News Headlines 28-03-25 | ಯತ್ನಾಳ್ ಉಚ್ಛಾಟನೆ ಹಿಂಪಡೆಯಿರಿ: BJP ಹೈಕಮಾಂಡ್ ಗೆ ಎಚ್ಚರಿಕೆ; ರಜತ್-ವಿನಯ್ ಗೌಡಗೆ ಜಾಮೀನು; ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ!

News Headlines 28-03-25 | ಯತ್ನಾಳ್ ಉಚ್ಛಾಟನೆ ಹಿಂಪಡೆಯಿರಿ: BJP ಹೈಕಮಾಂಡ್ ಗೆ ಎಚ್ಚರಿಕೆ; ರಜತ್-ವಿನಯ್ ಗೌಡಗೆ ಜಾಮೀನು; ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ!

1. ಯತ್ನಾಳ್ ಉಚ್ಛಾಟನೆ ಹಿಂಪಡೆಯಿರಿ: ಹೈಕಮಾಂಡ್ ಗೆ BJP ಭಿನ್ನಮತೀಯರ ಎಚ್ಚರಿಕೆ

ಬಿಜೆಪಿ ಭಿನ್ನಮತೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ಬೆನ್ನಲ್ಲೆಸ ಯತ್ನಾಳ್ ಬಣದ ನಾಯಕರು ಇಂದು ಮತ್ತೆ ಸಭೆ ಸೇರಿ ತಮ್ಮ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಉಚ್ಛಾಟಿತ ಶಾಸಕ ಯತ್ನಾಳ್ ಸಹ ಭಾಗಿಯಾಗಿರುವುದು ಕುತೂಹಲ ಮೂಡಿಸಿದೆ. ಬಿಜೆಪಿಯ ಭಿನ್ನಮತೀಯ ಬಣದಲ್ಲಿ ಗುರುತಿಸಿಕೊಂಡಿರುವ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ್ ಅವರ ಬೆಂಗಳೂರಿನ ಮನೆಯಲ್ಲಿ ಬಿಜೆಪಿಯ ಭಿನ್ನ ನಾಯಕರ ಸಭೆ ನಡೆದಿದೆ. ಈ ಸಭೆಯಲ್ಲಿ ಯತ್ನಾಳ್ ಉಚ್ಛಾಟನೆಯನ್ನು ವಾಪಸ್ ಪಡೆಯುವಂತೆ ವರಿಷ್ಠರು ಮನವೊಲಿಸುವುದು, ಮುಂದೆ ಭಿನ್ನ ನಾಯಕರು ಯಾವ ಹೆಜ್ಜೆ ಇಡಬೇಕು. ಪಕ್ಷದ ಹಿತದೃಷ್ಠಿಯಿಂದ ಯಾವ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆದಿದೆ.

2. ಪತ್ನಿ ಕೊಂದು ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿದ್ದ ಪತಿ ಆತ್ಮಹತ್ಯೆಗೆ ಯತ್ನ

ಬೆಂಗಳೂರಿನಲ್ಲಿ ಪತ್ನಿ ಹತ್ಯೆ ಮಾಡಿ, ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿದ್ದ ಪತಿ ಆತ್ಮಹತ್ಯೆಗೆ ಯತ್ನಿಸಿದ್ದು, ಪುಣೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪತಿ ಜತೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಮಹಾರಾಷ್ಟ್ರ ಮೂಲದ ಗೌರಿ ಖೇಡೇಕರ್ ಅವರ ಮೃತದೇಹ ಗುರುವಾರ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು. ಪತ್ನಿ ಕೊಲೆ ಮಾಡಿದ ನಂತರ ಈ ವಿಚಾರವನ್ನು ಗೌರಿ ಪೋಷಕರಿಗೆ ಕರೆ ಮಾಡಿ ತಿಳಿಸಿದ್ದ ರಾಕೇಶ್ ರಾಜೇಂದರ ಖೇಡೇಕರ್ ಪುಣೆಗೆ ಪರಾರಿಯಾಗಿದ್ದನು. ಅಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಗೌರಿ ಕೊಲೆ ಕುರಿತಂತೆ ಮಾತನಾಡಿದ ಪೊಲೀಸ್ ಆಯುಕ್ತ ಬಿ ದಯಾನಂದ ಅವರು, ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯ ಪತಿ ಪ್ರಮುಖ ಆರೋಪಿ ಎಂದು ತಿಳಿಸಿದ್ದಾರೆ.

3. ರಜತ್ ಮತ್ತು ವಿನಯ್ ಗೌಡಗೆ ಜಾಮೀನು

ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಪಾಲಾಗಿದ್ದ ಕನ್ನಡ ಬಿಗ್‌ಬಾಸ್‌ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡಗೆ ಇಂದು ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಜಾಮೀನು ಕೋರಿ ಬಂಧಿತ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 24ನೇ ಎಸಿಜೆಎಂ ಕೋರ್ಟ್, ತಲಾ 10 ಸಾವಿರ ರೂಪಾಯಿ ಶ್ಯೂರಿಟಿ ಮೇಲೆ ಜಾಮೀನು ನೀಡಿ ಆದೇಶಿಸಿದೆ. ಕಳೆದ ಮಾರ್ಚ್ 20ರಂದು ನಾಗರಬಾವಿಯ ಅಕ್ಷಯ ಸ್ಟುಡಿಯೋ ಬಳಿ ಮಾರಕಾಸ್ತ್ರ ಹಿಡಿದು ಸುಮಾರು 18 ಸೆಕೆಂಡ್‌ಗಳ ರೀಲ್ಸ್ ವಿಡಿಯೋ ಮಾಡಿದ್ದು, ಇದನ್ನು ಬುಜ್ಜಿ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆಗೆ ರಜತ್ ಅಪ್‌ಲೋಡ್ ಮಾಡಿದ್ದರು.

4. ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಬೇಗೂರು ಸಮೀಪದ ಕೊಳತೋಡು ಗ್ರಾಮದಲ್ಲಿ ಒಂದೇ ಕುಟುಂಬದ ‌ನಾಲ್ವರವನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೇರಳ ಮೂಲದ ಗಿರೀಶ್ ಸಂಬಂಧಿರನ್ನೇ ಕೊಲೆ ಮಾಡಿದ್ದಾನೆ. ಒಂಟಿ ಮನೆಯಲ್ಲಿ ವಾಸಿಸುತ್ತಿದ್ದ ಮಾವ ಕರಿಯ, ಅತ್ತೆ ಗೌರಿ, ಪತ್ನಿ ನಾಗಿ ಮತ್ತು ಪುತ್ರಿ ಕಾವೇರಿಯನ್ನು ಕತ್ತಿಯಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದಾನೆ. ಏಳು ವರ್ಷಗಳ ಹಿಂದೆ ಗಿರೀಶ್ ನಾಗಿಯನ್ನು ಮೂರನೇ ಮದುವೆಯಾಗಿದ್ದ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ಸದ್ಯ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಸರಣಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

5. ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್ ಗರುಡಾಚಾರ್ ನಿಧನ

ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರ ತಂದೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್ ಗರುಡಾಚಾರ್ ಇಂದು ಮುಂಜಾನೆ ನಿಧನರಾಗಿದ್ದಾರೆ. ಬಸವನಗುಡಿಯ ಕೃಷ್ಣ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಸಂಜೆ ವಿಲ್ಸನ್ ಗಾರ್ಡನ್‌ನ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಐಪಿಎಸ್ ಅಧಿಕಾರಿಯಾಗಿದ್ದ ಗರುಡಾಚಾರ್ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) ಸದಸ್ಯರಾಗಿಯೂ ಕೆಲಸ ಮಾಡಿದ್ದರು. ಬೆಂಗಳೂರು ಮಹಾನಗರ ಡಿಸಿಪಿ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ಡಿಜಿ-ಐಜಿಪಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com