
ವಿಜಯಪುರ: ಮನಗೂಳಿ ಬಳಿ ಸೋಲಾಪುರ- ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್ಎಚ್–50) ಬುಧವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಜನ ದಾರುಣವಾಗಿ ಸಾವಿಗೀಡಾಗಿದ್ದಾರೆ.
ಸೋಲಾಪುರದತ್ತ ತೆರಳುತ್ತಿದ್ದ ಮಹೀಂದ್ರಾ ಸ್ಕಾರ್ಪಿಯೋ ಹೆದ್ದಾರಿ ಮೀಡಿಯ್ಗೆನ್ ಗೆ ಡಿಕ್ಕಿ ಹೊಡೆದು ಹಾರಿ, ಮುಂಬೈನಿಂದ ಬಳ್ಳಾರಿಗೆ ತೆರಳುತ್ತಿದ್ದ ವಿಆರ್‌ಎಲ್ ಬಸ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಇದೇ ಮಾರ್ಗದಲ್ಲಿ ಬರುತ್ತಿದ್ದ ಲಾರಿಗೂ ಡಿಕ್ಕಿ ಹೊಡೆದಿದೆ.
ಮಹಿಂದ್ರಾ ಸ್ಕಾರ್ಪಿಯೋದಲ್ಲಿ ಇದ್ದ ತೆಲಂಗಾಣದ ಗಡವಾಲದ ಕೆನರಾ ಬ್ಯಾಂಕ್ ಮ್ಯಾನೇಜರ್ ಟಿ.ಭಾಸ್ಕರನ್ ಮಣಿಕಂಠನ್, ಪತ್ನಿ ಪವಿತ್ರ, ಪುತ್ರ ಅಭಿರಾಮ್, ಪುತ್ರಿ ಜ್ಯೋತ್ಸ್ನಾ, ವಿಜಯಪುರ ಜಿಲ್ಲೆಯ ಹೊರ್ತಿಯವರಾದ ಟಿಯುವಿ ಚಾಲಕ ವಿಕಾಸ್ ಮಕಾನಿ ಮತ್ತು ತಾಳಗುಟಗಿ ತಾಂಡಾದವರಾದ ವಿಆರ್‌ಎಲ್ ಬಸ್ ಚಾಲಕ ಬಸವರಾಜ ರಾಠೋರ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಮಹಾರಾಷ್ಟ್ರದ ನೋಂದಣಿ (ಎಂ.ಎಚ್.13 ಬಿಎನ್ 8364) ಇರುವ ಮಹೀಂದ್ರಾ ಸ್ಕಾರ್ಪಿಯೋ ಮತ್ತು ವಿಆರ್‌ಎಲ್ ಬಸ್ (ಎಂ.ಎಚ್.12 ವಿಟಿ 7982) ಹಾಗೂ ಲಾರಿ (ಕೆಎ 22 ಎಎ 3117) ನಡುವೆ ಸರಣಿ ಅಪಘಾತ ಸಂಭವಿಸಿದೆ.
ಭಾಸ್ಕರನ್ ಅವರ ಪುತ್ರ ಪ್ರವೀಣ್ ತೇಜ್ ಎಂಬ 10 ವರ್ಷದ ಬಾಲಕ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ಮತ್ತು ಇತರ ಪೊಲೀಸ್ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
Advertisement