News Headlines 27-05-25 | ಬಿಜೆಪಿಯಿಂದ STS, ಹೆಬ್ಬಾರ್ ಉಚ್ಛಾಟನೆ; ಜಾತಿ ನಿಂದನೆ: ರವಿಕುಮಾರ್ ವಿರುದ್ಧ FIR; ನಟ ಶ್ರೀಧರ್ ನಾಯಕ್ ನಿಧನ; ವನ್ಯಜೀವಿ ರಾಯಭಾರಿಯಾಗಿ ಅನಿಲ್ ಕುಂಬ್ಳೆ ನಾಮನಿರ್ದೇಶನ!

News Headlines 27-05-25 | ಬಿಜೆಪಿಯಿಂದ STS, ಹೆಬ್ಬಾರ್ ಉಚ್ಛಾಟನೆ; ಜಾತಿ ನಿಂದನೆ: ರವಿಕುಮಾರ್ ವಿರುದ್ಧ FIR; ನಟ ಶ್ರೀಧರ್ ನಾಯಕ್ ನಿಧನ; ವನ್ಯಜೀವಿ ರಾಯಭಾರಿಯಾಗಿ ಅನಿಲ್ ಕುಂಬ್ಳೆ ನಾಮನಿರ್ದೇಶನ!

1. ಬಿಜೆಪಿಯಿಂದ STS, ಹೆಬ್ಬಾರ್ ಉಚ್ಛಾಟನೆ

ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ BJPಯಲ್ಲಿ ಮತ್ತೆರಡು ತಲೆದಂಡವಾಗಿದ್ದು, ಶಾಸಕ ST ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಶಾಸಕರಾದ ST ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಕೆಲ ಕಾಲದಿಂದ ಬಿಜೆಪಿ ಪಕ್ಷದ ವಿರುದ್ಧವೇ ಬಹಿರಂಗವಾಗಿ ಮಾತನಾಡುತ್ತಿದ್ದರು ಮತ್ತು ಕಾಂಗ್ರೆಸ್ ಪಾಳಯದಲ್ಲಿ ಪದೇ ಪದೇ ಗುರುತಿಸಿಕೊಳ್ಳುತ್ತಿದ್ದರು. ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ. ಇವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ರಾಜ್ಯ ಘಟಕದ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಅವರು ಕೇಂದ್ರ ಶಿಸ್ತು ಸಮಿತಿಗೆ ವರದಿ ನೀಡಿದ್ದರು. ಈ ವರದಿಯನ್ನಾಧರಿಸಿ ಮುಂದಿನ 6 ವರ್ಷಗಳ ಕಾಲ ಇಬ್ಬರೂ ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ.

2. ಬಿಜೆಪಿಗರಿಗೆ ಉತ್ತಮರ ಬೇಕಿಲ್ಲ: ಡಿಕೆಶಿ

ಪಕ್ಷವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದಿಂದ ತಮ್ಮನ್ನು ಉಚ್ಛಾಟನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶಾಸಕ ಎಸ್ ಟಿ ಸೋಮಶೇಖರ್, 'ಅಮಾವಾಸ್ಯೆ ದಿನ ಒಳ್ಳೆ ನಿರ್ಧಾರ ಕೈಗೊಂಡಿದ್ದಾರೆ. ತಮ್ಮನ್ನು ಉಚ್ಛಾಟನೆ ಮಾಡಿರುವುದನ್ನು ಸ್ವಾಗತಿಸುತ್ತೇನೆ ಎಂದರು. ಇಷ್ಟಕ್ಕೆ ಸುಮ್ಮನಾಗದ ಅವರು ಹೊಸ ಬಾಂಬ್ ಸಿಡಿಸಿದ್ದು ಬಿಜೆಪಿಯ 10 ರಿಂದ 12 ಶಾಸಕ ಸ್ಥಾನಗಳು ಖಾಲಿಯಾಗುತ್ತವೆ ಎಂದು ಎಚ್ಚರಿಕೆ ನೀಡಿದರು. 2028ಕ್ಕೆ ಮತ್ತೆ ಕಾಂಗ್ರೆಸ್‌ನಿಂದಲೇ ಸ್ಪರ್ಧೆ ಮಾಡುತ್ತೇನೆ. ಅದು ಯಾವ ಬಿಜೆಪಿಗರು ನನ್ನನ್ನು ಸೋಲಿಸುತ್ತಾರೋ ನೋಡೋಣ ಎಂದು ಸವಾಲೆಸೆದರು. ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಉಚ್ಛಾಟನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್, ಅವರಿಬ್ಬರೂ ಯಾರನ್ನು ರೇಪ್ ಮಾಡಿಲ್ವಲ್ಲ. ಯಾರಿಗೂ ಏಡ್ಸ್ ಇಂಜಿಂಕ್ಷನ್‌ ಚುಚ್ಚಿಲ್ಲ. ಆದರೂ ಬಿಜೆಪಿಗರು ಇವರಿಬ್ಬರನ್ನು ಉಚ್ಛಾಚಿಸಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಮುನಿರತ್ನಗೆ ಕುಟುಕಿದ್ದಾರೆ.

3. ಜಾತಿ ನಿಂದನೆ: ರವಿಕುಮಾರ್ ವಿರುದ್ಧ FIR

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಲಬುರಗಿ ಜಿಲ್ಲಾಧಿಕಾರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದಡಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದತ್ತಾತ್ರೇಯ ಇಕ್ಕಳಕಿ ಅವರು ನೀಡಿದ ದೂರಿನ ಅನ್ವಯ ರವಿಕುಮಾರ್ ವಿರುದ್ಧ SC-ST ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಇದೇ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಎಂಎಲ್‌ಸಿ ಎನ್ ರವಿಕುಮಾರ್ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು. 'ಕಲಬುರಗಿ ಚಲೋ' ಪ್ರತಿಭಟನೆ ವೇಳೆ ಮಾತನಾಡಿದ್ದ ರವಿಕುಮಾರ್, ಕಲಬುರಗಿ ಡಿಸಿ ಪಾಕಿಸ್ತಾನದಿಂದ ಬಂದಿದ್ದಾರೋ ಅಥವಾ ಇಲ್ಲಿ ಐಎಎಸ್ ಅಧಿಕಾರಿಯೋ ನನಗೆ ತಿಳಿದಿಲ್ಲ ಎಂದು ಹೇಳಿದ್ದರು.

4. ವನ್ಯಜೀವಿ ರಾಯಭಾರಿಯಾಗಿ ಅನಿಲ್ ಕುಂಬ್ಳೆ ನಾಮನಿರ್ದೇಶನ

ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾಗಿ ನಾಮನಿರ್ದೇಶನ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಖಂಡ್ರೆ, ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನಿಲ್ ಕುಂಬ್ಳೆ ಅವರು, ವಿಶ್ವದಾದ್ಯಂತ ಖ್ಯಾತಿ ಹೊಂದಿದ್ದು, ಅರಣ್ಯ ಸಂರಕ್ಷಣೆ, ಅರಣ್ಯ ಅಭಿವೃದ್ಧಿ, ಮರಗಳ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನೆರವಾಗುತ್ತಾರೆ ಎಂದರು. ಅನಿಲ್ ಕುಂಬ್ಳೆ ಅವರಿಗೆ ವನ್ಯಜೀವಿಗಳ ಬಗ್ಗೆ ಅಪಾರ ಕಾಳಜಿ ಇದೆ. ಹಾಗಾಗಿ ಯಾವುದೇ ಸಂಭಾವನೆ ಪಡೆಯದೆ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ ಎಂದು ಖಂಡ್ರೆ ತಿಳಿಸಿದರು.

5. ನಟ ಶ್ರೀಧರ್ ನಾಯಕ್ ನಿಧನ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಕಿರುತೆರೆ ನಟ ಶ್ರೀಧರ್ ನಾಯಕ್ ಇಂದು ನಿಧನರಾಗಿದ್ದಾರೆ. ಜೀ ಕನ್ನಡದ 'ಪಾರು' ಧಾರಾವಾಹಿ, ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಅಂತಹ ಸಿನಿಮಾದಲ್ಲಿ ನಟಿಸಿದ್ದ 47 ವರ್ಷದ ಶ್ರೀಧರ್ ನಾಯಕ್ ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್ ನಂತರ ಗಂಭೀರ ಗಾಯಿಲೆಯಿಂದ ಬಳಲುತ್ತಿದ್ದು ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಶ್ರೀಧರ್ ಹಣ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಅದರಂತೆ ಕಿರುತೆರೆ ತಾರೆಯರು ಹಾಗೂ ಜನರು ಇವರ ಪರಿಸ್ಥಿತಿಯನ್ನು ನೋಡಿ ನೆರವನ್ನು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com