
ಬೆಂಗಳೂರು: ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭಾಶಯ ಕೋರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾಡಿನ ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿಗಳು ಆದ ಹೆಚ್.ಡಿ. ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ಮತ್ತಷ್ಟು ಕಾಲ ತಮಗೆ ಉತ್ತಮ ಆರೋಗ್ಯ ಮತ್ತು ಆಯಸ್ಸನ್ನು ದೇವರು ಕರುಣಿಸಲೆಂದು ಹಾರೈಸುತ್ತೇನೆಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, ಮಾಜಿ ಪ್ರಧಾನಿ ಶ್ರೀ ಎಚ್.ಡಿ. ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಾರ್ವಜನಿಕ ಸೇವಗಾಗಿ ಎಲ್ಲೆಡೆ ಗೌರವಾನ್ವಿತರಾಗಿದ್ದಾರೆ. ಹಲವಾರು ವಿಷಯಗಳ ಕುರಿತು ಅವರ ಬುದ್ಧಿವಂತಿಕೆ ಮತ್ತು ಒಳನೋಟಗಳು ಹೆಚ್ಚಿನ ಶಕ್ತಿಯ ಮೂಲವಾಗಿದೆ. ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನ ಕರುಣಿಸಲಿ ಎಂದು ಹಾರೈಸುತ್ತೇನೆಂದು ಹೇಳಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಟ್ವಿಟ್ ಮಾಡಿ, ನನ್ನ ಪೂಜ್ಯ ತಂದೆಯವರು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಮಂತ್ರಿಗಳೂ ಆಗಿರುವ ಮಣ್ಣಿನಮಗ ಹೆಚ್.ಡಿ.ದೇವೇಗೌಡ ಅವರಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. ನನ್ನ ಶಕ್ತಿ, ನನ್ನ ಧೈರ್ಯ, ನನ್ನ ಸ್ಫೂರ್ತಿ ನನ್ನ ತಂದೆಯವರೇ ಆಗಿದ್ದಾರೆ. ಅವರ ಸಂಘರ್ಷದ ಹಾದಿ, ಸಾಧನೆ, ಸೇವಾ ತತ್ಪರತೆ ನನ್ನ ಮೇಲೆ ಅಗಾಧ ಪ್ರಭಾವ ಬೀರಿದೆ. ಇಡೀ ಬದುಕನ್ನು ರಾಷ್ಟ್ರ ಸೇವೆಗೆ ಸಮರ್ಪಿಸಿರುವ ಈ ಮಹಾನ್ ನಾಯಕನ ಕುಡಿಯಾಗಿ ಹುಟ್ಟಿರುವುದು ನನ್ನ ಜನ್ಮಜನ್ಮದ ಸುಕೃತ.
ಆ ಭಗವಂತ ನನ್ನ ತಂದೆಯವರಿಗೆ ಇನ್ನೂ ಹೆಚ್ಚಿನ ಆಯುರಾಗ್ಯ ಕರುಣಿಸಲಿ. ಸುದೀರ್ಘ ಕಾಲ ನಮಗೆಲ್ಲಾ ಮಾರ್ಗದರ್ಶನ ಮಾಡಿ, ಜನಸೇವೆ ಮಾಡುವ ಚೈತನ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ತಿಳಿಸಿದ್ದಾರೆ.
Advertisement