
ಬೆಂಗಳೂರು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಎಚ್‌ಎಎಲ್‌ನ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್(ಎಎಂಸಿಎ) ಮತ್ತು ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್(ಎಲ್‌ಸಿಎ) ಉತ್ಪಾದನೆಯನ್ನು ಕರ್ನಾಟಕದಿಂದ ತಮ್ಮ ರಾಜ್ಯಕ್ಕೆ ಸ್ಥಳಾಂತರಿಸಲು ಒತ್ತಾಯಿಸುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳ ಬಗ್ಗೆ ಸೋಮವಾರ ಕಳವಳ ವ್ಯಕ್ತಪಡಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರು, ಅವರ ಹೇಳಿಕೆ "ಅನುಚಿತ ಮತ್ತು ಕಳವಳಕಾರಿ" ಎಂದು ಕರೆದಿದ್ದಾರೆ.
ಇದೇ ವೇಳೆ ಭಾರತದ ಬಾಹ್ಯಾಕಾಶ ಮತ್ತು ರಕ್ಷಣಾ ವಲಯಕ್ಕೆ ರಾಜ್ಯದ ಕೊಡುಗೆಯನ್ನು ಎತ್ತಿ ತೋರಿಸಿದ ಸಚಿವ ಎಂಬಿ ಪಾಟೀಲ್ ಅವರು, ಕರ್ನಾಟಕಕ್ಕೆ ರಕ್ಷಣಾ ಕೈಗಾರಿಕಾ ಕಾರಿಡಾರ್ ನೀಡಬೇಕೆಂದು ಒತ್ತಾಯಿಸಿದರು.
ಈ ಸಂಬಂಧ ಶೀಘ್ರದಲ್ಲೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಸಿಗಬೇಕಾಗಿರುವ ಡಿಫೆನ್ಸ್ ಕಾರಿಡಾರ್ ಕೊಡುವಂತೆ ಆಗ್ರಹಿಸಲಾಗುವುದು ಪಾಟೀಲ್ ತಿಳಿಸಿದ್ದಾರೆ.
"ನಾನು ಇದರ ಬಗ್ಗೆ ಪ್ರಧಾನ ಕಾರ್ಯದರ್ಶಿಯೊಂದಿಗೆ ಚರ್ಚಿಸುತ್ತಿದ್ದೇನೆ ಮತ್ತು ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇನೆ. ನಮ್ಮ ರಾಜ್ಯದ ಕೇಂದ್ರ ಸಚಿವರೊಂದಿಗೆ ಸಹ ಮಾತನಾಡುತ್ತೇನೆ. ಚಂದ್ರಬಾಬು ನಾಯ್ಡು ಅಂತಹ ಹೇಳಿಕೆ ನೀಡಿದ್ದರೆ, ಅದು ತಪ್ಪಾಗುತ್ತದೆ. ಅವರು ತಮ್ಮ ರಾಜ್ಯದಲ್ಲಿ HAL ಘಟಕವನ್ನು ಸ್ಥಾಪಿಸಲು ಕೇಳಬಹುದು, ಆದರೆ ಅವರು ಕರ್ನಾಟಕದಲ್ಲಿ ಇರುವುದನ್ನು ಸ್ಥಳಾಂತರಿಸಲು ಕೇಳಿದ್ದರೆ ಅದು ಸರಿಯಲ್ಲ ಮತ್ತು ಕಳವಳಕಾರಿ" ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇಂದು ನಗರದಲ್ಲಿ ವರದಿಗಾರರನ್ನುದ್ದೇಶಿಸಿ ಮಾತನಾಡಿದ ಎಂಬಿ ಪಾಟೀಲ್ ಅವರು, ನಮ್ಮ ರಾಜ್ಯದ #HAL ಘಟಕವನ್ನು ಆಂಧ್ರ ಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ಅಲ್ಲಿನ ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು ಅವರು ಕೇಂದ್ರ ಸರ್ಕಾರಕ್ಕೆ ಕೋರಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಗೊಂದು ವೇಳೆ ಅವರು ಮನವಿ ಮಾಡಿದ್ದರೆ ಅದು ತಪ್ಪು. ರಾಜ್ಯಗಳ ನಡುವಿನ ಸಹಕಾರಕ್ಕೆ ಸೂಕ್ತವಲ್ಲ. ಈ ಬಗ್ಗೆ ನಾವು ಗಂಭೀರವಾಗಿ ಚರ್ಚಿಸುತ್ತೇವೆ ಎಂದಿದ್ದಾರೆ.
ವರದಿಗಳ ಪ್ರಕಾರ, ನಾಯ್ಡು ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗಿನ ಭೇಟಿಯ ಸಮಯದಲ್ಲಿ ಅಂತಹ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಿಂದ ಸುಮಾರು ಒಂದು ಗಂಟೆ ದೂರದಲ್ಲಿರುವ ಲೇಪಾಕ್ಷಿ-ಮದಕಸಿರ ಕೇಂದ್ರದಲ್ಲಿ HAL ನ AMCA ಉತ್ಪಾದನಾ ಘಟಕಕ್ಕಾಗಿ ನಾಯ್ಡು 10,000 ಎಕರೆ ಭೂಮಿಯನ್ನು ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.
ಏರೋಸ್ಪೇಸ್ ಮತ್ತು ಡಿಫೆನ್ಸ್ ಕಾರಿಡಾರ್ ನಲ್ಲಿ ರಾಷ್ಟ್ರಕ್ಕೆ ನಮ್ಮ ರಾಜ್ಯದ ಕೊಡುಗೆ ಶೇ. 65ರಷ್ಟಿದೆ. ವಿಶ್ವದಲ್ಲೇ ನಮ್ಮ ರಾಜ್ಯ 3ನೇ ಸ್ಥಾನದಲ್ಲಿದೆ. ಇಷ್ಟೊಂದು ಮಹತ್ವದ ಕೊಡುಗೆ ನೀಡಿದರೂ ಡಿಫೆನ್ಸ್ ಕಾರಿಡಾರನ್ನು ಯುಪಿ ಮತ್ತು ತಮಿಳುನಾಡಿಗೆ ಕೇಂದ್ರ ಸರ್ಕಾರ ನೀಡಿದೆ. ಯೋಗ್ಯತೆಯ ಆಧಾರದ ಮೇಲೆ ನಮ್ಮ ರಾಜ್ಯಕ್ಕೇ ನೀಡಬೇಕಿತ್ತು. ಶೀಘ್ರದಲ್ಲೇ ಕೇಂದ್ರ ಸಚಿವರು ಹಾಗೂ ಮಾನ್ಯ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರನ್ನು ಭೇಟಿಮಾಡಿ, ಡಿಫೆನ್ಸ್ ಕಾರಿಡಾರ್ ನಮ್ಮ ರಾಜ್ಯದ ಹಕ್ಕಾಗಿದ್ದು, ಕರ್ನಾಟಕಕ್ಕೆ ಕೊಡುವಂತೆ ಒತ್ತಾಯ ಮಾಡುತ್ತೇನೆ ಎಂದಿದ್ದಾರೆ.
Advertisement