
ಬೆಂಗಳೂರು: ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ತೋರಿಸುವ ನಕ್ಷೆಯನ್ನು ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಮಾಡಿದ್ದು, ಇದಕ್ಕೆ ವಿರೋಧ ಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದ ಕಾಂಗ್ರೆಸ್ ಈಗ ಅದನ್ನು ಅಳಿಸಿದ್ದು, ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಸಾಲ ನೀಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ವಿಫಲವಾಗಿದೆ ಎಂದು ಬರೆದಿತ್ತು.
ಮೇ 9ರಂದು IMF ಪಾಕಿಸ್ತಾನಕ್ಕೆ ಮೊದಲ ಕಂತಿನಲ್ಲಿ 8500 ಕೋಟಿ ರೂಪಾಯಿ ಸಾಲ ನೀಡಲು ಅನುಮೋದನೆ ನೀಡಿತ್ತು.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾದ ನಂತರ ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಉಂಟಾಗಿತ್ತು. ಈ ವೇಳೆ ಪಾಕಿಸ್ತಾನಕ್ಕೆ ಸಾಲ ನೀಡುವ IMF ಕ್ರಮವನ್ನು ಭಾರತ ವಿರೋಧಿಸಿತ್ತು.
ತಪ್ಪಾದ ನಕ್ಷೆ ಹಂಚಿಕೊಂಡ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, 'ಇದು ಸುಳ್ಳು. ಒಂದು ಸಣ್ಣ ತಪ್ಪು ಸಂಭವಿಸಿದೆ; ನಾವು ಎಲ್ಲವನ್ನೂ ತೆಗೆದುಹಾಕಿದ್ದೇವೆ. ಯಾರೋ ಕಿಡಿಗೇಡಿತನ ಮಾಡಿದ್ದಾರೆ' ಎಂದು ಹೇಳಿದರು.
ಪಕ್ಷದ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಪದೇ ಪದೆ ನಡೆಯುತ್ತಿರುವ ಇಂತಹ ಅಚಾತುರ್ಯಗಳ ಬಗ್ಗೆ ಕೇಳಿದಾಗ, 'ಇಂತಹ ಪೋಸ್ಟ್‌ಗಳಿಗೆ ಕಾರಣರಾದವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ' ಎಂದು ಹೇಳಿದರು.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂದು ತೋರಿಸುವ ನಕ್ಷೆಯನ್ನು ಪೋಸ್ಟ್ ಮಾಡುವ ಮೂಲಕ ಕರ್ನಾಟಕ ಕಾಂಗ್ರೆಸ್ ಮತ್ತೊಮ್ಮೆ "ಪಾಪಿ" ಪಾಕಿಸ್ತಾನದ ಬಗ್ಗೆ ತನ್ನ ಪ್ರೀತಿಯನ್ನು ಪ್ರದರ್ಶಿಸಿದೆ ಎಂದು ಹೇಳಿದರು.
'ಕರ್ನಾಟಕ ಕಾಂಗ್ರೆಸ್ ಪಕ್ಷದ ಐಟಿ ಸೆಲ್ ಪಾಕಿಸ್ತಾನಿ ಭಯೋತ್ಪಾದಕರಿಗೆ ಸ್ಲೀಪರ್ ಸೆಲ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆಪರೇಷನ್ ಸಿಂಧೂರಕ್ಕೆ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಯುದ್ಧದ ಅಗತ್ಯವಿಲ್ಲ' ಎಂದು ಹೇಳಿದ್ದರು ಮತ್ತು "ಪಾಕಿಸ್ತಾನದ ಪರವಾಗಿ ಪ್ರತಿಪಾದಿಸಿದ್ದ ಮುಖ್ಯಮಂತ್ರಿ, ಸಾರ್ವಜನಿಕರ ಆಕ್ರೋಶದ ನಂತರ ತಮ್ಮ ನಿಲುವನ್ನು ಬದಲಾಯಿಸಿದರು' ಎಂದರು.
'ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಕೆಲವೇ ಗಂಟೆಗಳಲ್ಲಿ ಪ್ರಕಟವಾದ ಶಾಂತಿಗಾಗಿ ಕರೆ ನೀಡುವ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಕೂಡ ಸಾರ್ವಜನಿಕರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅಳಿಸಲಾಗಿತ್ತು ಎಂದು ಅವರು ಹೇಳಿದರು.
Advertisement