
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ತಾಪಮಾನ ಹಚ್ಚಳವಾಗಿದ್ದು, ಏಪ್ರಿಲ್ ವೇಳೆಗೆ 411 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆಗಳು ಎದುರಾಗಲಿದೆ ಎದು ಜಿಲ್ಲಾ ಸಚಿವ ಮಂಕಾಳ್ ವೈದ್ಯ ಅವರು ಹೇಳಿದ್ದಾರೆ.
ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿರುವ ಅವರು, ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಈಗಾಗಲೇ 20 ಗ್ರಾಮಗಳಲ್ಲಿ ಅಂತರ್ಜಲ ಬತ್ತಿ ಹೋಗಿದೆ. ಏಪ್ರಿಲ್ ವೇಳೆಗೆ 411 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗುವ ಸಾಧ್ಯತೆಗಳಿದ್ದು, ಮಳೆಗಾಲ ಪ್ರಾರಂಭವಾಗುವವರೆಗೂ ಜನರು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಈಗಾಗಲೇ ತೋಡೂರಿನ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಗ್ರಾಮಸ್ಥರು ಸಚಿರವರನ್ನು ಭೇಟಿಯಾಗಿ ಸಮಸ್ಯೆ ಬಗ್ಗೆ ತಮ್ಮ ಅಳಲು ತೋಡಿಕೊಂಡರು.
ನಮಗೆ ಎರಡು ವಾರಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತದೆ, ನೀರಿಗಾಗಿ ಹಲವರು ಖಾಲಿ ಮಡಕೆಗಳೊಂದಿಗೆ ಹಲವಾರು ಮೈಲುಗಳಷ್ಟು ನಡೆದುಕೊಂಡು ಹೋಗುತ್ತಿದ್ದಾರೆ. ಪ್ರತಿ ಎರಡು ವಾರಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತದೆ. ನಮ್ಮ ಹತ್ತಿರದ ಬಾವಿಗಳು ಮತ್ತು ಬೋರ್‌ವೆಲ್‌ಗಳ ನೀರು ಬತ್ತಿಹೋಗಿದೆ ಎಂದು ತೋಡೂರು ಗ್ರಾಮದ ಗ್ರಾಮಸ್ಥರಾದ ಸುಧಾಕರ್ ಖಾರ್ವಿ ಹೇಳಿದ್ದಾರೆ.
ಚಿಂತಾಮಣಿ ಎಂಬುವವರು ಮಾತನಾಡಿ, 35 ವರ್ಷಗಳ ಹಿಂದೆ ಗ್ರಾಮದಲ್ಲಿ ನೀರು ಸಮೃದ್ಧವಾಗಿತ್ತು. ಐಎನ್‌ಎಸ್ ಕದಂಬ ನೌಕಾ ನೆಲೆಯ ನಿರ್ಮಾಣಕ್ಕಾಗಿ 13 ಹಳ್ಳಿಗಳನ್ನು ತೋಡೂರಿಗೆ ಸೇರಿಸಿದ ಬಳಿಕ ನೀರಿನ ಬಿಕ್ಕಟ್ಟು ಶುರುವಾಗಿದೆ. ನಮಗೆ ಯಾವುದೇ ಮೂಲಸೌಕರ್ಯ ಮತ್ತು ನಾಗರಿಕ ಸೌಲಭ್ಯಗಳನ್ನು ಒದಗಿಸಲಾಗಿಲ್ಲ. ಮಳೆಗಾಲದಲ್ಲಿ ಗ್ರಾಮದಲ್ಲು ನೀರು ಸಾಕಷ್ಟಿರುತ್ತದೆ .ಅದಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಅಂಕೋಲಾ, ಕುಮಟಾ ಮತ್ತು ಹೊನ್ನಾವರದಲ್ಲಿಯೂ ನೀರಿನ ಬಿಕ್ಕಟ್ಟು ಎದುರಾಗಿದ್ದು, ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಯಾವುದೇ ವ್ಯವಸ್ಥೆಗಳಿಲ್ಲ ಎಂದು ಅಧಿಕಾರಿಗಳು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಂಕಾಳ ವೈದ್ಯ ಅವರು, ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳಿವೆ. ನೀವು ಪರಿಸ್ಥಿತಿಗೆ ಸಿದ್ಧರಾಗಿ ಗ್ರಾಮಸ್ಥರಿಗೆ ನೀರು ಸರಬರಾಜು ಮಾಡಿ" ಎಂದು ಹೇಳಿದರು.
ಅಧಿಕಾರಿಗಳ ವಿರುದ್ಧ ಯಾವುದೇ ದೂರುಗಳಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದರು.
Advertisement