
ಬೆಂಗಳೂರು: 2 ದಿನಗಳ ಕಾಲ ಸುರಿದ ಭಾರಿ ಮಳೆಯಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿದ್ದ ಅನಾಹುತಗಳ ಕುರಿತು ಅವಲೋಕನಕ್ಕಾಗಿ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ರೆಡ್ ಕಾರ್ಪೆಟ್ ಹಾಕಿದ್ದ ವಿಚಾರ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಬೆಂಗಳೂರಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು ಅಂದರೆ ಮೇ. 21 ರಂದು ಕೂಡಾ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಗರ ಪ್ರದಕ್ಷಿಣೆಯನ್ನು ಮಾಡಿ ಸಮಸ್ಯೆಯನ್ನು ಅವಲೋಕಿಸಿದರು. ಸಿಎಂ ಮತ್ತು ಡಿಸಿಎಂ ಬರುತ್ತಿರುವುದರಿಂದ ಅಧಿಕಾರಿಯೊಬ್ಬರು ರೆಡ್ ಕಾರ್ಪೆಟ್ ಹಾಕಿ ಅವರ ಸ್ವಾಗತಕ್ಕೆ ಸಜ್ಜಾಗಿದ್ದರು.
ಆದರೆ ಎಚ್ಬಿಆರ್ ಲೇಔಟ್ನಲ್ಲಿರುವ ರಾಜಕಾಲುವೆ ಪರಿಶೀಲಿಸಲು ಬರುವ ಸಿಎಂ ಮತ್ತು ಡಿಸಿಎಂಗೆ ರೆಡ್ ಕಾರ್ಪೆಟ್ ಹಾಕಿಸಿದ್ದು. ಅಧಿಕಾರಿಗಳು ರಾಜಕಾಲುವೆ ಬಳಿ ಸ್ವಚ್ಚತ ಕಾರ್ಯಕ್ಕೆ ಮುಂದಾಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು. ಜನರು ಸಾಯುತ್ತಿದ್ದಾರೆ, ಆದರೆ ಸಿಎಂ, ಡಿಸಿಎಂಗೆ ರೆಡ್ ಕಾರ್ಪೆಟ್ ಹಾಸಿದ್ದಾರೆ. ಅಧಿಕಾರಿಗಳು ಸಿಎಂ, ಡಿಸಿಎಂರನ್ನು ಮೆಚ್ಚಿಸೋಕೆ ಕೆಲಸ ಮಾಡ್ತಿದ್ದಾರೆ. ನಮಗೆ ಶಾಶ್ವತ ಪರಿಹಾರ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೆಡ್ ಕಾರ್ಪೆಟ್ ತೆಗೆಸಿದ ಸಿಎಂ
ಸಾರ್ವಜನಿಕರ ಆಕ್ರೋಶದ ಬೆನ್ನಲ್ಲೇ ಅದನ್ನು ಕೂಡಲೇ ತೆಗೆದು ಹಾಕಲಾಯಿತು. ಅಸಲಿಗೆ, ರೆಡ್ ಕಾರ್ಪೆಟ್ ಹಾಕುತ್ತಿರುವುದು ಸಿಎಂ ಅಥವಾ ಡಿಸಿಎಂ ಕಚೇರಿಗೆ ಗೊತ್ತೇ ಇರಲಿಲ್ಲ. ಜನರ ಆಕ್ರೋಶದ ಮಿಡಿತವನ್ನು ಅರಿತ ಬಿಬಿಎಂಪಿ ಪೂರ್ವ ವಲಯದ ಆಯುಕ್ತರು ಕೂಡಲೇ ರೆಡ್ ಕಾರ್ಪೆಟ್ ಅನ್ನು ತೆಗೆಸಿದ್ದಾರೆ.
ಬಿಜೆಪಿ ಕಿಡಿ
ಇದೇ ವಿಚಾರವಾಗಿ ಕಿಡಿಕಾರಿರುವ ಬಿಜೆಪಿ ವಿಪಕ್ಷ ನಾಯಕ ಆರ್ ಅಶೋಕ್ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, 'ಬೆಂಗಳೂರು ನಗರ ಪ್ರದಕ್ಷಿಣೆ ನೆಪದಲ್ಲಿ ರೆಡ್ ಕಾರ್ಪೆಟ್, ಸ್ಟೇಜ್ ಹಾಕಿಸಿಕೊಂಡು, ಪಿಕ್ನಿಕ್ ಮಾಡಿ, ಫೋಟೋ ಶೂಟ್ ಮಾಡಿಸಿಕೊಂಡು ಬಂದ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಗೃಹಲಕ್ಷ್ಮಿಯರು ಮಾಡುತ್ತಿರುವ ಮಂಗಳಾರತಿ ನೋಡಿ' ವಿಡಿಯೋ ಅಪ್ಲೋಡ್ ಮಾಡಿದ್ಗಾರೆ.
ಸಿಎಂ ಹೇಳಿದ್ದೇನು?
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, 'ಮಳೆಯಿಂದ ಅಪಾರ ಹಾನಿಗೊಳಗಾಗಿರುವ ಸ್ಥಳಗಳಿಗೆ ತಾವು ಇಂದು ಭೇಟಿ ನೀಡಿದಾಗ ಬಿಬಿಎಂಪಿ ಅಧಿಕಾರಿಗಳು ರೆಡ್ ಕಾರ್ಪೆಟ್ ಸ್ವಾಗತಕ್ಕೆ ಅಣಿಯಾಗಿದ್ದರು ಅನ್ನೋದು ಶುದ್ಧ ಸುಳ್ಳು, ಬಿಜೆಪಿಯವರೇ ಹಾಗೆ ಮಾಡಿರಬೇಕು. ತಾನು ಭೇಟಿ ನೀಡಿದ ಯಾವುದಾದರೂ ಸ್ಥಳಗಳ ಪೈಕಿ ಎಲ್ಲಾದರೂ ರೆಡ್ ಕಾರ್ಪೆಟ್ ಮೇಲೆ ನಿಂತಿದ್ದನ್ನು ಮಾಧ್ಯಮದವರು ನೋಡಿದ್ದಾರೆಯೇ? ತಾನು ರಾಜ್ಯದ ಮುಖ್ಯಮಂತ್ರಿಯಾಗಿರುವ ಕಾರಣ ಶಿಷ್ಟಾಚಾರದ ಪ್ರಕಾರ ಬಿಬಿಎಂಪಿ ಅಧಿಕಾರಿಗಳು ತನ್ನನ್ನು ಸ್ವಾಗತಿಸಿದ್ದಾರೆ, ಅಷ್ಟು ಬಿಟ್ಟರೆ ಬೇರೇನೂ ಇಲ್ಲ ಎಂದು ಹೇಳಿದರು.
Advertisement