
ಬೆಂಗಳೂರು: ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮನಿರ್ದೇಶನ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಮಂಗಳವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಖಂಡ್ರೆ, ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನಿಲ್ ಕುಂಬ್ಳೆ ಅವರು, ವಿಶ್ವದಾದ್ಯಂತ ಖ್ಯಾತಿ ಹೊಂದಿದ್ದು, ಅರಣ್ಯ ಸಂರಕ್ಷಣೆ, ಅರಣ್ಯ ಅಭಿವೃದ್ಧಿ, ಮರಗಳ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನೆರವಾಗುತ್ತಾರೆ ಎಂದರು.
ಅನಿಲ್ ಕುಂಬ್ಳೆ ಅವರಿಗೆ ವನ್ಯಜೀವಿಗಳ ಬಗ್ಗೆ ಅಪಾರ ಕಾಳಜಿ ಇದೆ. ಅವರು ಅರಣ್ಯವನ್ನು ಪ್ರೀತಿಸುತ್ತಾರೆ. ಹಾಗಾಗಿ ಯಾವುದೇ ಸಂಭಾವನೆ ಪಡೆಯದೆ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ" ಎಂದು ಖಂಡ್ರೆ ತಿಳಿಸಿದರು.
ಅರಣ್ಯ ಸಚಿವರಾಗಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಂಗಳವಾರ ತಮ್ಮ ಸಾಧನೆ ಮತ್ತು ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡ ಈಶ್ವರ್ ಬಿ ಖಂಡ್ರೆ, ಕಳೆದ ಎರಡು ವರ್ಷಗಳಲ್ಲಿ ಸುಮಾರು 8,848 ‘ವನಮಹೋತ್ಸವ’ ಕಾರ್ಯಕ್ರಮ ಗಳನ್ನು ನಡೆಸಲಾಗಿದ್ದು, ಅರಣ್ಯ ಪ್ರದೇಶ, ರಸ್ತೆ ಬದಿ, ಸರ್ಕಾರಿ ಜಮೀನಿನಲ್ಲಿ ಅಂದಾಜು 8.5 ಕೋಟಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
2023-24 ಮತ್ತು 2024-25ರ ಸಾಲಿನಲ್ಲಿ ಒಟ್ಟು 1,20, 975 ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು, 25 ಹೊಸ ವೃಕ್ಷೋದ್ಯಾನ ಮತ್ತು 35 ದೇವರ ಕಾಡು ನಿರ್ಮಾಣ ಮಾಡಲಾಗಿದೆ. ಕಳೆದ 2 ವರ್ಷದಲ್ಲಿ ಕೃಷಿಕರಿಗೆ ತಮ್ಮ ಜಮೀನಿನಲ್ಲಿ ನಾಟಿ ಮಾಡಲು ಮತ್ತು ಇತರ ಜಮೀನಿನಲ್ಲಿ ನೆಡಲು ಒಟ್ಟಾರೆ 3.70 ಕೋಟಿ ಸಸಿಗಳನ್ನು ವಿತರಣೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಮಾದಪ್ಪನಹಳ್ಳಿಯಲ್ಲಿ 153 ಎಕರೆಯಲ್ಲಿ ಬೃಹತ್ ಉದ್ಯಾನ ನಿರ್ಮಾಣ: ಯಲಹಂಕ ಬಳಿಯ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶದಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಲಾಲ್ ಬಾಗ್ ಹೈದರಾಲಿಯ ಕಾಲದಲ್ಲಿ ನಿರ್ಮಾಣವಾಗಿತ್ತು, ಕಬ್ಬನ್ ಪಾರ್ಕ್ ಬ್ರಿಟಿಷರ ಕಾಲದಲ್ಲಿ ರೂಪುಗೊಂಡಿತು. ಶತಮಾನವೇ ಕಳೆದರೂ ಮತ್ತೊಂದು ಬೃಹತ್ ಉದ್ಯಾನ ಬೆಂಗಳೂರಿನಲ್ಲಿ ಆಗಲಿಲ್ಲ. ಹೀಗಾಗಿ ತಾವು ಅರಣ್ಯ ಸಚಿವನಾದ ತರುವಾಯ ನೀಲಗಿರಿ ಬೆಳೆಸಲು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಿದ್ದ 153 ಎಕರೆ ಜಮೀನನ್ನು ಜೂ.2ರಂದು ಮರಳಿ ಅರಣ್ಯ ಇಲಾಖೆಗೆ ಪಡೆದು ಅಲ್ಲಿ ಉದ್ಯಾನ ನಿರ್ಮಿಸಲಾಗುವುದು, 2 ತಿಂಗಳಲ್ಲಿ ಇದರ ಶಂಕುಸ್ಥಾಪನೆ ನೆರವೇರಲಿದೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಲ್ಲಿ 128 ಎಕರೆ ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇದರ ಮಾರುಕಟ್ಟೆ ಮೌಲ್ಯ ಸುಮಾರು 4,000 ಕೋಟಿ ರೂ. ಆಗಿದೆ ಎಂದು ಅವರು ವಿವರಿಸಿದರು.
Advertisement