News headlines 21-05-2025 | ಗೃಹ ಸಚಿವ ಪರಮೇಶ್ವರ್ ಗೆ ED ಶಾಕ್; ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು FIR; ಕನ್ನಡ ಮಾತಾಡಲ್ಲ ಎಂದಿದ್ದ SBI ಮ್ಯಾನೇಜರ್ ಎತ್ತಂಗಡಿ; ಸಾಹಿತಿ ಬಾನು ಮುಷ್ತಾಕ್ ಗೆ ಬೂಕರ್ ಪ್ರಶಸ್ತಿ

News headlines
ಸುದ್ದಿ ಮುಖ್ಯಾಂಶಗಳು online desk

1. ಗೃಹ ಸಚಿವ ಪರಮೇಶ್ವರ್ ಗೆ ED ಶಾಕ್!

ಗೃಹ ಸಚಿವ ಜಿ.ಪರಮೇಶ್ವರ್ ಒಡೆತನದ ‘ಸಿದ್ದಾರ್ಥ ಶಿಕ್ಷಣ ಸಂಸ್ಥೆ’ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಹೆಗ್ಗೆರೆ ಬಳಿಯಿರುವ ಸಿದ್ದಾರ್ಥ್ ಮೆಡಿಕಲ್ ಕಾಲೇಜು, ತುಮಕೂರಿನ ಎಸ್ಎಸ್ಐಟಿ ಕಾಲೇಜು ಸೇರಿದಂತೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದೆ. ಅಲ್ಲದೆ, ನೆಲಮಂಗಲದ ಟಿ. ಬೇಗೂರಿನಲ್ಲಿರುವ ಕಾಲೇಜಿನ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆದಿದೆ. ನಾಲ್ಕು ವರ್ಷದ ಹಿಂದೆಯೂ ಪರಮೇಶ್ವರ್ ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಲಾಗಿತ್ತು.

2. ಮಳೆ ಬಾಧಿತ ಪ್ರದೇಶಗಳಿಗೆ ಸಿಎಂ, ಡಿಸಿಎಂ ಭೇಟಿ: ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ

ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಸುರಿದ ಮಹಾ ಮಳೆ ಸಾಕಷ್ಟು ಹಾನಿಯನ್ನು ಉಂಟು ಮಾಡಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕಮಾರ್ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಚ್‌ಬಿ ಆರ್‌ ಲೇಔಟ್, ವಡ್ಡರಪಾಳ್ಯ ಲೇಔಟ್, ಸಾಯಿ ಲೇಔಟ್ ಗಳಿಗೆ ಭೇಟಿ ನೀಡಿದ ಸಿಎಂ, ಬಾಧಿತ ಪ್ರದೇಶಗಳಲ್ಲಿ ಬೇಸ್ಮೆಂಟ್ ಪಾರ್ಕಿಂಗ್, ಕೆಳ ಹಂತದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ನೀಡದಂತೆ ಟೌನ್ ಪ್ಲ್ಯಾನಿಂಗ್ ನಲ್ಲಿ ಬದಲಾವಣೆ ತರುವ ದಿಕ್ಕಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಪರಿಶೀಲಿಸಿದ್ದೇವೆ, ರಾಜಕಾಲುವೆಗಿಂತ ತಗ್ಗು ಪ್ರದೇಶದಲ್ಲಿ ಸಾಯಿ ಲೇಔಟ್ ನಿರ್ಮಿಸಿದ್ದಾರೆ. ಆದ್ದರಿಂದ ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ, ಮಳೆ ನೀರು ಸರಾಗವಾಗಿ ಹರಿಸಲು ಕ್ರಮಕ್ಕೆ ಸೂಚಿಸಿದ್ದೇವೆ, ರಾಜಕಾಲುವೆ ಒತ್ತುವರಿ ಪರಿಶೀಲಿಸಿದ್ದೇವೆ ತೆರವಿಗೆ ಸೂಚಿಸಿದ್ದೇವೆ. ಮಾನ್ಯತಾ ಟೆಕ್ ಪಾರ್ಕ್ ನಲ್ಲಿಯೂ ಪರಿಶೀಲನೆ ನಡೆಸಿದ್ದೇವೆ. ರಸ್ತೆಯಲ್ಲಿ ನಿಲ್ಲುವ ನೀರು ಸರಾಗವಾಗಿ ಹರಿಯಲು ಸ್ವಂತ ಖರ್ಚಿನಲ್ಲಿ ಚರಂಡಿ ನಿರ್ಮಿಸುವುದಾಗಿ ಟೆಕ್ ಪಾರ್ಕ್ ಸಿಇಒ ಹೇಳಿದ್ದಾರೆ ಹೊಸ ತಂತ್ರಜ್ಞಾನ ಬಳಸಿ ನೀರು ಹೊರಹಾಕಬೇಕಿದೆ ಎಂದು ತಿಳಿಸಿದ್ದಾರೆ.

3. ಬಾನು ಮುಷ್ತಾಕ್ ಕೃತಿಗೆ ಬೂಕರ್ ಪ್ರಶಸ್ತಿ

ಕನ್ನಡದ ಪ್ರಸಿದ್ಧ ಸಾಹಿತಿ ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯ ಇಂಗ್ಲಿಷ್ ಅನುವಾದಿತ ಹಾರ್ಟ್ ಲ್ಯಾಂಪ್‌ಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಅನುವಾದಿತ ಕೃತಿಗೆ ‘ಪೆನ್ ಟ್ರಾನ್ಸ್‌ಲೇಟ್ಸ್’ ಪ್ರಶಸ್ತಿಯೂ ಸಿಕ್ಕಿದೆ. 1990 ಮತ್ತು 2023ರ ನಡುವೆ ಪ್ರಕಟಗೊಂಡ 12 ಕತೆಗಳನ್ನೊಳಗೊಂಡ ಈ ಸಂಕಲನವನ್ನು ದೀಪಾ ಭಸ್ತಿ ಅವರು ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದರು. ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕನ್ನು ಆಧಾರಿಸಿ ಈ ಕತೆಯನ್ನು ಬರೆಯಲಾಗಿತ್ತು.

4. ಕನ್ನಡ ಮಾತಾಡಲ್ಲ ಎಂದಿದ್ದ SBI ಮ್ಯಾನೇಜರ್ ಎತ್ತಂಗಡಿ

ಬೆಂಗಳೂರಿನ ಚಂದಾಪುರದ ಸೂರ್ಯನಗರದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಗ್ರಾಹಕರೊಂದಿಗೆ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿ ಉದ್ಧಟತನ ಪ್ರದರ್ಶಿಸಿರುವ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್ ಆಗಿದ್ದು, ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಆಕೆಯನ್ನು ಬೇರೆ ಕಡೆಗೆ ವರ್ಗಾಯಿಸಲಾಗಿದೆ, ಎಸ್ ಬಿಐ ಬ್ಯಾಂಕ್ ಮ್ಯಾನೇಜರ್ ವರ್ತನೆ ಖಂಡನೀಯ, ಅವರನ್ನು ತಕ್ಷಣವೇ ವರ್ಗಾಯಿಸಿ ಕ್ರಮ ತೆಗೆದುಕೊಂಡ ಎಸ್ ಬಿಐ ಕ್ರಮ ಶ್ಲಾಘನೀಯವಾಗಿದೆ. ಹಣಕಾಸು ಸಚಿವರು ಮತ್ತು ಹಣಕಾಸು ಸೇವೆಗಳ ಇಲಾಖೆ ಕ್ರಮ ಕೈಗೊಂಡು ಎಲ್ಲಾ ಸಿಬ್ಬಂದಿಗೆ ಆಯಾ ರಾಜ್ಯಗಳ ಸ್ಥಳೀಯ ಭಾಷೆ ಬಗ್ಗೆ ತರಬೇತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

5. ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು FIR

ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಹಾಗೂ ಮೂವರು ಬೆಂಬಲಿಗರ ವಿರುದ್ಧ 40 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅನ್ವಯ ಆರ್‌ಎಂಸಿ ಯಾರ್ಡ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 40 ವರ್ಷದ ಮಹಿಳೆ ದೂರು ನೀಡಿದ್ದು, ಮುನಿರತ್ನ, ವಸಂತ, ಚನ್ನಕೇಶ, ಕಮಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಘಟನೆ 2023ರಲ್ಲಿ ನಡೆದಿತ್ತು ಎಂದು ಮಹಿಳೆ ತಿಳಿಸಿದ್ದಾರೆ. ಆರೋಪಿಗಳು ಬೆದರಿಕೆ ಹಾಕಿದ್ದರಿಂದ ಹೆದರಿ ದೂರು ನೀಡಿರಲಿಲ್ಲ. ಈಗ ದೂರು ನೀಡುತ್ತಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com