಾದವರಿಗೆ ಖಾಸಗಿ ಬಸ್ ದರ ಏರಿಕೆ ಶಾಕ್ ಎದುರಾಗಿದೆ.
ಮಾರ್ಚ್- 29 ಯುಗಾದಿ ಹಬ್ಬದ ಅಮಾವಾಸ್ಯೆ ಭಾನುವಾರ ಚಾಂದ್ರಮಾನ ಯುಗಾದಿ, ಸೋಮವಾರ ರಂಜಾನ್, ಹೀಗೆ ಒಟ್ಟು ಮೂರು ದಿನಗಳ ಕಾಲ ರಜೆ ಇದೆ. ಮಾರ್ಚ್ 28ರ ಶುಕ್ರವಾರ ರಾತ್ರಿ ಊರಿಗೆ ತೆರಳಲು ಜನರು ಯೋಜನೆ ಹಾಕಿಕೊಂಡವರು ರೈಲು, ಸರ್ಕಾರಿ ಬಸ್ಸುಗಳಲ್ಲಿ ಹೋಗಲು ಸಾಧ್ಯವಾಗದವರು ಖಾಸಗಿ ಬಸ್ಗಳಲ್ಲಿ ದುಪ್ಪಟ್ಟು ದರ ಕೊಟ್ಟು ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ ನಟರಾಜ್ ಶರ್ಮ, ದುಪ್ಪಟ್ಟು ದರ ಏರಿಕೆ ಮಾಡಿಲ್ಲ. ಶೇ 50 ರಿಂದ 60 ರಷ್ಟು ಮಾತ್ರ ದರ ಏರಿಕೆ ಮಾಡಿದ್ದೇವೆ. ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಖಾಸಗಿ ಬಸ್ನವರಿಗೆ ಒಂದು ರೂಪಾಯಿ ಕೂಡ ಮೀಸಲಿಡಲಿಲ್ಲ. ಶಕ್ತಿ ಯೋಜನೆಯಿಂದ ಖಾಸಗಿ ಬಸ್ ಮಾಲೀಕರಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬಿದ್ದಿದೆ. ರೋಡ್ ಟ್ಯಾಕ್ಸ್, ಇನ್ಸುರೆನ್ಸ್, ಹೊಸ ಬಸ್ ಗಳ ಬೆಲೆ, ಸ್ಪೇರ್ ಪಾರ್ಟ್ಸ್ ಸೇರಿದಂತೆ ಪ್ರತಿಯೊಂದರ ದರ ಹೆಚ್ಚಾಗಿದೆ. ಹಾಗಾಗಿ ಹಬ್ಬಗಳ ವೇಳೆ ದರ ಏರಿಕೆ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.
Advertisement