
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹಲ್ಲಾರೆ ಗ್ರಾಮದಲ್ಲಿಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕಿಡಿಗೇಡಿಗಳು ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕ ಹರಿದು ಹಾಕಿದ್ದಲ್ಲದೇ ಅದಕ್ಕೆ ಸಗಣಿ ಎರಚಿ ಅಪಮಾನ ಮಾಡಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಹಲ್ಲರೆ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಕಿಡಿಗೇಡಿಗಳನ್ನು ಬಂಧಿಸುವಂತೆ ದಲಿತ ಮುಖಂಡರು ಆಗ್ರಹಿಸಿದ್ದಾರೆ.
ಇನ್ನು ಕೆಳದ ಕೆಲ ದಿನಗಳ ಹಿಂದಷ್ಟೆ ಸಿಎಂ ಸ್ವಕ್ಷೇತ್ರ ವಾಜಮಂಗಲ ಗ್ರಾಮದಲ್ಲಿ ಕಿಡಿಗೇಡಿಗಳು ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದಲ್ಲಿ ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿದ್ದಾರೆ.
ಕಳೆದ ವರ್ಷ ಅಂಬೇಡ್ಕರ್ ನಾಮಫಲಕ ಅಳವಡಿಸುವ ವಿಚಾರದಲ್ಲಿ ಈ ಗ್ರಾಮದಲ್ಲಿ ಭಾರೀ ಗಲಾಟೆ ಉಂಟಾಗಿತ್ತು. ಪ್ರಕರಣ ಸಂಬಂಧ ಸುಮಾರು 30ಕ್ಕೂ ಹೆಚ್ಚು ಜನರ ವಿರುದ್ದ ಪ್ರಕರಣ ಕೂಡ ದಾಖಲಾಗಿತ್ತು. ಬಳಿಕ ಶಾಸಕರುಗಳಾದ ದರ್ಶನ್ ಧ್ರುವನಾರಾಯಣ್ ಹಾಗೂ ಅನಿಲ್ ಚಿಕ್ಕಮಾದು ನೇತೃತ್ವದಲ್ಲಿ ಸಂಧಾನ ಸಭೆ ನಡೆಸಿ ಅಂಬೇಡ್ಕರ್ ನಾಮಫಲಕ ಅಳವಡಿಸಲಾಗಿತ್ತು.
ಹೀಗಿರುವಾಗಲೇ ನಿನ್ನೆ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಸಿಸಿ ಕ್ಯಾಮರಾ ಕಾರ್ಯನಿರ್ವಹಿಸದ ಸಮಯ ನೋಡಿ ಕಿಡಿಗೇಡಿಗಳು ಅಂಬೇಡ್ಕರ್‌ಗೆ ಅಪಮಾನ ಎಸಗಿದ್ದಾರೆ.
Advertisement