
ನೆಲಮಂಗಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತೈಲ ಗೋದಾಮು ಬೆಂಕಿಗಾಹುತಿ ಹೊಗೆ ದಟ್ಟವಾಗಿ ಆವರಿಸಿ ದಾರಿಹೋಕರಿಗೆ ಆತಂಕ ಮೂಡಿಸಿರುವ ಘಟನೆ ನೆಲಮಂಗಲ ಬಳಿಯ ಅಡಕಮಾರನಹಳ್ಳಿಯಲ್ಲಿ ಇಂದು ಮಂಗಳವಾರ ಸಂಭವಿಸಿದೆ.
ಶೆಲ್ ಕಂಪನಿಗೆ ಸೇರಿದ ಆಯಿಲ್ ಗೋದಾಮು ಧಗಧಗನೆ ಹೊತ್ತಿ ಉರಿದಿದೆ. ಇಂದು ನಸುಕಿನ ಜಾವ ಮೂರು ಗಂಟೆಯಲ್ಲಿ ಈ ಅವಘಡ ಸಂಭವಿಸಿದೆ. ನೆಲಮಂಗಲ, ಪೀಣ್ಯ, ಯಶವಂತಪುರ ಭಾಗದ 8 ಕ್ಕೂ ಹೆಚ್ಚು ಅಗ್ನಿಶಾಮಕ ತಂಡದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಕ್ಕಪಕ್ಕದ ಮನೆಗಳಿಗೆ ಬೆಂಕಿ ತಗುಲುವ ಆತಂಕ ಎದುರಾಗಿದೆ. ಸರಿಸುಮಾರು 30 ಕೋಟಿ ರೂಪಾಯಿ ಮೌಲ್ಯದ ಆಯಿಲ್ ಬೆಂಕಿಗಾಹುತಿ ಆಗಿರಬಹುದು ಎನ್ನಲಾಗಿದೆ. 40 ಸಾವಿರ ಅಡಿ ವಿಶಾಲ ಪ್ರದೇಶದಲ್ಲಿರುವ ಗೋದಾಮು ಸಂಪೂರ್ಣವಾಗಿ ಬೆಂಕಿಯಿಂದ ನಾಶವಾಗಿದೆ.
ಭಾರತ-ಪಾಕಿಸ್ತಾನ ನಡುವಿನ ಯುದ್ಧ ಆರಂಭ ಹಿನ್ನೆಲೆ ಹೆಚ್ಚಿನ ಸ್ಟಾಕ್ ಶೇಖರಣೆ ಮಾಡಲಾಗಿತ್ತು. ಯುದ್ಧದ ಪರಿಣಾಮವಾಗಿ ಕಂಪನಿ ಸಾಕಷ್ಟು ಪ್ರಮಾಣದಲ್ಲಿ ಆಯಿಲ್ ಶೇಖರಣೆ ಮಾಡಿತ್ತು. ರಾಜ್ಯದಲ್ಲಿ ಯಾವುದೇ ಆಯಿಲ್ ಸಮಸ್ಯೆ ಬಾರದಂತೆ ಸಂಗ್ರಹಣೆ ಮಾಡಲಾಗಿತ್ತು.
ಕಂದಾಯ ಇಲಾಖೆ ಮಾಜಿ ಸಚಿವ ಹೆಚ್.ಸಿ.ಶ್ರೀಕಂಠಯ್ಯ ಅವರ ಅಳಿಯ ಕೃಷ್ಣಪ್ಪ ಎಂಬವರಿಗೆ ಸೇರಿದ ಗೋದಾಮು ಆಗಿದ್ದು ಶೆಲ್ ಕಂಪನಿಗೆ ಬಾಡಿಗೆಗೆ ನೀಡಲಾಗಿತ್ತು.
ಕಂಪನಿ ಹೇಳಿಕೆ:
ಶೆಲ್ ಕಂಪನಿಯು ಕರ್ನಾಟಕದ ತುಮಕೂರು ಹೆದ್ದಾರಿಯಲ್ಲಿರುವ ತನ್ನ ಥರ್ಡ್ ಪಾರ್ಟಿ ಗೋದಾಮಿನಲ್ಲಿ ಬೆಂಕಿ ಅನಾಹುತ ಸಂಭವಿಸಿರುವುದನ್ನು ದೃಢಪಡಿಸಿದೆ. ಈ ಗೋದಾಮನ್ನು ಟೋಲ್ ಲಾಜಿಸ್ಟಿಕ್ಸ್ ಎಂಬ ಸಂಸ್ಥೆ ನಿರ್ವಹಿಸುತ್ತಿದೆ.
ಈ ಗೋದಾಮು ಶೆಲ್ ಕಂಪನಿಯ ಒಡೆತನದಲ್ಲಿ ಇಲ್ಲ ಅಥವಾ ಶೆಲ್ ಕಂಪನಿಯು ಈ ಗೋದಾಮನ್ನು ನಿರ್ವಹಿಸುತ್ತಿರಲಿಲ್ಲ ಎಂಬುದನ್ನು ಕಂಪನಿಯು ಸ್ಪಷ್ಟ ಪಡಿಸಿದ್ದು, ಈ ಗೋದಾಮಿನಲ್ಲಿ ಲೂಬ್ರಿಕೆಂಟ್ ಉತ್ಪನ್ನಗಳ ಸಂಗ್ರಹಣೆ ಮಾಡಲಾಗುತ್ತಿತ್ತು.
ಈ ಘಟನೆಯಿಂದ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂಬುದಾಗಿ ವರದಿಯು ನಮಗೆ ತಿಳಿಸಿದೆ. ತುರ್ತು ಸೇವಾ ವ್ಯವಸ್ಥೆ ಸ್ಥಳದಲ್ಲಿ ಲಭ್ಯವಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರುವ ಎಲ್ಲಾ ಪ್ರಯತ್ನಗಳು ಭರದಿಂದ ಸಾಗುತ್ತಿದೆ.
ನಮ್ಮ ಉದ್ಯೋಗಿಗಳು, ಪಾಲುದಾರರು ಮತ್ತು ಸುತ್ತಮುತ್ತಲಿನ ಜನರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಈ ಘಟನೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ಮತ್ತು ಈ ಪ್ರದೇಶವನ್ನು ಸುರಕ್ಷಿತಗೊಳಿಸಲು ನಾವು ಟೋಲ್ ಲಾಜಿಸ್ಟಿಕ್ಸ್ ಮತ್ತು ಸ್ಥಳೀಯ ಅಧಿಕಾರಿಗಳ ಜೊತೆ ಕೆಲಸ ಮಾಡುತ್ತಿದ್ದೇವೆ. ಬೆಂಕಿ ಅಪಘಾತಕ್ಕೆ ಕಾರಣ ಮತ್ತು ಬೆಂಕಿ ಅಪಘಾತದ ವ್ಯಾಪ್ತಿಯನ್ನು ತಿಳಿಯುವ ಪ್ರಯತ್ನ ನಡೆದಿದೆ.
Advertisement