
ಬೆಂಗಳೂರು: ಸ್ಮಾರ್ಟ್ ಮೀಟರ್ ಮೂಲಕ ಹಗಲು ದರೋಡೆ ಮಾತ್ರವಲ್ಲದೆ, ಗ್ರಾಹಕರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಈ ಸಂಬಂಧ ರಾಜ್ಯಪಾರ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಬುಧವಾರ ದೂರು ನೀಡಿದೆ.
ವಿರೋಧ ಪಕ್ಷದ ನಾಯಕ ಆರ್ ಅಶೋಕ್(R Ashok) ಮತ್ತು ಸಿ.ಎನ್ ಅಶ್ವಥ್ ನಾರಾಯಣ್ ಅವರ ನೇತೃತ್ವದ ಬಿಜೆಪಿ ನಿಯೋಗವು ಬುಧವಾರ ರಾಜ್ಯಪಾಲರನ್ನು ಭೇಟಿ ಮಾಡಿ ಹಗರಣದ ಸೂಕ್ತ ತನಿಖೆಗೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ದೂರು ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಅಶ್ವತ್ಥ್ ನಾರಾಯಣ್ ಅವರು, ಸ್ಮಾರ್ಟ್ ಮೀಟರ್ ಅಕ್ರಮ ಸಂಬಂಧ ರಾಜ್ಯಪಾಲರ ಜೊತೆ ಚರ್ಚೆ ಮಾಡಿದ್ದೇವೆ. ಈ ಹಗರಣದಲ್ಲಿ ಗ್ರಾಹಕರಿಗೆ ಅನ್ಯಾಯವಾಗುತ್ತಿದೆ. ಸಾವಿರಾರು ಕೋಟಿ ರೂ.ಲೂಟಿ ನಡೆಯುತ್ತಿದೆ. ಇಂಧನ ಇಲಾಖೆ ಹಾಗೂ ಅಧಿಕಾರಿಗಳು ಇದರಲ್ಲಿ ಭಾಗಿ ಆಗಿರುವುದಾಗಿ ರಾಜ್ಯಪಾಲರ ಗಮನ ಸೆಳೆದಿದ್ದೇವೆ ಎಂದು ಹೇಳಿದರು.
ಈ ಅಕ್ರಮ ಕುರಿತು ದಾಖಲೆಗಳೊಂದಿಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದೇವೆ. ಇದುವರೆಗೂ ಎಫ್‍ಐಆರ್ ದಾಖಲಾಗಿಲ್ಲ. ಈ ಸಂಬಂಧ ಲೋಕಾಯುಕ್ತಕ್ಕೆ ಮತ್ತೊಮ್ಮೆ ನೆನಪೋಲೆ ಕೊಡಲಾಗಿದೆ. ಅಧಿಕಾರ ದುರ್ಬಳಕೆ ಮಾಡಿದ ಇಂಧನ ಸಚಿವರು, ಇತರ ಅಧಿಕಾರಿಗಳು, ಗುತ್ತಿಗೆ ಕೊಟ್ಟು ಕಾನೂನಿನ ಉಲ್ಲಂಘನೆ ಮಾಡಿದ್ದಾರೆ. ಅಧಿಕಾರ ದುರ್ಬಳಕೆ, ಹಗಲು ದರೋಡೆ ಮಾಡಿದ ಸ್ಮಾರ್ಟ್ ಮೀಟರ್ ಹಗರಣವನ್ನು ತಾರ್ಕಿಕ ಅಂತ್ಯ ಕಾಣಿಸಲು ಯೋಜಿಸಿದ್ದೇವೆ ಎಂದು ತಿಳಿಸಿದರು.
ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ ಮತ್ತು ಕೇಂದ್ರ ವಿದ್ಯುತ್ ಆಯೋಗದ ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡುತ್ತಿರುವುದು ಪ್ರಥಮ ಉಲ್ಲಂಘನೆ. ಇಲ್ಲಿ ದುಬಾರಿ ದರ ಇದೆ. ಅರ್ಹತೆ ಇಲ್ಲದ ಗುತ್ತಿಗೆದಾರರಿಗೆ ಗುತ್ತಿಗೆ ಕೊಡಲಾಗಿದೆ. ಕಾನೂನಿನ ಉಲ್ಲಂಘನೆ, ಅಧಿಕಾರ ದುರ್ಬಳಕೆ ಮಾಡಿದ ಕುರಿತು ಮಾನ್ಯ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಗೋಲ್ಡ್ ಸ್ಮಗ್ಲಿಂಗ್ ಪ್ರಕರಣವು ತೀವ್ರ ತನಿಖೆ ನಡೆದು ಇನ್ನಷ್ಟು ವಿವರ ಹೊರಬರುವ ವಿಶ್ವಾಸವಿದೆ ಎಂದರು.
Advertisement