SC ಒಳಮೀಸಲಾತಿ: ನ್ಯಾ. ನಾಗಮೋಹನ್ ದಾಸ್ ಆಯೋಗದ ಮಧ್ಯಂತರ ವರದಿಗೆ ಸಚಿವ ಸಂಪುಟ ಒಪ್ಪಿಗೆ; ದತ್ತಾಂಶ ಸಂಗ್ರಹಕ್ಕೆ ಹೊಸ ಸಮೀಕ್ಷೆಗೆ ನಿರ್ಧಾರ

ಗುರುವಾರ ರಾಜ್ಯ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗದ ಮಧ್ಯಂತರ ವರದಿಗೆ ಒಪ್ಪಿಗೆ ಸೂಚಿಸಲಾಗಿದೆ.
Cabinet Meeting( File image)
ಸಂಪುಟ ಸಭೆ(ಸಂಗ್ರಹ ಚಿತ್ರ)
Updated on

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದ ಮಧ್ಯಂತರ ವರದಿಯನ್ನು ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ಸೂಚಿಸಿದೆ.

ಗುರುವಾರ ರಾಜ್ಯ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗದ ಮಧ್ಯಂತರ ವರದಿಗೆ ಒಪ್ಪಿಗೆ ಸೂಚಿಸಲಾಗಿದೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳಸಚಿವ ಎಚ್.ಕೆ.ಪಾಟೀಲ್ ಅವರು, ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗದ ಮಧ್ಯಂತರ ವರದಿಗೆ ಒಪ್ಪಿಗೆ ಸೂಚಿಸಲಾಗಿದ್ದು, ಮಧ್ಯಂತರ ವರದಿಯ ಶಿಫಾರಸಿನಂತೆ ತಂತ್ರಜ್ಞಾನ ಬಳಸಿ ಮುಂದಿನ 40 ದಿನಗಳೊಳಗೆ ಉಪ ಜಾತಿಗಳ ಸಮೀಕ್ಷೆ ನಡೆಸುವುದು, ಅದರ ಹೊಣೆಯನ್ನು ಹಾಲಿ ಇರುವ ಆಯೋಗಕ್ಕೆ ವಹಿಸುವುದಕ್ಕೂ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿದರು.

ನಾಲ್ಕು ಪ್ರಮುಖ ಶಿಫಾರಸು ಗಳನ್ನು ಮಾಡಿದ್ದು, ಅವುಗಳ ಅನುಷ್ಠಾನಕ್ಕೂ ಸಭೆಯಲ್ಲಿ ನಿರ್ಧರಿಸಲಾಗಿದೆ. ಪ್ರಮುಖವಾಗಿ ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿನ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಬೇಕಿದ್ದು, ಅದಕ್ಕಾಗಿ ಹೊಸದಾಗಿ ಸಮೀಕ್ಷೆ ನಡೆಸಿ ದತ್ತಾಂಶ ಸಂಗ್ರಹಿಸಬೇಕು ಎಂದು ಮಧ್ಯಂತರ ವರದಿಯಲ್ಲಿ ತಿಳಿಸಲಾಗಿದೆ. ಈ ಸಮೀಕ್ಷೆಯನ್ನು ತಂತ್ರಜ್ಞಾನ ಬಳಸಿ 30ರಿಂದ 40 ದಿನಗಳೊಳಗೆ ಹೊಸಸಮೀಕ್ಷೆ ನಡೆಸಬಹುದು ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಜತೆಗೆ ಹೊಸದಾಗಿ ಸಮೀಕ್ಷೆ ನಡೆಸಲು ಅಗತ್ಯವಿರುವ ಪ್ರಶ್ನಾವಳಿ ಸಿದ್ಧಪಡಿಸಬೇಕು. ಸಮೀಕ್ಷೆಗೆ ಅಗತ್ಯವಿರುವ ತರಬೇತಿ, ಸಂಪನ್ಮೂಲ ಕ್ರೋಢೀಕರಣಗಳ ಉಸ್ತುವಾರಿಗಾಗಿ ಉನ್ನತ ಮಟ್ಟದ ಸಮಿತಿ ರಚಿಸುವುದು ಸೂಕ್ತವೆಂದು ವರದಿಯಲ್ಲಿ ತಿಳಿಸಲಾಗಿದೆ.

Cabinet Meeting( File image)
ಒಳಮೀಸಲಾತಿ:‌ ಸಿಎಂ ಸಿದ್ದರಾಮಯ್ಯಗೆ ಮಧ್ಯಂತರ ವರದಿ ಸಲ್ಲಿಸಿದ ನ್ಯಾ. ನಾಗಮೋಹನ್ ದಾಸ್ ಆಯೋಗ

ಹೊಸ ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ನಿಗದಿ ಮಾಡುವ ಮಾನದಂಡಗಳಂತೆ ಉಪ ಜಾತಿಗಳನ್ನು ವರ್ಗೀಕರಣಗೊಳಿಸಿ ಮೀಸಲಾತಿ ಪ್ರಮಾಣವನ್ನು ಆದ್ಯತೆ ಮೇಲೆ ಹಂಚಿಕೆ ಮಾಡುವಂತೆ ಮಧ್ಯಂತರ ವರದಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಹೊಸ ಸಮೀಕ್ಷೆ ನಡೆಸುವ ಕಾರ್ಯವನ್ನು ನ್ಯಾ.ನಾಗಮೋಹನದಾಸ್ ಸಮಿತಿಗೆ ವಹಿಸಲು ಹಾಗೂ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಿ, ವರದಿ ಸಲ್ಲಿಸಲು ಆಯೋಗದ ಅವಧಿಯನ್ನು 60 ದಿನಗಳ (2 ತಿಂಗಳು)ವರೆಗೆ ವಿಸ್ತರಿಸಲು ನಿರ್ಣಯಿಸಲಾಗಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ರಾಜ್ಯದಲ್ಲಿ 6 ಸಾವಿರ ಗ್ರಾಪಂ, 300ಕ್ಕೂ ಹೆಚ್ಚಿನ ಸ್ಥಳೀಯ ಸಂಸ್ಥೆಗಳಿವೆ. ಆ ಕಾರ್ಯವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಉಸ್ತುವಾರಿಯಲ್ಲಿ ತಂತ್ರಜ್ಞಾನ ಬಳಸಿ ತೀವ್ರಗತಿಯಲ್ಲಿ ಕೈಗೊಳ್ಳಲು ಸಚಿವ ಸಂಪುಟ ಸೂಚಿಸಿದೆ ಎಂದು ಹೇಳಿದರು.

ಆಯೋಗವು ಸಮೀಕ್ಷೆ ಕೈಗೊಳ್ಳಲುಬೇಕಿರುವ ಎಲ್ಲ ಸೌಲಭ್ಯಗಳನ್ನೂ ಸರ್ಕಾರ ಒದಗಿಸಲಿದೆ. ಅದಕ್ಕೆ ಸಂಬಂಧಿಸಿ ಮುಖ್ಯ ಕಾರ್ಯದರ್ಶಿ ಅವರು ಸಂಬಂಧಪಟ್ಟ ಇಲಾಖೆ ಕಾರ್ಯದರ್ಶಿಗಳ ಸಭೆ ನಡೆಸಲಿದ್ದಾರೆ. ಭವಿಷ್ಯದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ದತ್ತಾಂಶಗಳು ಕರಾರುವಕ್ಕಾಗಿ ಪಡೆಯಲು ಹಾಗೂ ಜನರಿಗೆ ಮೀಸಲಾತಿ ಅನುಕೂಲ ಕಲ್ಪಿಸಲಾಗುತ್ತದೆ ಎಂದರು.

ಜಾತಿ ಆಧಾರಿತ ಜನಗಣತಿಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ, ಎಸ್ಸಿವರ್ಗಗಳ ಮಾಹಿತಿಗಳಿಲ್ಲ. ಹೀಗಾಗಿ ಅದನ್ನು ದತ್ತಾಂಶಕ್ಕೆ ಪರಿಗಣಿಸಲಾಗದು. ಒಂದು ವೇಳೆ ಪರಿಗಣಿಸಿದರೂ ದತ್ತಾಂಶಗಳಿಲ್ಲದಿದ್ದರೆ ಕಾನೂನಿನಡಿ ಮಾನ್ಯತೆ ಸಿಗುವುದಿಲ್ಲ. ಆದ್ದರಿಂದ ಎರಡು ತಿಂಗಳ ಕಾಲಾವಧಿಯಲ್ಲಿ ಹೊಸ ಸಮೀಕ್ಷೆ ಮಾಡಲಾಗುತ್ತದೆ. ಅದಕ್ಕಾಗಿ ಅಗತ್ಯವಿರುವ ಮೊಬೈಲ್‌ ಅಪ್ಲಿಕೇಷನ್ ಸಿದ್ಧಪಡಿಸುವುದು ಹಾಗೂ ಗ್ರಾಪಂ ಸೇರಿ ಇನ್ನಿತರ ಕಡೆಗಳ ಸಿಬ್ಬಂದಿಯನ್ನೂ ಬಳಸಿಕೊಳ್ಳುವ ಚಿಂತನೆಯಿದೆ ಎಂದು ತಿಳಿಸಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com