
ಉಡುಪಿ: ಕುಂದಾಪುರದಲ್ಲಿ ರಸ್ತೆಗೆ ಅಡ್ಡಲಾಗಿ ಪಾಕಿಸ್ತಾನ ರಾಷ್ಟ್ರಧ್ವಜದ ಪ್ಲಾಸ್ಟಿಕ್ ಬ್ಯಾನರ್ ಹಾಸಿ, ಕೋಮು ಸಂಘರ್ಷ ಪ್ರಚೋದನೆಗೆ ಕೆಲ ಕಿಡಿಗೇಡಿಗಳು ಯತ್ನಿಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಕುಂದಾಪುರದ ಜಪ್ತಿ ಗ್ರಾಮದ ನಿವಾಸಿಯೊಬ್ಬರು ಶುಕ್ರವಾರ ಬೆಳಿಗ್ಗೆ ಕೆಲಸಕ್ಕಾಗಿ ತಮ್ಮ ಮೋಟಾರ್ ಸೈಕಲ್‌ನಲ್ಲಿ ಕಲವಾರದಿಂದ ಜಪ್ತಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.
ಬೆಳಿಗ್ಗೆ 8 ಗಂಟೆ ಸುಮಾರಿಗೆ, ಕಲವಾರ-ಜಪ್ತಿ ರಸ್ತೆಯಲ್ಲಿರುವ ದಬ್ಬೆ ಕಟ್ಟೆ ಎಂಬ ಸ್ಥಳವನ್ನು ತಲುಪಿದಾಗ, ರಸ್ತೆಯ ಮೇಲೆ ಯಾರೋ ಕಿಡಿಗೇಡಿಗಳು ಪಾಕ್ ಧ್ವಜದ ಪ್ಲಾಸ್ಟಿಕ್ ಬ್ಯಾನರನ್ನು ರಸ್ತೆಗೆ ಮೊಳೆ ಹೊಡೆದು ಹಾಸಿರುವುದು ಕಂಡು ಬಂದಿತು. ಬಳಿಕ ಮೋಟಾರ್ ಸೈಕಲ್ ಅನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ, ಸುಮಾರು 300 ಮೀಟರ್ ಮುಂದೆ ಸಾಗಿ ನೋಡಿದಾಗ ಅದೇ ರೀತಿ ರಸ್ತೆಗೆ ಪ್ಲಾಸ್ಟಿಕ್ ಬ್ಯಾನರನ್ನು ಹಾಸಿದ್ದರು.
ವಾಹನ ಸಂಚಾರಕ್ಕೆ ಅಡ್ಡಿಯಾಗಬಾರದೆಂದು ಇದನ್ನು ಅಲ್ಲಿಂದ ತೆಗೆದು, ಬದಿಗೆ ಹಾಕಿದೆ ಎಂದು ವ್ಯಕ್ತಿ ಹೇಳಿದ್ದಾರೆ. ಅಲ್ಲದೆ, ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕೆಲವು ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಈ ಪ್ಲಾಸ್ಟಿಕ್ ಧ್ವಜಗಳನ್ನು ಹರಡಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತೋರುತ್ತದೆ. ರಸ್ತೆ ಮಧ್ಯದಲ್ಲಿ ಈ ಬ್ಯಾನರ್‌ಗಳು ಅಪಘಾತಕ್ಕೆ ಕಾರಣವಾಗಬಹುದೆಂದು ಆತಂಕಗೊಂಡ ಅವುಗಳನ್ನು ತೆಗೆದು ರಸ್ತೆಬದಿಯಲ್ಲಿ ಇರಿಸಿದೆ ಎಂದು ದೂರುದಾರ ಹೇಳಿದ್ದಾರೆ.
ದೂರು ಹಿನ್ನೆಲೆಯಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 285 ಮತ್ತು 292 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement