
ಬೆಂಗಳೂರು: ರಾಮನಗರ ಜಿಲ್ಲೆಯನ್ನು ‘ಬೆಂಗಳೂರು ದಕ್ಷಿಣ ಜಿಲ್ಲೆ’ ಎಂದು ಮರುನಾಮಕರಣ ಮಾಡಲು ಗುರುವಾರ ನಡೆದೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಇನ್ನು ಮುಂದೆ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದೆ ಎಂದರು.
ರಾಮನಗರವೇ ಜಿಲ್ಲಾ ಕೇಂದ್ರ ಸ್ಥಾನ ಆಗಿರಲಿದೆ. ಇದರಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಆದರೆ, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ ಎಂದರು.
ಇನ್ನು 2025ನೇ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಪಡೆದ ಕನ್ನಡದ ಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರಿಗೆ ಬಿಡಿಎದಲ್ಲಿ ಜಿ ಕೆಟಗರಿ ನಿವೇಶನ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಅಲ್ಲದೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ) ನಿಯಮಗಳು, 1989ನ್ನು ಸಡಿಲಿಕೆ ಮಾಡಲಾಗಿದೆ. ಅದರ ಪ್ರಕಾರ, ಒಂದು ಬಾರಿಯ ಕ್ರಮವಾಗಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ಪಡೆದಿರುವ ವಿವಿಧ ಸಂಘ/ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ಸಂಪೂರ್ಣ ಗುತ್ತಿಗೆ ಮೌಲ್ಯವನ್ನು ಪ್ರಾಧಿಕಾರವು ಪ್ರಕಟಣೆ ನೀಡಿದ 120 ದಿನಗಳೊಳಗಾಗಿ ಪಾವತಿಸಿದರೆ, ನಿಯಮಾನುಸಾರ ವಿಧಿಸಲಾಗುವ ಬಡ್ಡಿಯ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡಲು ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಡಿಸಿಎಂ ತಿಳಿಸಿದರು.
ಬೆಂಗಳೂರು ಮೆಟ್ರೋ ರೈಲು ಹಂತ-3 ಯೋಜನೆಯ 40,425.02 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಡಿ.ಕೆ.ಶಿವಕುಮಾರ್ ವಿವರ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತಿಯಾಗುವ ಹಸಿ ತ್ಯಾಜ್ಯ, ಒಣಿ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ ಮತ್ತು ರಸ್ತೆ ತ್ಯಾಜ್ಯದ ಸಂಗ್ರಹಣೆ ಹಾಗೂ ಸಾಗಾಣಿಕೆ ಸೇವೆಗಾಗಿ 7 ವರ್ಷಗಳ ಅವಧಿಗೆ 4,791.95 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಪ್ಯಾಕೇಜ್ ಅನ್ನು 33 ಪ್ಯಾಕೇಜ್ ಗಳಾಗಿ ವಿಂಗಡಿಸಿ, ಟೆಂಡರ್ ಮೂಲಕ ಗುತ್ತಿಗೆ ನೀಡಲು ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ ಎಂದು ಡಿಸಿಎಂ ತಿಳಿಸಿದರು.
Advertisement