
ಮೈಸೂರು: ಕೃಷ್ಣರಾಜ ಸಾಗರ ಜಲಾಶಯದಲ್ಲಿ ಭಾನುವಾರ ರಾತ್ರಿ ಇದ್ದಕ್ಕಿದ್ದಂತೆ ಕ್ರೆಸ್ಟ್ ಗೇಟ್ ಓಪನ್ ಆದ ಪರಿಣಾಮ ಸಾವಿರಾರು ಕ್ಯೂಸೆಕ್‌ಗಳಿಗೂ ಹೆಚ್ಚು ನೀರು ಪೋಲಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಭಾನುವಾರ ರಾತ್ರಿ ಏಕಾಏಕಿ ಕೆಆರ್‌ಎಸ್ ಡ್ಯಾಂನ +80 ಗೇಟ್ ಓಪನ್ ಆಗಿ ನೀರು ನದಿಗೆ ಹರಿದು ವ್ಯರ್ಥವಾಗಿದೆ. ಭಾನುವಾರ ರಾತ್ರಿ ಓಪನ್ ಆಗಿರುವ ಗೇಟ್‌ನಿಂದ ಸೋಮವಾರ ರಾತ್ರಿಯವರೆಗೂ ಹರಿದು ನದಿಗೆ ಸೇರಿದೆ. ಗೇಟ್ ಓಪನ್ ಆಗಿದ್ದರೂ ಅಧಿಕಾರಿಗಳು ಗೇಟ್ ಮುಚ್ಚದೇ ನಿರ್ಲಕ್ಷ್ಯ ತೋರಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವಿರಾರೂ ಕ್ಯೂಸೆಕ್ ನೀರು ನದಿ ಪಾಲು ಆಗಿದೆ. ಗೇಟ್ ಇದ್ದಕ್ಕಿದ್ದಂತೆ ಯಾಕೆ? ಹೇಗೆ? ಓಪನ್ ಆಯಿತು ಎಂಬುದು ಇನ್ನೂ ತಿಳಿದುಬಂದಿಲ್ಲ.
ಸಿಬ್ಬಂದಿಗಳ ಯಡವಟ್ಟಿನಿಂದ ಗೇಟ್ ಓಪನ್ ಆಯಿತೇ ಅಥವಾ ತಾಂತ್ರಿಕ ಸಮಸ್ಯೆಯಿಂದಾಗಿ ಗೇಟ್ ತೆರೆದುಕೊಂಡಿದೆಯೇ ಎಂಬುದು ಇನ್ನು ತಿಳಿದುಬಂದಿಲ್ಲ.
ರೈತರ ಆಕ್ರೋಶ ಬೆನ್ನಲ್ಲೇ ಅಧಿಕಾರಿಗಳು. ಸಿಬ್ಬಂದಿಗಳು ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿ ಗೇಟ್ ಬಂದ್ ಮಾಡಿದ್ದಾರೆ. ಡ್ಯಾಂನಲ್ಲಿ ಹೆಚ್ಚಿನ ಪ್ರಮಾಣದ ನೀರು ಇದ್ದಿದ್ದರಿಂದ ಹರಸಾಹಸಪಟ್ಟು ಗೇಟ್ ಬಂದ್ ಮಾಡಿದ್ದಾರೆ.
ಮೋಟಾರ್ ಸ್ವಿಚ್ ರಿವರ್ಸ್ ಮಾಡಿದ್ದರಿಂದ ಅಥವಾ ನೀರಾವರಿ ಇಲಾಖೆ ಸಿಬ್ಬಂದಿ ಗೇಟ್ ಸ್ವಿಚ್ ಒತ್ತಿದ್ದರಿಂದ ಗೇಟ್ ತೆರೆದಿರಬಹುದು ಎಂದು ಕೆಲವು ಅಧಿಕಾರಿಗಳು ಶಂಕಿಸಿದ್ದಾರೆ.
ತಾಂತ್ರಿಕ ದೋಷದಿಂದಾಗಿ ಗೇಟ್ ತೆರೆದುಕೊಂಡಿದೆ ಎಂದು ಸೂಪರಿಂಟೆಂಡೆಂಟ್ ಎಂಜಿನಿಯರ್ ರಘುರಾಮ್ ಹೇಳಿದ್ದಾರೆ,
ಗೇಟ್ ಅನ್ನು ಹೇಗೆ ಮತ್ತು ಯಾರು ತೆರೆದರು ಎಂದು ತಿಳಿಯಲು ವರದಿ ಕೇಳಲಾಗಿದೆ. ನದಿಗೆ ಸುಮಾರು 750-1,000 ಕ್ಯೂಸೆಕ್ ನೀರು ಹರಿದಿದೆ. ಇದೀಗ ಗೇಟ್ ಕ್ಲೋಸ್ ಮಾಡಲಾಗಿದ್ದು, ರೈತರು ಚಿಂತಿಸಬೇಕಿಲ್ಲ ಎಂದು ತಿಳಿಸಿದ್ದಾರೆ.
ಈತನ್ಮಧ್ಯೆ ನೀರಾವರಿ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಅಧಿಕಾರಿಗಳು ತಾಂತ್ರಿಕ ಸಮಸ್ಯೆಗಳನ್ನು ಉಲ್ಲೇಖಿಸಿ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ನೀರು ಹರಿಯುತ್ತಿರುವುದನ್ನು ನೀಡಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಲಾಗಿತ್ತು. ನಂತರವೇ ಗೇಟ್ ಮುಚ್ಚಿದ್ದಾರೆ. ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿದ್ದಾರೆಂದು ಕಿಡಿಕಾರಿದ್ದಾರೆ.
ಉತ್ತರದಾಯಿತ್ವ, ಸಮಯ ಪ್ರಜ್ಞೆ, ಜವಾಬ್ದಾರಿ ಇಲ್ಲದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ: BJP ಆಗ್ರಹ
ಈ ನಡುವೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರಾಜ್ಯ ಬಿಜೆಪಿ ತೀವ್ರವಾಗಿ ಕಿಡಿಕಾರಿದ್ದು, ಉತ್ತರದಾಯಿತ್ವ, ಸಮಯ ಪ್ರಜ್ಞೆ, ಜವಾಬ್ದಾರಿ ಇಲ್ಲದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಉತ್ತರದಾಯಿತ್ವ, ಸಮಯ ಪ್ರಜ್ಞೆ, ಜವಾಬ್ದಾರಿ ಇಲ್ಲದ ಅಧಿಕಾರಿಗಳನ್ನು ಕೂಡಲೇ ಅಮಾನತ್ತಿನಲ್ಲಿಡಿ. ಜಲಸಂಪನ್ಮೂಲಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡದ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Advertisement