ಬೆಂಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಕೇವಲ 24 ಗಂಟೆಗಳಲ್ಲಿ ಬರೊಬ್ಬರಿ 103 ಮಿ.ಮೀ ಮಳೆಯಾಗಿದೆ. ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ನಗರದ ಹಲವು ಭಾಗಗಳು ಜಲಾವೃತ್ತವಾಗಿದ್ದು, ರಸ್ತೆಗಳಲ್ಲಿ ನೀರು ನಿಂತು ಸವಾರರು ಪರದಾಡುವಂತಾಯಿತು. ಜನ ವಸತಿ ಪ್ರದೇಶಗಳು ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಮಹದೇವಪುರದ ಹೊರಮಾವುವಿನ ಸಾಯಿ ಲೇಔಟ್ ಮತ್ತು ಸಿಲ್ಕ್ ಬೋರ್ಡ್ ಸಂಪೂರ್ಣ ಜಲಾವೃತವಾಗಿದೆ. ಮಳೆಯಿಂದಾದ ಅಸ್ತವಸ್ತದ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಿಬಿಎಂಪಿ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಮಧ್ಯೆ ಬೆಂಗಳೂರಿನಲ್ಲಿ ನಿರಂತರ ಮಳೆಯಿಂದ ಉಂಟಾದ ಹಾನಿಯಿಂದ ತೀವ್ರ ಕಳವಳಗೊಂಡಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಸವಾಲುಗಳನ್ನು ಎದುರಿಸಲು ಮತ್ತು ಪರಿಹಾರವನ್ನು ಕೈಗೊಳ್ಳಲು ದಿನದ 24 ಗಂಟೆಗಳೂ ಕೆಲಸ ಮಾಡುತ್ತಿದ್ದೇನೆಂದು ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ.ಶಿವಕುಮಾರ್ ಹೇಳಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಆಗಮಿಸಿದ್ದು ಪರಿಸ್ಥಿತಿಯನ್ನು ಅವಲೋಕಿಸಿದರು. ಪ್ರತಿ ಕ್ಷೇತ್ರದಲ್ಲಿನ ಮಳೆಯ ಅವಾಂತರ ಕುರಿತು ಸಿಎಂ ಮಾಹಿತಿ ಪಡೆದರು. ಬಿಬಿಎಂಪಿ ಕಂಟ್ರೋಲ್ ರೂಮ್ ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಕುರಿತ ಪರಿಸ್ಥಿತಿ ಅರಿತ ಸಿಎಂ ಕೂಡಲೇ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ವೈಟ್ ಫೀಲ್ಡ್ ನಲ್ಲಿ ಮಳೆಯಿಂದಾಗಿ ಗೋಡೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಮಲಗಿದ್ದ ವೇಳೆ 35 ವರ್ಷದ ಶಶಿಕಲಾ ಮೇಲೆ ಗೋಡೆ ಕುಸಿದು ಬಿದ್ದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಶಶಿಕಲಾ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗುರುವಾರದವರೆಗೆ ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಡಿಸಿಎಂ ಡಿ.ಕೆ ಶಿವಕುಮಾರ್ ಸಹೋದರ, ಮಾಜಿ ಸಂಸದ ಡಿ.ಕೆ ಸುರೇಶ್ ಕನಕಪುರದಿಂದ ಬೆಂಗಳೂರು ಹಾಲು ಒಕ್ಕೂಟ ಲಿಮಿಟೆಡ್ ನ ನಿರ್ದೇಶಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಬಮುಲ್ ನಿರ್ದೇಶಕ ಸ್ಥಾನಕ್ಕೆ ಡಿಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದರು. ಇತರರ ಆಕಾಂಕ್ಷಿಗಳು ಸಲ್ಲಿಸಿದ ನಾಮಪತ್ರಗಳು ಅಮಾನ್ಯವಾಗಿದ್ದ ಹಿನ್ನೆಲೆಯಲ್ಲಿ ಸುರೇಶ್ ಅವರು ಅವಿರೋಧ ಆಯ್ಕೆಯಾಗಿದ್ದಾರೆ. ಈ ಮೂಲಕ ಕೆಎಂಎಫ್ ಅಧ್ಯಕ್ಷಗಾಧಿ ಮೇಲೆ ಡಿಕೆ ಸುರೇಶ್ ಕಣ್ಣೀಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನಮ್ಮ ತಾಲ್ಲೂಕಿನ ಹೈನುಗಾರಿಕೆಯ ಅಭಿವೃದ್ಧಿಗೆ ಶಕ್ತಿ ತುಂಬಲು ಹಾಗೂ ರೈತರ ಪರವಾಗಿ ಕೆಲಸ ಮಾಡಲು ನಾನು ಸದಾ ಸಿದ್ಧನಾಗಿದ್ದೇನೆ ಎಂದು ಡಿಕೆ ಸುರೇಶ್ ಹೇಳಿದ್ದರು.
ರಾಮನಗರದ ಮಾಗಡಿ ತಾಲೂತಿನ ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿದ್ದಾರೆ. ಮೃತ ಯುವತಿಯರನ್ನು ಬೆಂಗಳೂರು ಮೂಲದ ರಾಘವಿ, ಮಧುಮಿತ ಹಾಗೂ ರಮ್ಯಾ ಎಂದು ಗುರುತಿಸಲಾಗಿದೆ. ಸಂಬಂಧಿಕರ ಮನೆಗೆ ಹೋಗಿದ್ದ ವೇಳೆ ಏಳು ಯುವತಿಯರು ಜಲಾಶಯ ವೀಕ್ಷಣೆಗೆಂದು ತೆರಳಿದ್ದರು. ಈ ವೇಳೆ ಓರ್ವ ಯುವತಿ ನೀರಿಗೆ ಬಿದ್ದಿದ್ದಳು. ಆಕೆಯನ್ನು ರಕ್ಷಿಸಲು ಯುವತಿಯರು ಮುಂದಾಗಿದ್ದಾರೆ. ಆದರೆ ದುರದೃಷ್ಟವಶಾತ್ ಮೂವರು ಯುವತಿಯರು ನೀರುಪಾಲಾಗಿದ್ದಾರೆ. ಇನ್ನು ಯುವನೋರ್ವ ನೀರಿನಲ್ಲಿ ಮುಳುಗಿದ್ದ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾನೆ. ಸದ್ಯ ಮೃತ ಯುವತಿಯರ ದೇಹಗಳನ್ನು ಪೊಲೀಸರು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಬೆಂಗಳೂರು- ಕನಕಪುರ ರಸ್ತೆಯಲ್ಲಿ ಇಂದು ಬೆಳಿಗ್ಗೆ KSRTC ಬಸ್ ಪಲ್ಟಿಯಾಗಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೇರಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಎಸ್‌ಐ ನಾಗರಾಜ್ ಹಾಗೂ ಮತ್ತೊಬ್ಬ ಪ್ರಯಾಣಿಕ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ನೆರೆಯ ಆಂಧ್ರ ಪ್ರದೇಶದ ಪ್ರಸಿದ್ಧ ದೇವಾಲಯಗಳಿಗೆ ತೆರಳಿ ವಾಪಸ್ಸಾಗುತ್ತಿದ್ದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ತುಮಕೂರಿನ ಮೂವರು ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ. ನಂದ್ಯಾಲ್ ಜಿಲ್ಲೆಯ ಪಯಾಪಿಲಿ ಮಂಡಲದ ಪೊದೊಡ್ಡಿ ಗ್ರಾಮದ ಬಳಿ ಇನ್ನೋವಾ ಪಲ್ಟಿಯಾಗಿ ಈ ಅಪಘಾತ ಸಂಭವಿಸಿದೆ. ಮೃತರನ್ನು ಸಂತೋಷ್, ಲೋಕೇಶ್ ಮತ್ತು ನವೀನ್ ಎಂದು ಗುರುತಿಸಲಾಗಿದೆ.
Advertisement