
ಕೋಲಾರ: ಆಪರೇಷನ್ ಸಿಂಧೂರ್ ಹೆಸರಲ್ಲಿ ಭಾರತ ಬೂಟಾಟಿಕೆಗೆ ನಾಲ್ಕು ಯುದ್ಧ ವಿಮಾನಗಳನ್ನು ಪಾಕ್ ಮೇಲೆ ಕಳುಹಿಸಿದ್ದು ಬಿಟ್ಟರೆ ಮತ್ತೇನು ಮಾಡಿಲ್ಲ. 26 ಜನ ಮಹಿಳೆಯರ ಅರಶಿನ ಕುಂಕುಮಕ್ಕೆ ಬೆಲೆ ಇಷ್ಟೇನಾ ಎಂದು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಪ್ರಶ್ನಿಸಿದ್ದು ಈ ಮೂಲಕ ಭಾರತೀಯ ಸೇನೆಯ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯನ್ನು ಲೇವಡಿ ಮಾಡಿದ್ದಾರೆ.
ಭಾರತೀಯ ಸೇನೆಯ ಆತ್ಮಸ್ಥೈರ್ಯವನ್ನು ಕುಗ್ಗಿಸುವಂತಹ ಕೊತ್ತೂರು ಮಂಜುನಾಥ್ ಇಂತಹ ಹೇಳಿಕೆಗಳ ವಿರುದ್ಧ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ. ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಪ್ರಜೆಗಳ ಮೇಲೆ ಯುದ್ದ ಮಾಡುವುದಕ್ಕೆ ನಮ್ಮ ವಿರೋಧವಿದೆ. ಆದರೆ, ನಮ್ಮ ದೇಶದೊಳಗೆ ಬಂದು ಪತ್ನಿಯರ ಎದುರೇ ಪತಿಯರನ್ನು ಸಾಯಿಸಿದರೆ ಹೇಗೆ ಸಹಿಸುವುದು? ಆ ಹೆಣ್ಣು ಮಕ್ಕಳು ಗಟ್ಟಿಯಾಗಿರುವುದಕ್ಕೆ ಪರವಾಗಿಲ್ಲ. ಇಲ್ಲಾ ಅಂದರೆ ಹೃದಯಾಘಾತದಿಂದ ಆಗಿ ಸಾಯುತ್ತಿದ್ದರು. ಅಂತಹದಕ್ಕೆ ಪರಿಹಾರ ಇದಲ್ಲ. ಬೇರಿನಿಂದ ಕೊಂಬೆ ತನಕ ಎಲ್ಲವನ್ನೂ ಹೊಡೆಯಬೇಕು. ಈ ಬಾರಿ ಒಳ್ಳೆಯ ಅವಕಾಶ ಇತ್ತು. ಆದರೆ ಏನೂ ಮಾಡಿಲ್ಲ ಎಂಬುದು ಬೇಸರ ತಂದಿದೆ ಎಂದು ಮಂಜುನಾಥ್ ಹೇಳಿದ್ದರು.
ಪಾಕಿಸ್ತಾನದ ಮೇಲೆ ವಾಯುದಾಳಿ ನಡೆಸಿದ್ದು ಅದರಲ್ಲಿ ನೂರಕ್ಕೂ ಹೆಚ್ಚು ಉಗ್ರರನ್ನು ಕೊಂದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಇದು ಎಲ್ಲೂ ದೃಢಪಟ್ಟಿಲ್ಲ ಎಂದು ಆಪರೇಷನ್ ಸಿಂಧೂರ್ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ನಮ್ಮ ಜಾಗಕ್ಕೆ ಬಂದು ನಮ್ಮನ್ನು ಹೊಡೆದು ತಪ್ಪಿಸಿಕೊಂಡು ಹೋಗುತ್ತಾರೆ ಎಂದರೆ ಅದು ನಮ್ಮ ಭದ್ರತಾ ವೈಪಲ್ಯ. ಗಡಿಯಲ್ಲಿ ಸೇನೆ ಏನ್ ಮಾಡುತ್ತಾ ಇತ್ತು? ಇವರೆ ಏನಾದರೂ ಪ್ಲಾನ್ ಮಾಡಿದರಾ? ಯಾವುದು ನಿಜ ಯಾವುದು ಸುಳ್ಳು ನಮಗೆ ಗೊತ್ತಾಗುತ್ತಿಲ್ಲ. ಆದರೆ, ಭಾರತ ಕೊಟ್ಟ ಪ್ರತ್ಯುತ್ತರ ಸಮಾಧಾನಕರವಾದ ಕ್ರಮ ಅಲ್ಲ. ಉಗ್ರವಾದವನ್ನು ಬೇರು ಸಮೇತ ಕಿತ್ತೊಗೆಯಲು ಒಳ್ಳೆಯ ಅವಕಾಶ ಇತ್ತು. ಆದರೆ, ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದರು.
ಕದನ ವಿರಾಮ ಎಂದು ಹೇಳುವ ಕೇಂದ್ರ ಸರ್ಕಾರ ಇಸ್ರೇಲ್ ನೋಡಿ ಕಲಿಯಬೇಕಿದೆ. ಇಸ್ರೇಲ್ ಯಾರ ಮಾತನ್ನೂ ಕೇಳಿಲ್ಲ. ರಷ್ಯಾ ಉಕ್ರೇನ್ ಅನ್ನು ನಾಶ ಮಾಡಿತು? ಆದರೆ, ನಮ್ಮ ಹೆಣ್ಣು ಮಕ್ಕಳಿಗೆ ಬೆಲೆ ಇಲ್ವಾ? ಆ ಉಗ್ರರನ್ನು ಹಿಡಿದುಕೊಂಡು ಬಂದು ನಮ್ಮ ಹೆಣ್ಣು ಮಕ್ಕಳ ಕೈಗೆ ಕೊಡಬೇಕಿತ್ತು. ಅಮೇರಿಕಾದ ಒಬ್ಬ ಪ್ರಜೆಯನ್ನು ಮುಟ್ಟಿದ್ದರೆ ಅವರು ಬಿಡುತ್ತಿದ್ದರಾ ಎಂದು ಮಂಜುನಾಥ್ ಪ್ರಶ್ನಿಸಿದರು.
ಕೊತ್ತೂರು ಮಂಜುನಾಥ್ ವಿರುದ್ಧ ಬಿಜೆಪಿ ಆಕ್ರೋಶ
ಭಯೋತ್ಪಾದನೆ ನಿಗ್ರಹಕ್ಕೆ ಭಾರತ ಕೈಗೊಂಡ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಜಾಗತಿಕ ಮೆಚ್ಚುಗೆ ವ್ಯಕ್ತವಾಗಿದೆ. ಭಾರತದ ಸೇನೆಯ ನಿಖರ ಮತ್ತು ವ್ಯೂಹಾತ್ಮಕ ದಾಳಿಗೆ ಜಗತ್ತೇ ನಿಬ್ಬೆರಗಾಗಿದೆ. ಈ ಹಿಂದೆ ನಡೆಸಲಾದ ಉರಿ ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಕೋಟ್ ವೈಮಾನಿಕ ದಾಳಿಗೂ ಸಾಕ್ಷಿ ಕೇಳಿದ್ದ ಕಾಂಗ್ರೆಸ್ ಈಗ ಆಪರೇಷನ್ ಸಿಂಧೂರ ಕಾರ್ಯಾಚರಣೆಗೂ ಸೇನೆಯು ಸಾಕಷ್ಟು ಸಾಕ್ಷಿ ನೀಡಿದ್ದರೂ ಸಹ ತನ್ನ ನೀಚ ಬುದ್ಧಿ ಪ್ರದರ್ಶಿಸಿದೆ. ತನ್ನ ಹಳೇ ಚಾಳಿ ಮುಂದುವರಿಸಿರುವ ಕಾಂಗ್ರೆಸ್ ಪಹಲ್ಗಾಮ್ ಉಗ್ರದಾಳಿಯ ವಿರುದ್ಧವಾಗಿ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೂ ಸಾಕ್ಷಿ ಕೇಳುತ್ತಿದೆ. ಮುಂದೆ ಎಂದಾದರೂ ಉಗ್ರರ ವಿರುದ್ಧ, ಶತ್ರುಗಳ ವಿರುದ್ಧ ಸೇನಾ ಕಾರ್ಯಾಚರಣೆ ಕೈಗೊಳ್ಳುವ ಪರಿಸ್ಥಿತಿ ಬಂದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರನ್ನು ಯುದ್ಧ ವಿಮಾನಗಳಲ್ಲಿ ಕೂರಿಸಿಕೊಂಡು ಕಾರ್ಯಾಚರಣೆ ನಡೆಸಬೇಕು. ಸೈನಿಕ ಕಾರ್ಯಾಚರಣೆ, ಯೋಧರ ಶೌರ್ಯವನ್ನು ಮುಂದೆಂದೂ ಅನುಮಾನಿಸಬಾರದು, ಸಾಕ್ಷ್ಯ ಕೇಳಬಾರದು ಆ ರೀತಿಯಲ್ಲಿ ದೇಶದೊಳಗಿರುವ ಶತ್ರುಗಳಿಗೆ ಭಯ ಹುಟ್ಟಿಸಬೇಕು. ಭಯೋತ್ಪಾದಕರಂತೆ ಕಾಂಗ್ರೆಸ್ ನಾಯಕರೂ ಭಾರತಕ್ಕೆ ಮಗ್ಗುಲ ಮುಳ್ಳಾಗಿ ಪರಿಣಮಿಸುತ್ತಿದ್ದಾರೆ. ದೇಶದೊಳಗಿನ ದ್ರೋಹಿಗಳ ವಿರುದ್ಧ ಒಂದು ತುರ್ತು ಆಪರೇಷನ್ ನಡೆಸಬೇಕಾಗಿದೆ ಎಂದು ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
Advertisement