
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವಂತೆಯೇ ಇತ್ತ ಒಂದೇ ದ್ವಿಚಕ್ರ ವಾಹನದಲ್ಲಿ ನಾಲ್ಕು ಮಂದಿ ಪ್ರಯಾಣಿಸಿದ್ದು ಮಾತ್ರವಲ್ಲದೇ ರಸ್ತೆಯಲ್ಲಿ ಇತರೆ ವಾಹನಗಳ ಸವಾರಿಗೆ ಅಡ್ಡಿಪಡಿಸಿದ ವಿಡಿಯೊವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಎಕ್ಸ್ ನಲ್ಲಿ @3rdEyeDude ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, ಒಂದೇ ದ್ವಿಚಕ್ರವಾಹನದಲ್ಲಿ ನಾಲ್ಕು ಮಂದಿ ಯುವಕರ ತಂಡ ಚಾಲನೆ ಮಾಡಿದ್ದು, ಹೆಲ್ಮೆಟೂ ಕೂಡ ಧರಿಸದೇ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಓಡಿಸಿದ್ದಾರೆ.
ಈ ವಿಡಿಯೋವನ್ನು ಕಾರಿನ ಚಾಲಕರೊಬ್ಬರು ತಮ್ಮ ಕಾರಿನ ಡ್ಯಾಶ್ ಕ್ಯಾಮ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.
KA 04 JA 3916 ಸಂಖ್ಯೆಯ ದ್ವಿಚಕ್ರವಾಹನದಲ್ಲಿ ಒಟ್ಟು ನಾಲ್ಕು ಮಂದಿ ಪ್ರಯಾಣಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕಾರಿನ ಚಾಲಕ ಹಾರ್ನ್ ಮಾಡಿದರೆ ಅದಕ್ಕೂ ಜಗ್ಗದೇ ಮತ್ತೆ ವೇಗವಾಗಿ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಹೋಗುತ್ತಿರುವುದು ಸೆರೆಯಾಗಿದೆ.
ಇನ್ನು ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಇತರೆ ಬಳಕೆದಾರರು ಆಗ್ರಹಿಸಿದ್ದು, ಹೆಚ್ಚಿನ ಸಂಚಾರ ಅಪಘಾತಗಳು ದ್ವಿಚಕ್ರ ವಾಹನಗಳ ಸವಾರರ ಅಜಾಗರೂಕ ಚಾಲನೆಯಿಂದಲೇ ಸಂಭವಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಮತ್ತೋರ್ವ ಬಳಕೆದಾರರು, ಇಂತಹ ಅಜಾಗರೂಕ ಚಾಲನೆಗಳಿಗೆ ಕೇವಲ 500 ರೂಪಾಯಿ ದಂಡ ಪರಿಹಾರವಲ್ಲ. ಅವರು ವಾಹನವನ್ನು ವಶಕ್ಕೆ ತೆಗೆದುಕೊಂಡು ಹೋಗಿ ಚಾಲನಾ ಪರವಾನಗಿಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
Advertisement