
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಆತಂಕ ಹೆಚ್ಚುತ್ತಿದ್ದು ಬೆಂಗಳೂರಿನಲ್ಲಿ ಕೊರೋನಾಗೆ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ. ಕಳೆದ ಒಂದು ವಾರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಕೊಂಚ ಏರಿಕೆಯಾಗಿದ್ದು ಒಟ್ಟು 38 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಬೆಂಗಳೂರಿನಲ್ಲಿಯೇ 32 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ಹೇಳಿದ್ದಾರೆ. ಕೋವಿಡ್ ಬಂದಿದೆ ಎಂದು ಜನ ಆತಂಕ ಪಡುವ ಅಗತ್ಯವಿಲ್ಲ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಅಗತ್ಯ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ ಎಂದರು.
ಕೋವಿಡ್ ತಾಂತ್ರಿಕ ಸಮಿತಿ ನಿನ್ನೆ ಸಭೆ ನಡೆಸಿ ರಾಜ್ಯದಲ್ಲಿ ಕಂಡುಬಂದಿರುವ ಕೋವಿಡ್ ಪ್ರಕರಣಗಳ ಕುರಿತಂತೆ ಚರ್ಚೆ ನಡೆಸಿದೆ. ನಾವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಕೇಂದ್ರ ಸರ್ಕಾರದ ಜೊತೆ ಕೂಡ ಸಂಪರ್ಕದಲ್ಲಿದ್ದೇವೆ. ದೇಶದಲ್ಲಿ ಒಟ್ಟು 257 ಪ್ರಕರಣ ದಾಖಲಾಗಿವೆ. ಕೋವಿಡ್ ಪಾಸಿಟಿವ್ ಹೊಂದಿದವರಿಗೆ ಮೈಲ್ಡ್ ಸಿಂಟಂಸ್ ಇದೆ. ಬಿಟ್ಟರೆ ಗಂಭೀರವಾದ ಸಮಸ್ಯೆಗಳು ಕಂಡುಬಂದಿಲ್ಲ. ಉಸಿರಾಟದ ತೊಂದರೆ ಇರುವವರಿಗೆ, SARI ಪ್ರಕರಣಗಳಲ್ಲಿ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ. ಉಸಿರಾಟ ಹಾಗೂ ಹೃದಯಸಂಬಂಧಿ ಕಾಯಿಲೆ ಇರುವವರು ಅಡ್ಮಿಟ್ ಅಗಿರುವ ಆಸ್ಪತ್ರೆಗಳಲ್ಲಿ ಸ್ಯಾಂಪಲ್ಸ್ ಕಲೆಕ್ಟ್ ಮಾಡಿ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸುವಂತೆ ಸೂಚಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಅವರು ಹೇಳಿದರು.
ಬಾಣಂತಿಯರು, ಜನ ಹೆಚ್ಚಿರುವ ಕಡೆ ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ. ಯಾರು ಭಯ ಪಡುವ ಅಗತ್ಯವಿಲ್ಲ. ಕೋವಿಡ್ ಬಂದಿದೆ ಎಂದು ಆತಂಕ ಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆಯ ಮಾರ್ಗಸೂಚೊಯಂತೆ ಮುಂಜಾಗ್ರತೆ ವಹಿಸಿದರೆ ಸಾಕು. ತಕ್ಷಣಕ್ಕೆ ಮಾಸ್ಕ್ ಎಲ್ಲರಿಗೂ ಕಡ್ಡಾಯ ಮಾಡಿಲ್ಲ. ಬಾಣಂತಿಯರು, ಗರ್ಭಿಣಿಯರು ಧರಿಸಬೇಕು ಎಂದು ಸೂಚಿಸಲಾಗಿದೆ. ಸ್ವಚ್ಛತೆ ಕಾಪಾಡಿಕೊಂಡು ಸ್ಯಾನಿಟೈಸರ್ ಬಳಸುವುದು ಉತ್ತಮ. ಸಾರ್ವಜನಿಕರು ಪ್ರಯಾಣ ಮಾಡಲು ಯಾವುದೇ ಅಡ್ಡಿಯಿಲ್ಲ. ಎಲ್ಲರು ಸಹಜ ಜೀವನ ನಡೆಸಬಹುದು. ಮಾಧ್ಯಮಗಳು ಆತಂಕ ಸೃಷ್ಟಿಸುವುದು ಬೇಡ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಧ್ಯಮಗಳಿಂದ ಆಗಲಿ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಒಂದು ತಿಂಗಳಿಗಾಗುವಷ್ಟು ಟೆಸ್ಟಿಂಗ್ ಕಿಟ್ ಗಳನ್ನ ತೆಗೆದಿಟ್ಟುಕೊಳ್ಳಲು ಸೂಚಿಸಲಾಗಿದೆ. ಅಗತ್ಯವಿದ್ದಾಗ ಮಾತ್ರ ಟೆಸ್ಟ್ ಮಾಡಲಾಗುವುದು. ಬೆಂಗಳೂರಿನಲ್ಲಿ 32 ಕೋವಿಡ್ ಪಾಸಿಟಿವ್ ಪ್ರಕರಣಗಳಿದ್ದು, ಕಳೆದ ಒಂದು ವಾರದಲ್ಲಿ ಕೊಂಚ ಏರಿಕೆ ಕಂಡಿದೆ. ಎಲ್ಲವನ್ನ ಮಾನಿಟರ್ ಮಾಡಲಾಗುತ್ತಿದೆ. ಸದ್ಯಕ್ಕೆ ಕೋವಿಡ್ ವಿಚಾರದಲ್ಲಿ ಆತಂಕಪಡುವ ಸ್ಥಿತಿ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
Advertisement