News Headlines 04-05-25 | ರಾಜ್ಯದಲ್ಲಿ ಮತ್ತೊಂದು ಜನಿವಾರ ವಿವಾದ: ಬ್ರಾಹ್ಮಣರ ಪ್ರತಿಭಟನೆ; ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: NIA ತನಿಖೆ ಇಲ್ಲ; ಸೋನು ನಿಗಮ್ ವಿರುದ್ಧ ನಾಳೆ ಬೃಹತ್ ಪ್ರತಿಭಟನೆ!

News Headlines 04-05-25 | ರಾಜ್ಯದಲ್ಲಿ ಮತ್ತೊಂದು ಜನಿವಾರ ವಿವಾದ: ಬ್ರಾಹ್ಮಣರ ಪ್ರತಿಭಟನೆ; ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: NIA ತನಿಖೆ ಇಲ್ಲ; ಸೋನು ನಿಗಮ್ ವಿರುದ್ಧ ನಾಳೆ ಬೃಹತ್ ಪ್ರತಿಭಟನೆ!

1. ರಾಜ್ಯದಲ್ಲಿ ಮತ್ತೊಂದು ಜನಿವಾರ ವಿವಾದ: ಬ್ರಾಹ್ಮಣರ ಪ್ರತಿಭಟನೆ

ನೀಟ್ ಪರೀಕ್ಷೆ ವೇಳೆ ವಿದ್ಯಾರ್ಥಿಯೊಬ್ಬನ ಜನಿವಾರ ತೆಗಿಸಲಾಗಿದೆ ಎಂದು ಆರೋಪಿಸಿ ಕಲಬುರಗಿಯ ಪರೀಕ್ಷಾ ಕೇಂದ್ರದ ಹೊರಗೆ ಬ್ರಾಹ್ಮಣ ಸಮುದಾಯದ ಸದಸ್ಯರು ಇಂದು ಪ್ರತಿಭಟನೆ ನಡೆಸಿದರು. ನೀಟ್ ಪರೀಕ್ಷೆ ಬರೆಯಲು ನಗರದ ಸೆಂಟ್ ಮೇರಿ ಶಾಲೆಗೆ ಬಂದಿದ್ದ ಬಸವ ಕಲ್ಯಾಣದ ಶ್ರೀಪಾದ ಪಾಟೀಲ್ ಎಂಬ ವಿದ್ಯಾರ್ಥಿಯನ್ನು ತಪಾಸಣಾ ಸಿಬ್ಬಂದಿ ತಡೆದು, ಪರೀಕ್ಷಾ ಕೇಂದ್ರದ ಒಳಗೆ ಹೋಗುವಾಗ ಜನಿವಾರ ತೆಗೆಯುವಂತೆ ಸೂಚನೆ ನೀಡಿದ್ದಾರೆ. ಜನಿವಾರ ತೆಗೆಸಿದ ಘಟನೆ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಬ್ರಾಹ್ಮಣ ಸಮಾಜದ ಕೆಲ ಮುಖಂಡರು ಪರೀಕ್ಷಾ ಕೇಂದ್ರದ ಸಮೀಪ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಿವಾರ ತೆಗೆಸಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

2. ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: NIA ತನಿಖೆ ಇಲ್ಲ

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂಬ ಬಿಜೆಪಿಯ ಬೇಡಿಕೆಯನ್ನು ಗೃಹ ಸಚಿವ ಜಿ ಪರಮೇಶ್ವರ ತಿರಸ್ಕರಿಸಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು NIAಗೆ ವಹಿಸಬೇಕೆಂದು ಬಿಜೆಪಿ ಒತ್ತಾಯಿಸುತ್ತಿದೆ. ಆದರೆ ನಮ್ಮ ಪೋಲೀಸರು ತಮ್ಮ ಕೆಲಸವನ್ನು ಚೆನ್ನಾಗಿ ಮಾಡುತ್ತಿದ್ದಾರೆ. ಈ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವ ಅಗತ್ಯವಿಲ್ಲ ಎಂದರು. ಮೊಹಮ್ಮದ್ ಫಾಜಿಲ್ ಕುಟುಂಬಕ್ಕೆ ನೀಡಲಾದ ಪರಿಹಾರದ ಹಣವನ್ನು ಸುಹಾಸ್ ಶೆಟ್ಟಿ ಹತ್ಯೆಗೆ ಸುಪಾರಿ ನೀಡಲು ಬಳಲಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವರದಿಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದರು.

3. ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ FIR

ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬೆಳ್ತಂಗಡಿಯ ತೆಕ್ಕಾರು ಗ್ರಾಮದಲ್ಲಿ ಇಂದು ನಡೆದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬ್ರಹ್ಮಕಳಶೋತ್ಸವ ನಡೆಯಿತು. ಈ ಕಾರ್ಯಕ್ರಮಕ್ಕೆ ಮಸೀದಿಗೆ ಹೋಗಿ ಆಹ್ವಾನ ಕೊಟ್ಟಿದ್ದರಿಂದ ಮುಸ್ಲಿಮರು ಟ್ಯೂಬ್ ಒಡೆದಿದ್ದಾರೆ. ಅವರಿಗೆ ಆಹ್ವಾನ ನೀಡಬಾರದಿತ್ತು. ನಾವು ಹಿಂದುಗಳು, ಹಿಂದೂಗಳಾಗಿ ನಾವು ಅವರನ್ನು ಸೇರಿಸಬಾರದು ಎಂದು ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಕಾರಿ, ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಇಬ್ರಾಹಿಂ ಎಂಬುವರು ದೂರು ನೀಡಿದ್ದಾರೆ.

4. ಸುಹಾಸ್ ಶೆಟ್ಟಿ ಕೊಲೆಯ ಬಳಿಕ ಹೆಚ್ಚಾಗುತ್ತಿದೆ ಪ್ರತೀಕಾರದ ಸಂದೇಶಗಳು

ಸುಹಾಸ್ ಶೆಟ್ಟಿ ಕೊಲೆಯ ಬಳಿಕ ಪ್ರತೀಕಾರದ ಸಂದೇಶಗಳು ಹೆಚ್ಚಾಗುತ್ತಿವೆ. ಸುಹಾಸ್ ಶೆಟ್ಟಿಯನ್ನು ಕೊಂದವರನ್ನು ಎಲ್ಲಿ ಸಿಕ್ಕರೂ ಕೊಚ್ಚಿ ಸಾಯಿಸುತ್ತೇವೆ ಎಂದು ಧನುಷ್ ಎಂಬಾತ ಫೇಸ್ ಬುಕ್ ನಲ್ಲಿ ಸೆಲ್ಫಿ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಧನುಷ್ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಮತ್ತೊಂದೆಡೆ ವಿಹೆಚ್ ಪಿ ಮತ್ತು ಬಜರಂಗದಳದ ಮುಖಂಡರಿಗೂ ಜೀವ ಬೆದರಿಕೆಗಳು ಹಾಕಲಾಗುತ್ತಿವೆ. ಮುಂದಿನ ಟಾರ್ಗೆಟ್ ವಿಶ್ವ ಹಿಂದೂ ಪರಿಷತ್​ ಶರಣ್​ ಪಂಪ್​ವೆಲ್​ ಮತ್ತು ಬಜರಂಗದಳ ಮುಖಂಡ ಭರತ್​ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಾಕಲಾಗಿದೆ. ಶರಣ್ ಪಂಪ್​ವೆಲ್​​ ಸಾಯೋಕೆ ರೆಡಿಯಾಗು ಎಂದು ಜೀವ ಬೆದರಿಕೆ ಹಾಕಲಾಗಿದೆ. ಇನ್ನು ಹಿಂದೂ ಕಾರ್ಯಕರ್ತರಿಗೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕುತ್ತಿರುವವರ ವಿರುದ್ಧ ಕೇಂದ್ರ ಸಚಿವ ವಿ. ಸೋವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಲೆ ಬೆದರಿಕೆ ಹಾಕುತ್ತಿರುವವರ ಹೆಡೆಮುರಿ ಕಟ್ಟಲು ರಾಜ್ಯ ಸರ್ಕಾರ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

5. ಸೋನು ನಿಗಮ್ ವಿರುದ್ಧ ತೀವ್ರಗೊಂಡ ಆಕ್ರೋಶ; ನಾಳೆ ಬೃಹತ್ ಪ್ರತಿಭಟನೆ

ಕನ್ನಡಿಗರ ಕನ್ನಡಾಭಿಮಾನವನ್ನು ಪಹಲ್ಗಾಮ್ ಉಗ್ರರ ದಾಳಿಗೆ ಹೋಲಿಸಿ ಅವಹೇಳನ ಮಾಡಿದ ಗಾಯಕ ಸೋನು ನಿಗಮ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಸೋನು ನಿಗಮ್ ಸಾಂಸ್ಕೃತಿಕ ಭಯೋತ್ಪಾದಕನಾಗಿದ್ದು ಆತನ ವಿರುದ್ಧ ನಾಳೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಹ ಈ ವಿವಾದದ ಬಗ್ಗೆ ಮಾತನಾಡಿದ್ದು, ಸೋನು ನಿಗಂ ಅನ್ನು ಈ ಕೂಡಲೇ ಬಂಧಿಸಬೇಕು. ಕನ್ನಡ ಸಿನಿಮಾಗಳಲ್ಲಿ ಹಾಡಲು ಅವರಿಗೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ. ಈ ಮಧ್ಯೆ ಸೋನು ನಿಗಂ ವಿರುದ್ಧ ದೂರು ದಾಖಲಾಗಿದ್ದು ಈ ಹಿನ್ನೆಲೆಯಲ್ಲಿ ಗಾಯಕನಿಗೆ ನೋಟಿಸ್ ನೀಡಲು ಬೆಂಗಳೂರು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com