ರಾಮನಗರ ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ ಜಿಲ್ಲೆ' ಎಂದು ಮರು ನಾಮಕರಣ ಮಾಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಬಗ್ಗೆ DCM ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಡಿಕೆ ಶಿವಕುಮಾರ್, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ, ರಾಮನಗರ ಜಿಲ್ಲಾ ಕೇಂದ್ರವಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಮೆಟ್ರೋ ರೈಲು ಹಂತ-3 ಯೋಜನೆಯ 40,425.02 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಡಿಸಿಎಂ ತಿಳಿಸಿದ್ದಾರೆ. ಅಲ್ಲದೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತಿಯಾಗುವ ಹಸಿ ತ್ಯಾಜ್ಯ, ಒಣಿ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ ಮತ್ತು ರಸ್ತೆ ತ್ಯಾಜ್ಯದ ಸಂಗ್ರಹಣೆ ಹಾಗೂ ಸಾಗಾಣಿಕೆ ಸೇವೆಗಾಗಿ 7 ವರ್ಷಗಳ ಅವಧಿಗೆ 4,791.95 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಪ್ಯಾಕೇಜ್ ಅನ್ನು 33 ಪ್ಯಾಕೇಜ್ ಗಳಾಗಿ ವಿಂಗಡಿಸಿ, ಟೆಂಡರ್ ಮೂಲಕ ಗುತ್ತಿಗೆ ನೀಡಲು ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಡಿಸಿಎಂ ತಿಳಿಸಿದರು.
ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ್ದ ದಾಳಿ, ಎರಡನೇ ದಿನವೂ ಮುಂದುವರೆದಿದೆ. ಪ್ರಭಾವಿ ವ್ಯಕ್ತಿಯೊಬ್ಬರ ಸೂಚನೆ ಮೇರೆಗೆ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಟ್ರಸ್ಟ್ ಮೂಲಕ ರನ್ಯಾ ರಾವ್ ಕ್ರೆಡಿಟ್ ಕಾರ್ಡ್‌ಗೆ 40 ಲಕ್ಷ ರೂಪಾಯಿ ವರ್ಗಾವಣೆ ಮಾಡಲಾಗಿತ್ತು ಎಂಬ ಆರೋಪವಿದ್ದು, ಇದರ ಆಧಾರದಲ್ಲಿ ಒಟ್ಟು 16 ಕಡೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಇದರಲ್ಲಿ ಪರಮೇಶ್ವರ ಅವರಿಗೆ ಸಂಬಂಧಿಸಿದ ಮೂರು ಶಿಕ್ಷಣ ಸಂಸ್ಥೆಗಳೂ ಸೇರಿವೆ. ಇಡಿ ದಾಳಿಯ ನಡುವೆಯೇ ಗೃಹ ಸಚಿವ ಜಿ ಪರಮೇಶ್ವರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಭೇಟಿಗೆ ನಿಖರವಾದ ವಿವರಗಳು ತಿಳಿದಿಲ್ಲ. ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಗೆ ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ನಡುವೆ ಇಡಿ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಪರಮೇಶ್ವರ್, ನಮ್ಮ ಶಿಕ್ಷಣ ಸಂಸ್ಥೆಗಳಿಗೆ ಇಡಿ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಅವರ ಉದ್ದೇಶ ನಮಗೆ ಗೊತ್ತಿಲ್ಲ. ಅವರಿಗೆ ಸಹಕಾರ ಕೊಟ್ಟಿದ್ದೇವೆ. ಯಾವುದನ್ನೂ ಮುಚ್ಚಿಟ್ಟಿಲ್ಲ. ವಿಚಾರಣೆ ನಡೆಯುತ್ತಿದೆ, ಯಾವುದೇ ಊಹಾಪೋಹಗಳು ಬೇಡ ಎಂದು ಹೇಳಿದ್ದಾರೆ.
ಕಿರುತೆರೆ ಕಲಾವಿದ ಮಡೆನೂರು ಮನು ವಿರುದ್ಧ ಕಿರುತೆರೆ ಕಲಾವಿದೆಯೊಬ್ಬರು ಅತ್ಯಾಚಾರದ ಆರೋಪ ಮಾಡಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಸನದ ಶಾಂತಿಗ್ರಾಮದ ಬಳಿಯ ಮಡೆನೂರಿನಲ್ಲಿ ಮನು ಅವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆತರುತ್ತಿದ್ದಾರೆ. ಆರೋಪಿಯನ್ನು ಇಂದು ರಾತ್ರಿ ಬಂಧಿಸಿ ಜಡ್ಜ್ ಎದುರು ಹಾಜರುಪಡಿಸುವ ಸಾಧ್ಯತೆ ಇದೆ. ಮಡೆನೂರು ಮನು ಮತ್ತು ಯುವತಿ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದರು. ಮನು ಜೊತೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಗ ಅತ್ಯಾಚಾರ ನಡೆದಿದೆ ಎಂದು ಯುವತಿ ದೂರು ನೀಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹೇಳಿಕೆ ನೀಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ. ಚಿತ್ತಾಪೂರ ಪಟ್ಟಣದ ಪ್ರವಾಸಿ ಮಂದಿರದ ಎದುರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಛಲವಾದಿ ನಾರಾಯಣಸ್ವಾಮಿ ಅವರ ವಾಹನದ ಮೇಲೆ ಬಣ್ಣ ಎರಿಚಿ, ಅವರ ವಿರುದ್ದ ಘೋಷಣೆ ಕೂಗಿದ್ದಾರೆ. ವಿಷಾದ ವ್ಯಕ್ತಪಡಿಸುವುದಲ್ಲ, ನಮ್ಮ ಬಳಿ ಬಂದು ಪ್ರಿಯಾಂಕ್ ಖರ್ಗೆ ಅವರಿಗೆ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ವರ್ತನೆಯನ್ನು ಖಂಡಿಸಿರುವ ಬಿಜೆಪಿ, ನಿಮ್ಮ ಗೊಡ್ಡು ಬೆದರಿಕೆ ಹಾಗೂ ರೌಡಿಸಂಗೆ ನಾವು ಸಂವಿಧಾನದ ಮೂಲಕ ಉತ್ತರ ನೀಡುತ್ತೇವೆಂದು ಹೇಳಿದೆ.
ಬೆಂಗಳೂರಿನ ಹೊರವಲಯದ ಚಂದಾಪುರದಲ್ಲಿ ಸೂಟ್‌ಕೇಸ್‌ನಲ್ಲಿ ತುಂಬಿಸಿ ಮಹಿಳೆಯ ಶವ ಪತ್ತೆಯಾಗಿದ್ದು, ಆಕೆಯ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಸೂರ್ಯ ಸಿಟಿ ಬಳಿ ನಿನ್ನೆ ಶವ ಪತ್ತೆಯಾಗಿದ್ದು, ಆನೇಕಲ್‌ನ ರೈಲ್ವೆ ಹಳಿಗಳ ಮೇಲೆ ಸೂಟ್‌ಕೇಸ್ ಬಿದ್ದಿತ್ತು. ಆಕೆಯನ್ನು ಬೇರೆಡೆ ಕೊಂದು ಚಲಿಸುವ ರೈಲಿನಿಂದ ಶವವನ್ನು ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ವಿಷಯದ ತನಿಖೆಗಾಗಿ ಆರು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿ ಕೆ ಬಾವಾ ಹೇಳಿದರು.
Advertisement