
ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಕನ್ನಡ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಸೋಮವಾರ ಬಂಧಿಸಿ, ಬಿಡುಗಡೆ ಮಾಡಲಾಗಿತ್ತು. ಆದರೆ ಮಂಗಳವಾರ ಮತ್ತೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 270(ಸಾರ್ವಜನಿಕ ತೊಂದರೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ರಜತ್ ಹಾಗೂ ವಿನಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಬಸವೇಶ್ವರ ನಗರ ಠಾಣೆ ಪೊಲೀಸರು ಇಂದು ಇಬ್ಬರು ಆರೋಪಿಗಳನ್ನು ಠಾಣೆ ಕರೆತಂದು, ರೀಲ್ಸ್ನಲ್ಲಿ ಬಳಸಿದ್ದ ಅಸಲಿ ಮಚ್ಚು ತೋರಿಸುವಂತೆ ಸೂಚಿಸಿದ್ದಾರೆ. ಆದರೆ ಪೊಲೀಸರಿಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಹೀಗಾಗಿ ಪೊಲೀಸರು ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ನಾಗರಬಾವಿಯ ಅಕ್ಷಯ ಸ್ಟುಡಿಯೋ ಆರೋಪಿಗಳನ್ನು ಕರೆದೊಯ್ದು ಸ್ಥಳ ಮಹಜರು ಮಾಡಿದ್ದಾರೆ.
ಅಕ್ಷಯ ಸ್ಟುಡಿಯೋದ ಮೂಲೆಮೂಲೆಯಲ್ಲಿ ಹುಡುಕಿದರೂ ಲಾಂಗ್ ಪತ್ತೆ ಆಗಿಲ್ಲ. ಮಚ್ಚು ಎಲ್ಲಿದೆ ಎಂದು ಕೇಳಿದರೂ ರಜತ್ ಹಾಗೂ ವಿನಯ್ ಗೌಡ ಬಾಯಿ ಬಿಟ್ಟಿಲ್ಲ. ಸೆಟ್ ಹಾಕಿದ್ದವರು ತಗೊಂಡು ಹೋಗಿರಬಹುದೆಂದು ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಹೀಗಾಗಿ ಬಸವೇಶ್ವರ ನಗರ ಪೊಲೀಸರು ಅವರಿಬ್ಬರನ್ನು ಮತ್ತೆ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಕಳೆದ ಮಾರ್ಚ್ 20ರಂದು ನಾಗರಬಾವಿಯ ಅಕ್ಷಯ ಸ್ಟುಡಿಯೋ ಬಳಿ ಮಾರಕಾಸ್ತ್ರ ಹಿಡಿದು ಸುಮಾರು 18 ಸೆಕೆಂಡ್‌ಗಳ ರೀಲ್ಸ್ ವಿಡಿಯೋ ಮಾಡಿದ್ದು, ಇದನ್ನು ಬುಜ್ಜಿ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆಗೆ ರಜತ್ ಅಪ್‌ಲೋಡ್ ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಬಸವೇಶ್ವನಗರ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸೋಮವಾರ ಇಬ್ಬರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದರು.
ತಾವು ಮಾಡಿದ ವಿಡಿಯೋದಲ್ಲಿ ನಕಲಿ ಮಚ್ಚು ಉಪಯೋಗಿಸಲಾಗಿದೆ ಎಂದು ಹೇಳಿ ಫೈಬರ್ ನಿಂದ ತಯಾರಿಸಿದ ಮಚ್ಚನ್ನು ಆರೋಪಿಗಳು ಪೊಲೀಸರಿಗೆ ನೀಡಿದ್ದರು ಎಂದು ವರದಿಯಾಗಿದೆ. ಆದರೆ ತನಿಖೆ ವೇಳೆ ವಿಡಿಯೋದಲ್ಲಿ ಬಳಕೆಯಾಗಿರುವ ಮಚ್ಚಿಗೂ ಆರೋಪಿಗಳು ನೀಡಿದ್ದ ಮಚ್ಚಿಗೂ ತಾಳೆಯಾಗದ ಹಿನ್ನೆಲೆ ಪೊಲೀಸರು, ಆರೋಪಿಗಳನ್ನು ಇಂದು ಮತ್ತೆ ವಶಕ್ಕೆ ಪಡೆದು ರೀಲ್ಸ್ನಲ್ಲಿ ಬಳಕೆಯಾಗಿರುವ ಮಚ್ಚು ತೋರಿಸುವಂತೆ ಸ್ಥಳ ಮಹಜರಿಗೆ ಒಳಪಡಿಸಿದ್ದಾರೆ.
Advertisement